ಪಾರ್ಕ್‌ಗಳ ಸ್ವಚ್ಛತೆಯಲ್ಲಿ ಪುರಸಭೆ ಆಡಳಿತ

FotoJet (2)
Published on

ಬಾಗೇಪಲ್ಲಿ : ಪುರಸಭೆ ವ್ಯಾಪ್ತಿಯಲ್ಲಿರುವ ಪಾರ್ಕ್‌ಗಳ ಸ್ವಚ್ಛತೆಗೆ ಮುಂದಾಗಿರುವ ಪುರಸಭೆ ಆಡಳಿತ ಸಾರ್ವಜನಿಕರಿಗೆ ವಾಯುವಿಹಾರ ಹಾಗೂ ಲಘು ವ್ಯಾಯಾಮಕ್ಕೆ ಅನುವು ಮಾಡಿಕೊಡಲು ಸನ್ನದ್ಧಗೊಂಡಿದೆ.
ಪುರಸಭೆ ವ್ಯಾಪ್ತಿಯಲ್ಲಿರುವ ಎಚ್.ಎನ್.ಪಾರ್ಕ್, ರೆಡ್ಡಿಕೆರೆ ಪಂಪ್‌ಹೌಸ್ ಬಳಿಯ ಪಾರ್ಕ್‌ಗೆ ಕಾಯಕಲ್ಪ ಇಲ್ಲದೆ ಸ್ವಚ್ಛತೆ ಮರೀಚಿಕೆಯಾಗಿ ಮುಳ್ಳಿನ ಗಿಡಗಂಟಿಗಳು ಬೆಳೆದು ನಿಂತಿದ್ದು, ಸಾರ್ವಜನಿಕರ ಬಳಕೆ ಬಾರದ ಸ್ಥಿತಿಯಲ್ಲಿದ್ದದ್ದನ್ನು ಮನಗಂಡು ಸ್ವಚ್ಛಗೊಳಿಸಲಾಗುತ್ತಿದೆ.
ಪಾರ್ಕ್ ಜಾಗಗಳು ಒತ್ತುವರಿಯಾಗದಂತೆ ಎಚ್ಚರವಹಿಸುವುದರ ಜತೆಗೆ ಸರ್ಕಾರಿ ರಜೆ ದಿನಗಳಲ್ಲಿ ಪಾರ್ಕ್‌ಗಳಿಗೆ ಅಭಿವೃದ್ಧಿ ಸ್ಪರ್ಶ ನೀಡಲಾಗುತ್ತಿದ್ದು, ಹೊಸ ಮೆರಗು ತರಲು ಪುರಸಭೆ ಆಡಳಿತ ಮುಂದಾಗಿದೆ.
ಪುರಸಭೆ ಮುಖ್ಯಾಧಿಕಾರಿ ಶ್ರೀನಿವಾಸ್ ಮಾತನಾಡಿ, ಗೌರಿ- ಗಣೇಶ ಹಬ್ಬದ ವೇಳೆ ಗಣೇಶ ಮೂರ್ತಿಗಳ ವಿಸರ್ಜನೆ ಸಮಯದಲ್ಲಿ ರೆಡ್ಡಿಕೆರೆ ಸಮೀಪ ಬಂದಾಗ ಪಂಪ್‌ಹೌಸ್ ಸುತ್ತ ಗಿಡಗಂಟಿಗಳಿಂದ ಆವೃತಗೊಂಡಿರುವ ಪಾರ್ಕ್ ಕಂಡುಬಂತು. ಪಾರ್ಕ್‌ನ ಸ್ಥಳವನ್ನು ವೀಕ್ಷಿಸಿದಾಗ ಚಿಣ್ಣರ ಆಟದ ಮೈದಾನ, ಉಯ್ಯಲೆ, ವಾಯುವಿಹಾರದ ಪಾತ್ ವೇ ಎಲ್ಲವೂ ಇದೆ. ಎರಡು ವರ್ಷಗಳಿಂದ ಪಾರ್ಕ್‌ನಲ್ಲಿ ಸ್ವಚ್ಛತಾ ಕಾರ್ಯ ಕೈಗೆತ್ತಿಗೊಳ್ಳದ ಕಾರಣ ಅವ್ಯವಸ್ಥೆ ಮನೆ ಮಾಡಿತ್ತು. ಲಕ್ಷಾಂತರ ರೂ.ಖರ್ಚು ಮಾಡಿ ಯೋಜನಾ ಬದ್ಧವಾಗಿ ನಿರ್ಮಿಸಿರುವ ಸುಸಜ್ಜಿತ ಪಾರ್ಕ್‌ಗೆ ಕಾಯಕಲ್ಪ ಒದಗಿಸಬೇಕೆಂಬ ಉದ್ದೇಶ ಹೊಂದಿದ್ದೇವೆ ಎಂದರು.
ಪಟ್ಟಣದ ಕೊಡಿಕೊಂಡ ರಸ್ತೆಯಲ್ಲಿರುವ ಎಚ್.ಎನ್.ಪಾರ್ಕ್‌ಅನ್ನು ಈಗಾಗಲೇ ಸ್ವಚ್ಛಗೊಳಿಸಲಾಗಿದ್ದು, ಅದನ್ನು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಿ ಸಾರ್ವಜನಿಕರ ಬಳಕೆಗೆ ನೀಡುತ್ತೇವೆ. ಪಟ್ಟಣಕ್ಕೆ ಹೊಂದಿಕೊಂಡಿರುವುದರಿಂದ ಎರಡು ಪಾರ್ಕ್‌ಗಳಲ್ಲಿ ವಾಯುವಿಹಾರಕ್ಕೆ ಅನುಕೂಲವಾದ ವಾತಾವರಣ ನಿರ್ಮಿಸಿ ಬೆಳಗ್ಗೆ 6 ರಿಂದ ಸಂಜೆ 7ರ ವರೆಗೂ ನಾಗರಿಕರಿಗೆ ಪ್ರವೇಶ ಕಲ್ಪಿಸಲಾಗುತ್ತಿದೆ. ಸಾರ್ವಜನಿಕರು ಪಾರ್ಕ್‌ಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು.
ಪುರಸಭೆ ಆರೋಗ್ಯ ನಿರೀಕ್ಷಕಿ ಉಷಾ, ಪೌರ ಕಾರ್ಮಿಕರು, ಜಲಗಾರರು ಇದ್ದರು.

(

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net