ಹೆದ್ದಾರಿ ಬದಿ ಬಸ್‌ಸ್ಟ್ಯಾಂಡ್ ತೆರವು: ಪಾಲನೆಯಾಗದ ನಿರ್ಣಯ : ಪುರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರು ಕಿಡಿ

New Project (3)
Published on

ವಿಜಯವಾಣಿ ಸುದ್ದಿಜಾಲ ಬಂಟ್ವಾಳ

ಇಲ್ಲಿನ ಕೊಟ್ರಮಣಗಂಡಿ ಬಸ್ ತಂಗುದಾಣದಲ್ಲಿ ಬಸ್ ನಿಲುಗಡೆ, ಬಿ.ಸಿ.ರೋಡಿನ ಹೆದ್ದಾರಿ ಬದಿಯ ಬಸ್ ತಂಗುದಾಣ ತೆರವು ಸಹಿತ ಯಾವುದೇ ನಿರ್ಣಯ ಪಾಲನೆಯಾಗದ ಕುರಿತು ಸದಸ್ಯರು ಪಕ್ಷಬೇಧ ಮರೆತು ಆಕ್ರೋಶ ವ್ಯಕ್ತಪಡಿಸಿದ ವಿದ್ಯಾಮಾನ ಬುಧವಾರ ಬಂಟ್ವಾಳ ಪುರಸಭೆಯ ಸಾಮಾನ್ಯ ಸಭೆಯಲ್ಲಿ ನಡೆಯಿತು.

ಅಧ್ಯಕ್ಷ ವಾಸು ಪೂಜಾರಿ ಲೊರೆಟ್ಟೋ ಅಧ್ಯಕ್ಷತೆ ವಹಿಸಿದ್ದು, ಕೊಟ್ರಮಣಗಂಡಿ ಬಸ್ ತಂಗುದಾಣದಲ್ಲಿ ಬಸ್ ನಿಲುಗಡೆಗೊಳಿಸುವುದು. ಬಿ.ಸಿ.ರೋಡಿನ ಹೆದ್ದಾರಿ ಬದಿಯ ಬಸ್ ತಂಗುದಾಣ ತೆರವುಗೊಳಿಸುವುದು ಸಹಿತ ಕೈಗೊಂಡಿರುವ ನಿರ್ಣಯ ಆರು ತಿಂಗಳು ಪೂರೈಸಿದರೂ ಇನ್ನೂ ಕಾರ್ಯಗತವಾಗದ ಬಗ್ಗೆ ಸದಸ್ಯ ಗೋವಿಂದ ಪ್ರಭು ಅಸಮಾಧಾನ ವ್ಯಕ್ತಪಡಿಸಿದರು.

ಆಡಳಿತ ಪಕ್ಷದ ಸದಸ್ಯ ಶರ್ೀ ಧ್ವನಿಗೂಡಿಸಿ ನಿರ್ಣಯಕ್ಕೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಅಂದರೆ ಅವರು ನಿಮ್ಮ ಹಿಡಿತದಲ್ಲಿಲ್ಲವೇ ಎಂದು ಅಧ್ಯಕ್ಷರನ್ನೇ ಪ್ರಶ್ನಿಸಿದರಲ್ಲದೆ ಅವರಿಗೆ ನೋಟಿಸ್ ಜಾರಿಗೊಳಿಸಿ ಎಂದರು.

ವಿದ್ಯುದ್ದೀಪ ಅಳವಡಿಕೆಗೆ ಕ್ರಮ: ಕೊಟ್ರಮಣಗಂಡಿ ಬಸ್ ತಂಗುದಾಣದಲ್ಲಿ ಆಶ್ರಯ ಪಡೆದಿರುವ ವೃದ್ಧ ದಂಪತಿಯನ್ನು ಮಾತನಾಡಿಸಿ, ಅವರ ವಿವರ ಪಡೆದು ಅವರಿಗೆ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಮೂಡಿಗೆರೆ ಪುರಸಭಾಧ್ಯಕ್ಷರೊಂದಿಗೂ ಮಾತುಕತೆ ನಡೆಸಿರುವುದಾಗಿ ಅಧ್ಯಕ್ಷ ವಾಸು ಪೂಜಾರಿ ತಿಳಿಸಿದರು. ತಂಗುದಾಣದಲ್ಲಿ ಬೆಳೆದಿರುವ ಗಿಡಗಂಟಿ ಶುಚಿಗೊಳಿಸಲಾಗಿದೆ. ನೀರು ಹರಿದು ಹೋಗಲು ಚರಂಡಿ ಮಾಡಲಾಗಿದೆ. ಶೌಚಗೃಹ ರಿಪೇರಿ ಮಾಡಲಾಗಿದೆ. ವಿದ್ಯುದ್ದೀಪ ಅಳವಡಿಸಲು ಕ್ರಮ ಕೈಗೊಂಡು ಬಸ್ ನಿಲುಗಡೆಯಾಗುವ ನಿಟ್ಟಿನಲ್ಲಿ ಪೊಲೀಸ್ ಅಧಿಕಾರಿಕಾರಿಗಳ ಜತೆ ಮಾತನಾಡಲಾಗುವುದು ಎಂದರು.

ಬಿ.ಸಿ.ರೋಡು ಬಸ್ಸು ನಿಲ್ದಾಣದ ಬಳಿ ಇರುವ ಪ್ರಯಾಣಿಕರ ತಂಗುದಾಣ ತೆರವುಗೊಳಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಗೆ ಈ ವಾರವೇ ನೋಟಿಸ್ ನೀಡಲಾಗುವುದು ಎಂದು ಮುಖ್ಯಾಧಿಕಾರಿ ಮತ್ತಡಿ ತಿಳಿಸಿದರು.

