ನಗರಸಭೆ ಅಧಿಕಾರಿ ಲೋಕಾ ಬಲೆಗೆ

Published on

ಇ-ಖಾತೆ ಮಾಡಲು ₹60 ಸಾವಿರ ಲಂಚಕ್ಕೆ ಬೇಡಿಕೆ- ವಾಟರ್‌ಮನ್ ಮಧ್ಯವರ್ತಿ ಇಬ್ಬರ ವಶ

ಗೌರಿಬಿದನೂರು : ಇ-ಖಾತೆ ಮಾಡಿಕೊಡುವ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನಿಂದ 15 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ನಗರಸಭೆ ಕಂದಾಯ ಅಧಿಕಾರಿ ಹಾಗೂ ಸಿಬ್ಬಂದಿ ಲೋಕಾಯುಕ್ತ ಬಲೆಗೆ ಸಿಕ್ಕಿ ಬಿದ್ದಿದ್ದಾರೆ. ಕಂದಾಯ ಅಧಿಕಾರಿ ನಾರಾಯಣ್ ಹಾಗೂ ವಾಟರ್‌ಮನ್ ಕೃಷ್ಣಮೂರ್ತಿ ಲೋಕಾಯುಕ್ತ ಬಲೆಗೆ ಬಿದ್ದವರು.

ವೇದಲವೇಣಿ ಗ್ರಾಮ ಈಗ ನಗರಸಭೆ ವ್ಯಾಪ್ತಿಗೆ ಒಳಪಟ್ಟಿದೆ. ಹಾಗಾಗಿ ಆ ವ್ಯಾಪ್ತಿಯಲ್ಲಿರುವ ತಾಯಿ ಹಾಗೂ ಸಹೋದರಿಯರ ನಿವೇಶನಕ್ಕೆ ಒಟ್ಟು 6 ಖಾತೆ ಇ-ಖಾತೆ ಮಾಡಿಕೊಂಡುವಂತೆ ನಗರದ ಹೊರವಲಯದ ಸಿರಗುಪ್ಪ ಸಕ್ಕರೆ ಕಾರ್ಖಾನೆ ಬಳಿಯ ವಾಸಿ ಜುಲ್ಫಿಕರ್ ಅಲಿ ಭುಟ್ಟೋ ಎಂಬುವರು ಎರಡು ತಿಂಗಳ ಹಿಂದೆ ನಗರಸಭೆಗೆ ಮನವಿ ಸಲ್ಲಿಸಿದ್ದರು. ಪ್ರತಿ ಖಾತೆಗೆ ತಲಾ 10 ಸಾವಿರ ರೂ.ನಂತೆ 60 ಸಾವಿರ ರೂ. ಲಂಚ ನೀಡುವಂತೆ ನಾರಾಯಣ್ ಬೇಡಿಕೆ ಇಟ್ಟಿದ್ದರು. ಬಿಲ್ ಕಲೆಕ್ಟರ್ ಎಂದು ಹೇಳಿಕೊಳ್ಳುವ ವಾಟರ್‌ಮನ್ ಕೃಷ್ಣಮೂರ್ತಿ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದ. ಅಂತಿಮವಾಗಿ 50 ಸಾವಿರ ರೂ.ಗಳಿಗೆ ಒಪ್ಪಿಕೊಳ್ಳಲಾಗಿತ್ತು.

ಲಂಚಕ್ಕೆ ಬೇಡಿಕೆಯಿಟ್ಟಿರುವ ಕುರಿತು ಅರ್ಜಿದಾರ ಜುಲ್ಫಿಕರ್ ಅಲಿ ಭುಟ್ಟೋ ಅವರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಗುರುವಾರ 15 ಸಾವಿರ ರೂ. ಮುಂಗಡ ಹಣ ಪಡೆಯುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ನಾರಾಯಣ್ ಹಾಗೂ ಕೃಷ್ಣಮೂರ್ತಿಯನ್ನು ವಶಕ್ಕೆ ಪಡೆದರು.

ಲೋಕಾಯುಕ್ತ ಎಸ್‌ಪಿ ಆಂಥೋನಿ ಜಾನ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ವೀರೇಂದ್ರ ಕುಮಾರ್ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಸಿಪಿಐಗಳಾದ ಜಿ. ಶಿವಪ್ರಸಾದ್, ಮೋಹನ್ ಹೆಡ್ಡನ್, ಪೊಲೀಸ್ ಸಿಬ್ಬಂದಿಗಳಾದ ಚೌಡರೆಡ್ಡಿ, ಸತೀಶ್, ಅರುಣ್‌ಕುಮಾರ್, ಕೆ.ಪಿ.ನಾಗರಾಜ್, ಸಂತೋಷ್ ಕುಮಾರ್, ದಿಲೀಪ್, ರಮೇಶ್ ಮೂರ್ತಿ, ಮಂಜುಳಾ ಇತರರ ತಂಡ ದಾಳಿ ನಡೆಸಿತು. ಆರೋಪಿಗಳಿಬ್ಬರನ್ನು ವಶಕ್ಕೆ ಪಡೆದು ವೈದ್ಯಕೀಯ ತಪಾಸಣೆ ನಡೆಸಿ ಬಂಧಿಸಲಾಗಿದೆ.

ನಗರಸಭೆ ನಿಜಬಣ್ಣ ಬಯಲು

ಖಾತೆ ವಿಚಾರದಲ್ಲಿ ನಗರಸಭೆಯಲ್ಲಿ ಯಾವುದೇ ಅಕ್ರಮ, ಅವ್ಯವಹಾರ ನಡೆಯುತ್ತಿದ್ದರೆ ನೇರವಾಗಿ ದೂರು ಸಲ್ಲಿಸಿದರೆ ಅಗತ್ಯ ಕ್ರಮ ಜರುಗಿಸಲಾಗುವುದು ಎಂದು ಶಾಸಕ ಕೆ.ಎಚ್.ಪುಟ್ಟಸ್ವಾಮಿ ಗೌಡ ನಗರಸಭೆಯ ಪ್ರತಿ ಕಂದಾಯ ಅದಾಲತ್‌ನಲ್ಲಿ ಹೇಳುತ್ತಾರೆ. ಖಾತೆ ವಿಚಾರದಲ್ಲಿ ನಡೆಯುವ ಅಕ್ರಮಗಳಿಗೆ ಕಡಿವಾಣ ಹಾಕಲೆಂದೇ ಕಂದಾಯ ಅದಾಲತ್ ನಡೆಸಿ ನೇರವಾಗಿ ಫಲಾನುಭವಿಗಳಿಗೆ ಇ-ಖಾತೆ ವಿತರಿಸಲಾಗುತ್ತಿದೆ. ಆದರೆ ಈಗ ಲೋಕಾಯುಕ್ತ ದಾಳಿ ಪ್ರಕರಣ ನಗರಸಭೆಯ ನಿಜಬಣ್ಣ ಬಯಲು ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net