ಪಾಲಿಕೆ ಸದಸ್ಯರ ಅಧ್ಯಯನ ಪ್ರವಾಸಕ್ಕೆ ಅಪಸ್ವರ!

28manju8
Published on

ಬೆಳಗಾವಿ: ಮಹಾನಗರ ಪಾಲಿಕೆಯ ವಿವಿಧ ವಾರ್ಡ್​ಗಳಲ್ಲಿ ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಮಾಡಿಸುವ ಸಾಮರ್ಥ್ಯವಿರದ ಪಾಲಿಕೆ ಸದಸ್ಯರು ಸ್ವಚ್ಛತೆ ಅಧ್ಯಯನದ ಹೆಸರಿನಲ್ಲಿ ಹೊರರಾಜ್ಯದ ಪ್ರವಾಸಕ್ಕೆ ಹೋಗಿದ್ದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಾಲಿಕೆಯ 35ಕ್ಕೂ ಅಧಿಕ ಸದಸ್ಯರು ಇತರ ನಗರಗಳ ಅಭಿವೃದ್ಧಿ ಮಾದರಿ ಪರಿಶೀಲಿಸುವ ಉದ್ದೇಶದಿಂದ ಮಧ್ಯಪ್ರದೇಶದ ಇಂದೋರ ನಗರದ ಪ್ರವಾಸಕ್ಕೆ ತೆರಳಿದ್ದಾರೆ. ಬೆಳಗಾವಿ ನಗರದಲ್ಲಿ ಜನರಿಗೆ ಸರಿಯಾಗಿ ಮೂಲಸೌಕರ್ಯ ಕಲ್ಪಿಸದೆ, ರಸ್ತೆ ಬದಿಗಳಲ್ಲಿ ಹಾಕುತ್ತಿರುವ ಮಾಂಸದ ತ್ಯಾಜ್ಯದಿಂದಾಗುವ ಬೀದಿನಾಯಿಗಳ ಹಾವಳಿ ತಪ್ಪಿಸದೆ, ಮಳೆಗಾಲದಲ್ಲಿ ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗುವ, ರಸ್ತೆ ಮೇಲೂ ನೀರು ನಿಲ್ಲುವಂತಹ ಸಮಸ್ಯೆಗೆ ಪರಿಹಾರ ಕಂಡುಕೊಳ್ಳದೆ ಸಾರ್ವಜನಿಕರ ತೆರಿಗೆ ಹಣದಲ್ಲಿ ಪ್ರವಾಸ ಕೈಗೊಂಡಿರುವುದು ಸರಿಯಲ್ಲ.

ಈ ಹಿಂದಿನ ಪ್ರವಾಸದಿಂದ ಅವರು ಯಾವುದೇ ಬದಲಾವಣೆಯೂ ತಂದಿಲ್ಲ. ಜತೆಗೆ ಅಧ್ಯಯನ ಕುರಿತು ವರದಿ ಕೂಡ ಸಲ್ಲಿಸಲಿಲ್ಲ ಎಂದು ಪಾಲಿಕೆ ಮಾಜಿ ಸದಸ್ಯರು ದೂರಿದ್ದಾರೆ.

ಸ್ವಚ್ಛತೆ ವಿಷಯದಲ್ಲಿ ದೇಶದಲ್ಲೇ ಇಂದೋರ್​ ಪ್ರಥಮ ಸ್ಥಾನ ಹೇಗೆ ಪಡೆದುಕೊಂಡಿದೆ ಎಂದು ಹಾಗೂ ಕಸ ವಿಲೇವಾರಿ ಮಾದರಿಗಳ ಅಧ್ಯಯನಕ್ಕಾಗಿ ಪಾಲಿಕೆ ಸದಸ್ಯರು ಪ್ರವಾಸಕ್ಕೆ ತೆರಳಿದ್ದಾರೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ವಿಮಾನ ಮೂಲಕ ಪ್ರಯಾಣ: ಮಹಾನಗರ ಪಾಲಿಕೆ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರಿಗೆ ಅಧ್ಯಯನ ಪ್ರವಾಸ ಕೈಗೊಳ್ಳಲು ಸೂಚಿಸಲಾಗಿತ್ತು. ಮೇಯರ್​, ಉಪಮೇಯರ್​ ಹಾಗೂ ವಿರೋಧ ಪಕ್ಷದ ನಾಯಕರು ಚರ್ಚಿಸಿ ಎಲ್ಲ ಸದಸ್ಯರು ಒಟ್ಟಿಗೆ ಅ.27, 28 ಮತ್ತು 29ರಂದು ವಿಮಾನದ ಮೂಲಕ ಇಂದೋರ್​ ಪ್ರವಾಸ ಕೈಗೊಂಡಿದ್ದು, ಪ್ರತಿಯೊಬ್ಬರಿಗೂ 93 ಸಾವಿರ ರೂ. ಖರ್ಚು ಮಾಡಲಾಗಿದೆ. ಕೆಲ ಸದಸ್ಯರು ಪ್ರವಾಸಕ್ಕೆ ತೆರಳಿಲ್ಲ. ಮುಂಬರುವ ತಿಂಗಳು ಪಾಲಿಕೆ ಅಧಿಕಾರಿಗಳಿಗೆ ಅಧ್ಯಯನ ಪ್ರವಾಸ ಆಯೋಜಿಸಲಾಗುತ್ತಿದೆ ಎಂದು ಪಾಲಿಕೆ ಆಯುಕ್ತೆ ಶುಭ ಬಿ. ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net