

ಗೌರಿಬಿದನೂರು : ನಗರದ ಸ್ವಚ್ಛತೆ ಹಾಗೂ ಸೌಂದರ್ಯ ಹೆಚ್ಚಿಸಲು ಸ್ಥಳೀಯ ನಗರಸಭೆ ಪಣ ತೊಟ್ಟಿದ್ದು, ಕಸ ಸಂಗ್ರಹಕ್ಕೆ ಹೆಚ್ಚುವರಿ ವಾಹನ ಖರೀದಿಸಿದೆ. ವಾಹನಗಳು ಈಗಾಗಲೆ ನಗರಸಭೆಗೆ ಬಂದು ತಲುಪಿವೆ.
ನಗರಸಭೆಯ 31 ವಾರ್ಡ್‌ಗಳಲ್ಲಿ ಕಸ ವಿಲೇವಾರಿಗೆ ಪ್ರಸ್ತುತ 6 ಮಿನಿ ಟಿಪ್ಪರ್ ಆಟೋಗಳು, ಮೂರು ಟ್ರ್ಯಾಕ್ಟರ್ ಹಾಗೂ ಒಂದು ಜೆಟ್ಟಿಂಗ್ ಯಂತ್ರ, ವೇಸ್ಟ್ ಕಂಪ್ಯಾಕ್ಟರ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಐದು ವಾರ್ಡ್‌ಗೆ ಒಂದರಂತೆ 6 ಮಿನಿ ಟಿಪ್ಪರ್‌ಗಳನ್ನು ಪ್ರತಿದಿನ ಬಳಕೆ ಮಾಡಿಕೊಳ್ಳಲಾಗುತ್ತಿದೆ. ವಾಹನಗಳು ಹಾಗೂ ಸಿಬ್ಬಂದಿ ಕೊರತೆ ಕಾರಣ ಸ್ವಚ್ಛತೆ ಕಾಪಾಡುವುದು ನಗರಸಭೆಗೆ ಸವಾಲಾಗಿದೆ. ಹಾಗಾಗಿ ಸಮರೋಪಾದಿಯಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲು ಹೆಚ್ಚುವರಿ ವಾಹನಗಳನ್ನು ಖರೀದಿಸಲಾಗಿದೆ.
ಕಸ ವಿಲೇವಾರಿ ವಾಹನಗಳ ಆಗಮನ
ನಗರದಲ್ಲಿ ಸ್ವಚ್ಛತೆ ಕಾಪಾಡಲು ಹೆಚ್ಚುವರಿ ವಾಹನಗಳು ಅಗತ್ಯವಿರುವ ಬಗ್ಗೆ ಪೌರಾಯುಕ್ತೆ ಡಿ.ಎಂ.ಗೀತಾ ಅವರು ಶಾಸಕರು ಹಾಗೂ ಮೇಲಧಿಕಾರಿಗಳ ಗಮನಕ್ಕೆ ತಂದಿದ್ದರು. ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಅವರು ಸರ್ಕಾರದಮಟ್ಟದಲ್ಲಿ ಪ್ರಯತ್ನಿಸಿದ್ದರ ಫಲವಾಗಿ ಹೆಚ್ಚುವರಿಯಾಗಿ 8 ಆಟೋ ಟಿಪ್ಪರ್, ಎರಡು ಟ್ರ್ಯಾಕ್ಟರ್, ಒಂದು ಜೆಸಿಬಿ ಯಂತ್ರಕ್ಕೆ ಸರ್ಕಾರ ಮಂಜೂರಾತಿ ನೀಡಿತ್ತು. ಈಗ ಹೊಸ ವಾಹನಗಳು ನಗರಸಭೆಗೆ ಆಗಮಿಸಿವೆ.
ಹೆಚ್ಚುವರಿ ಸಿಬ್ಬಂದಿ ಅಗತ್ಯ
ಹಳೆಯ 6 ಹಾಗೂ ಹೊಸ 8 ಟಿಪ್ಪರ್ ಮಿನಿ ಆಟೋಗಳು ಸೇರಿ ಒಟ್ಟು 14 ವಾಹನಗಳನ್ನು ಪ್ರತಿ ವಾರ್ಡ್‌ಗೆ 1 ವಾಹನದಂತೆ ಬಳಸಬಹುದಾಗಿದೆ. ಆದರೆ, ಹೊಸ ವಾಹನಗಳ ನಿರ್ವಹಣೆಗೆ ಹೆಚ್ಚುವರಿ ನೌಕರರ ಅಗತ್ಯವಿದೆ. ಹೀಗಾಗಿ ಹೊರಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿ ನೇಮಕ ಮಾಡಿಕೊಳ್ಳಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಮಂಜೂರಾತಿಗಾಗಿ ಕಾಯಲಾಗುತ್ತಿದೆ.
