

ಹುಣಸೂರು: ಹುಣಸೂರು ನಗರಸಭೆ ಕಚೇರಿಯ ಕೌನ್ಸಿಲ್ ಸಭಾಂಗಣವನ್ನು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣವೆಂದು ಮರುನಾಮಕರಣ ಮಾಡಲಾಯಿತು.
ಸೋಮವಾರ ಶಾಸಕ ಜಿ.ಡಿ.ಹರೀಶ್‌ಗೌಡ ಸಭಾಂಗಣದ ನಾಮಫಲಕವನ್ನು ಅನಾವರಣಗೊಳಿಸುವ ಮೂಲಕ ಮರುನಾಮಕರಣಕ್ಕೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, 15 ದಿನಗಳ ಹಿಂದೆ ನಡೆದ ನಗರಸಭೆ ಸಾಮಾನ್ಯಸಭೆಯಲ್ಲಿ ನಗರಸಭಾ ಸದಸ್ಯ ಕೃಷ್ಣರಾಜ ಗುಪ್ತ ನಗರಸಭೆ ಸಭಾಂಗಣವನ್ನು ಅಂಬೇಡ್ಕರ್ ಸಭಾಂಗಣವೆಂದು ಹೆಸರಿಸುವ ಮೂಲಕ ಸಂವಿಧಾನಶಿಲ್ಪಿಯನ್ನು ಸ್ಮರಿಸೋಣವೆಂದು ಪ್ರಸ್ತಾವನೆ ಸಲ್ಲಿಸಿದಾಗ ಇಡೀ ಸಭೆ ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿತ್ತು. ಅದರಂತೆ ಇಂದು ಅಂಬೇಡ್ಕರ್ ಜಯಂತಿಯಂದು ಸಭಾಂಗಣದ ಹೆಸರನ್ನು ಮರುನಾಮಕರಣ ಮಾಡುವ ಮೂಲಕ ನಗರಸಭೆ ಇತಿಹಾಸದಲ್ಲೇ ಸ್ಮರಣೀಯ ದಿನವನ್ನಾಗಿಸಿದೆ. ಅಂಬೇಡ್ಕರ್ ಆಶಯಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವ ಕಾರ್ಯವನ್ನು ನಾವ್ಯಾರು ಮಾಡುತ್ತಿಲ್ಲ. ಬರೀ ಬಾಯಿ ಮಾತಿನಿಂದ ಮಾತ್ರವಲ್ಲ, ಹೃದಯಾಂತರಾಳದಿಂದ ಅಂಬೇಡ್ಕರ್ ಆಶಯಗಳನ್ನು ಅರಿತು ಅಪ್ಪಿಕೊಳ್ಳಬೇಕು, ಅದನ್ನು ಒಪ್ಪಿಕೊಳ್ಳಬೇಕು. ಆಗ ಮಾತ್ರ ಈ ಭಾರತ ಅಂಬೇಡ್ಕರ್ ಭಾರತವಾಗಲು ಸಾಧ್ಯವೆಂದರು.
ನಗರಸಭಾ ಸದಸ್ಯ ಕೃಷ್ಣರಾಜ ಗುಪ್ತಾ ಮಾತನಾಡಿ, ನನ್ನ ಪ್ರಸ್ತಾವನೆಗೆ ಶಾಸಕ ಹರೀಶ್‌ಗೌಡ ಸಕಾರಾತ್ಮವಾಗಿ ಸ್ಪಂದಿಸಿದರು. ಎಲ್ಲ ಸದಸ್ಯರು, ಅಧಿಕಾರಿಗಳ ಸಹಕಾರದಿಂದ ಇದೀಗ ಸಭಾಂಗಾಣ ಅಂಬೇಡ್ಕರ್ ಸಭಾಂಗಣವಾಗಿದ್ದು, ನೆನಪಿನಲ್ಲಿ ಉಳಿಯುವಂತಹ ಕಾರ್ಯ ಮಾಡಿದ ಸಾರ್ಥಕತೆ ದೊರಕಿದೆ ಎಂದರು.
ನಗರಸಭಾಧ್ಯಕ್ಷ ಎಸ್.ಶರವಣ ಮಾತನಾಡಿ, ನನ್ನಂತಹ ಸೂಕ್ಷ್ಮಾತಿಸೂಕ್ಷ್ಮ ಸಮುದಾಯದ ವ್ಯಕ್ತಿ ನಗರಸಭೆ ಅಧ್ಯಕ್ಷನಾಗಲು ಶಾಸಕ ಹರೀಶ್‌ಗೌಡರ ಸಾಮಾಜಿಕ ಕಳಕಳಿ ಒಂದಡೆಯಾದರೆ, ಮತ್ತೊಂದಡೆ ಮಹಾನ್ ನಾಯಕ ಅಂಬೇಡ್ಕರ್‌ರ ಸಂವಿಧಾನವೇ ಮೂಲ ಕಾರಣವಾಗಿದೆ ಎಂದು ಸ್ಮರಿಸಿದರು.
ಸಭೆಯಲ್ಲಿ ಉಪಾಧ್ಯಕ್ಷೆ ಆಶಾ ಕೃಷ್ಣನಾಯಕ, ಉಪವಿಭಾಗಾಧಿಕಾರಿ ಎಚ್.ಬಿ.ವಿಜಯಕುಮಾರ್, ತಹಸೀಲ್ದಾರ್ ಜೆ.ಮಂಜುನಾಥ್, ಪೌರಾಯುಕ್ತರಾದ ಕೆ.ಮಾನಸ, ಸದಸ್ಯ ಸತೀಶ್‌ಕುಮಾರ್, ಸ್ವಾಮಿಗೌಡ, ರಾಣಿ ಪೆರುಮಾಳ್, ದಲಿತ ಮುಖಂಡ ನಾಗರಾಜ ಮಲ್ಲಾಡಿ, ಬಸವಲಿಂಗಯ್ಯ, ನಿಂಗರಾಜ ಮಲ್ಲಾಡಿ, ವರದರಾಜು ಇತರರು ಇದ್ದರು.