

ಕೊಳ್ಳೇಗಾಲ: ಕೊಳ್ಳೇಗಾಲ ನಗರಸಭೆ ವ್ಯಾಪ್ತಿಯಲ್ಲಿ ಕೆಟ್ಟು ನಿಂತಿರುವ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ (ಆರ್.ಒ. ಪ್ಲಾಂಟ್) ಗುರುವಾರ ನಗರಸಭೆ ಪೌರಾಯುಕ್ತ ಎ.ರಮೇಶ್ ಖುದ್ದು ಭೇಟಿ ನೀಡಿ ಪರಿಶೀಲಿಸಿದರು.
ಜನರಿಗೆ ಸಿಗುತ್ತಿಲ್ಲ ಶುದ್ಧ ಕುಡಿಯುವ ನೀರು ಎಂಬ ಶೀರ್ಷೀಕೆಯಡಿ ವಿಜಯವಾಣಿ ಪತ್ರಿಕೆಯಲ್ಲಿ ಗುರುವಾರ ಪ್ರಕಟವಾಗಿದ್ದ ವರದಿಗೆ ಎಚ್ಚೆತ್ತ ನಗರಸಭೆಯ ಪೌರಾಯುಕ್ತ ಎ.ರಮೇಶ್ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಸುಸ್ಥಿತಿಯಲ್ಲಿರುವ ಆರ್.ಒ ಪ್ಲಾಂಟ್, ಕೆಟ್ಟು ನಿಂತಿರುವ ಆರ್.ಒ. ಪ್ಲಾಂಟ್‌ಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದು, ತಿಂಗಳುಗಟ್ಟಲ್ಲೆ ನೀರಿನ ಘಟಕ ಕೆಲಸ ಮಾಡದಿದ್ದರೂ ಏಕೆ ನನ್ನ ಗಮನಕ್ಕೆ ತಂದಿಲ್ಲ ಎಂದು ಇಂಜಿನಿಯರ್ ಲಕ್ಷ್ಮೀ ಅವರ ವಿರುದ್ಧ ಅಸಮಾಧಾನ ಹೊರ ಹಾಕಿದ್ದಲ್ಲದೆ ಸ್ಥಗಿತಗೊಂಡಿರುವ ನೀರಿನ ಘಟಕಗಳನ್ನು ರಿಪೇರಿ ಮಾಡಿಸುವ ಸಂಬಂಧ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಬಗ್ಗೆ ವಿಜಯವಾಣಿಯೊಂದಿಗೆ ಪೌರಾಯುಕ್ತ ಎ.ರಮೇಶ್ ಮಾತನಾಡಿ, 21 ಶುದ್ಧ ಕುಡಿಯುವ ನೀರಿನ ಘಟಕಕ್ಕೂ ಭೇಟಿ ನೀಡಿದ್ದೇನೆ. 9 ನೀರಿನ ಘಟಕಗಳು ಕೆಟ್ಟು ನಿಂತಿದೆ. ಕೆಲವು ಕಡೆ ಆರ್.ಒ ಪ್ಲಾಂಟ್ ನೀರನ್ನು ಬಳಕೆ ಮಾಡದ ಕಾರಣ ಸ್ಥಗಿತಗೊಳಿಸಿ ಸಮಸ್ಯೆ ಆಗಿತ್ತು. ಆಗಾಗಿ ಅಧಿಕಾರಿಗಳಿಗೆ ಈ ಕೂಡಲೇ ಕೆಟ್ಟಿರುವ ಎಲ್ಲ ಪ್ಲಾಂಟ್‌ಗಳು ಸುಸ್ಥಿತಿಗೆ ಬರಬೇಕೆಂದು ಸೂಚನೆ ನೀಡಿದ್ದೇನೆ. ಪ್ರಕಟಣೆ ಹೊರಡಿಸಿ ರಿಪೇರಿದಾರರು ದರಪಟ್ಟಿ ಸಲ್ಲಿಸಿದ ಬಳಿಕ ವರ್ಕ್ ಆರ್ಡರ್ ನೀಡಲಾಗುತ್ತದೆ. ನಿಗದಿತ ಸಮಯದೊಳಗೆ ರಿಪೇರಿ ಕಾರ್ಯ ಪೂರ್ಣಗೊಳಿಸುವಂತೆ ಸೂಚನೆ ನೀಡಲಾಗುತ್ತದೆ ಎಂದರು.
ಈ ವೇಳೆ ಎಲೆಕ್ಟ್ರಿಕಲ್ ಇಂಜಿನಿಯರ್ ಲಕ್ಷ್ಮೀ, ಕೀರ್ತನ ಹೈಡ್ರೋ ಪ್ಯೂರ್ ಸಿಸ್ಟಮ್ ಟೆಕ್ನಿಷಿಯನ್ ಕುಮಾರ್ ಇದ್ದರು.