ಸಾರ್ವಜನಿಕರ ಸಹಕಾರ ಅಗತ್ಯ
ನಗರದಲ್ಲಿ ಸಂಗ್ರಹವಾಗುವ ಕಸವನ್ನು ವೈಜ್ಞಾನಿಕವಾಗಿ ಸಂಗ್ರಹಿಸುವ ಉದ್ದೇಶದಿಂದ ಇಡಗೂರು ಬಳಿ ತ್ಯಾಜ್ಯ ಸಂಸ್ಕರಣ ಘಟಕ ಸ್ಥಾಪಿಸಲಾಗಿದೆ. ಒಬ್ಬ ಘಟಕದ ಮೇಲ್ವಿಚಾರಕ, ಒಬ್ಬ ಸೆಕ್ಯೂರಿಟಿ ಗಾರ್ಡ್, ಹತ್ತು ಜನರನ್ನು ಕಸ ವಿಲೇವಾರಿಗೆ ನೇಮಕ ಮಾಡಲಾಗಿದೆ. ನಗರಸಭೆ ಇಷ್ಟೆಲ್ಲಾ ಪ್ರಯತ್ನಿಸುತ್ತಿದ್ದರೂ ಕಸ ಸಂಗ್ರಹದ ವಿಚಾರದಲ್ಲಿ ಜನ ಸಹಕಾರ ನೀಡುತ್ತಿಲ್ಲ. ಶೇ.70 ಮಂದಿ ಮಾತ್ರ ಮನೆ ಬಳಿಗೆ ಬರುವ ವಾಹನಗಳಿಗೆ ಕಸ ಹಾಕುತ್ತಿದ್ದಾರೆ. ಉಳಿದ ಶೇ.30 ಮಂದಿ ಎಲ್ಲೆಂದರಲ್ಲಿ ಖಾಲಿ ಜಾಗಗಳಲ್ಲಿ ಕಸ ಎಸೆಯುತ್ತಿದ್ದಾರೆ. ಅನೇಕರು ಹಸಿ ಮತ್ತು ಒಣ ಕಸವನ್ನು ಬೇರ್ಪಡಿಸಿ ನೀಡುತ್ತಿಲ್ಲ. ಈ ಬಗ್ಗೆ ನಗರಸಭೆ ಎಷ್ಟೇ ಜಾಗೃತಿ ಮೂಡಿಸಿದರೂ ಪ್ರಯೋಜನವಾಗುತ್ತಿಲ್ಲ.
ನಗರದ ಸ್ವಚ್ಛತೆ ಮತ್ತು ಸೌಂದರ್ಯ ಕಾಪಾಡುವ ನಿಟ್ಟಿನಲ್ಲಿ ನಗರಸಭೆ ಸಾಕಷ್ಟು ಶ್ರಮಿಸುತ್ತಿದೆ. ಆದರೆ, ಸಾರ್ವಜನಿಕರ ಸಹಕಾರವಿಲ್ಲದೆ ಯಾವುದೇ ಪ್ರಯತ್ನ ಯಶಸ್ವಿಯಾಗುವುದಿಲ್ಲ. ಹಾಗಾಗಿ ನಗರದ ಸ್ವಚ್ಛತೆ ಕಾಪಾಡಲು ಸಾರ್ವಜನಿಕರು ನಗರಸಭೆ ಜತೆ ಕೈ ಜೋಡಿಸಬೇಕು.
-ಡಿ.ಎಂ.ಗೀತಾ ಪೌರಾಯುಕ್ತೆ
ನಗರಸಭೆಯ ಮನವಿಗೆ ಸ್ಪಂದಿಸಿ ಶಾಸಕರು ಸರ್ಕಾರದ ಮೇಲೆ ಒತ್ತಡ ಹೇರಿ ಹೆಚ್ಚುವರಿ ವಾಹನಗಳನ್ನು ಮಂಜೂರು ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೌರಕಾರ್ಮಿಕರು ನಗರಸಭೆಯ ಸ್ವಚ್ಛತೆಗೆ ಸಾಕಷ್ಟು ಶ್ರಮಿಸುತ್ತಿದ್ದಾರೆ. ಜನತೆ ಸಹಕಾರ ನೀಡಬೇಕು.
-ಲಕ್ಷ್ಮೀನಾರಾಯಣಪ್ಪ ನಗರಸಭೆ ಅಧ್ಯಕ್ಷ
ಜನ ಹೆಚ್ಚು ಶ್ರಮ ಪಡಬೇಕಿಲ್ಲ. ಮನೆಯಲ್ಲಿ ಉತ್ಪತ್ತಿಯಾಗುವ ಒಣ ಹಾಗೂ ಹಸಿ ಕಸವನ್ನು ಬೇರ್ಪಡಿಸಿ ಮನೆ ಬಳಿಗೆ ಬರುವ ವಾಹನಗಳಿಗೆ ನೀಡಿದರೆ ಸಾಕು. ನಗರದ ಸ್ವಚ್ಛತೆ ಕಾಪಾಡಲು ದೊಡ್ಡ ಕೊಡುಗೆ ನೀಡಿದಂತಾಗುತ್ತದೆ.
-ನವೀನ್ ಆರೋಗ್ಯ ನಿರೀಕ್ಷಕ