ಸದಸ್ಯ ಗೋವಿಂದಪ್ರಭು ಈ ವಾಣಿಜ್ಯ ಸಂಕೀರ್ಣದಲ್ಲಿ ಬೃಹತ್ ಜಾಹೀರಾತು ಫಲಕ, ಕಟ್ಟಡದಲ್ಲಿ ಗಿಡ ಬೆಳೆದಿರುವುದು, ಖಾಸಗಿ ಬಸ್ ಒಂದು ಕಟ್ಟಡಕ್ಕೆ ಡಿಕ್ಕಿಯಾದರೂ ಪುರಸಭೆಯಿಂದ ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಶ್ನಿಸಿದರು. ಅಧಿಕಾರಿಗಳ ಬದಲಾವಣೆ ನಡೆದಾಗ ತಾಂತ್ರಿಕವಾಗಿ ಕೀ ಕೋಡ್ ಬದಲಾವಣೆಯಾಗುತ್ತದೆ. ಇದರ ನೆಪದಲ್ಲಿ ವ್ಯವಸ್ಥೆಯಲ್ಲಿ ಬುಡ ಮೇಲಾಗಬಾರದು, ಅದನ್ನು ನಿಗದಿತ ಸಮಯದಲ್ಲಿ ಸರಿಪಡಿಸಿಕೊಳ್ಳಬೇಕು ಎಂದು ಸದಸ್ಯರು ತಿಳಿಸಿದರು. ಮುಂದಿನ ಏಳು ದಿನಗಳ ಒಳಗಾಗಿ ಇದನ್ನು ಸರಿಪಡಿಸುವುದಾಗಿ ಮುಖ್ಯಾಧಿಕಾರಿ ಮತ್ತಡಿ ಭರವಸೆ ನೀಡಿದರು.

ಅನಧಿಕೃತ ಗೂಡಂಗಡಿ, ಅಂಗಡಿ ತೆರವು ಕಾರ್ಯಾಚಾರಣೆ, ಪುರಸಭಾ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಉಪಟಳ, ದಾರಿದೀಪದ ವ್ಯವಸ್ಥೆ ಮೊದಲಾದವ ವಿಷಯದ ಬಗ್ಗೆ ಚರ್ಚೆ ನಡೆಯಿತು.

ಇಂಜಿನಿಯರ್ ಡಿಮೆಲ್ಲೋ ಸದಸ್ಯ ಹರಿಪ್ರಸಾದ್, ಸಿದ್ದೀಕ್ ಉಪಸ್ಥಿತರಿದ್ದರು.

ಇಣುಕಿ ನೋಡುವ ಪರಿಸ್ಥಿತಿ

ಕಳೆದ ಆರು ತಿಂಗಳಿನಿಂದ ಚಾಲಕರ ಸಹಿತ ವಿವಿಧ ವಿಷಯದ ಟೆಂಡರ್‌ಗೆ ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕರು, ಜಿಲ್ಲಾಡಳಿತ ಆಡಳಿತಾತ್ಮಕ ಮಂಜೂರಾತಿ ನೀಡುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವ ಬಗ್ಗೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದಾಗ, ಸದ್ಯ ಈ ಕಡತ ಯೋಜನಾ ನಿರ್ದೇಶಕರಲ್ಲಿದೆ, ಕೀ ರಿನಿವಲ್ ಆಗಬೇಕೆಂದು ಇಂಜಿನಿಯರ್ ಡೊಮೆನಿಕ್ ಡಿಮೆಲ್ಲೋ ಉತ್ತರ ನೀಡಿದರು. ಇದರಿಂದ ತೃಪ್ತರಾಗದ ಸದಸ್ಯರು ಅವರನ್ನು ತರಾಟೆಗೂ ತೆಗೆದುಕೊಂಡರು.

ಗೆದ್ದಲು ಹಿಡಿದ ಯಂತ್ರೋಪಕರಣ

ಕಂಚಿನಡ್ಕ ಪದವು ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಕೋಟ್ಯಾಂತರ ರೂ.ವೆಚ್ಚದಲ್ಲಿ ಅಳವಡಿಸಲಾದ ಎಲ್ಲ ಬಗೆಯ ಯಂತ್ರೋಪಕರಣ ಸದುಪಯೋಗವಾಗದೆ ಗೆದ್ದಲು ಹಿಡಿದಿದೆ. ಅಧಿಕಾರ ಸ್ವೀಕರಿಸಿದ ಬಳಿಕ ಒಮ್ಮೆಯಾದರೂ ಭೇಟಿ ನೀಡಿ ಅಲ್ಲಿನ ಸ್ಥಿತಿ ಪರಿಶೀಲಿಸಿದ್ದಿರಾ ಎಂದು ಸದಸ್ಯ ಗೋವಿಂದ ಪ್ರಭು ಮುಖ್ಯಾಧಿಕಾರಿಯನ್ನು ಪ್ರಶ್ನಿಸಿದರಲ್ಲದೆ ಅಲ್ಲಿ ಶವ ತಂದು ಹೂತರೂ ಗೊತ್ತಾಗದ ಪರಿಸ್ಥಿತಿ ಇದೆ. ಅದಕ್ಕೊಂದು ತನಿಖೆಗೆ ಪ್ರತ್ಯೇಕ ಎಸ್‌ಐಟಿ ರಚಿಸಬೇಕಾಗಿ ಬರಬಹುದು ಎಂದು ಹಾಸ್ಯ ಚಟಾಕಿ ಹಾರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net