

| ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ
ಪ್ರಾಥಮಿಕ ಪತ್ತಿನ ಸಹಕಾರ ಸಂಘಗಳನ್ನು ಬಹು ಸೇವಾ ಕೇಂದ್ರಗಳನ್ನಾಗಿ ಪರಿವರ್ತಿಸುವ ಮೂಲಕ ರೈತರ ಆರ್ಥಿಕ ಚೇತರಿಕೆಗೆ ನೆರವಾಗುವುದು ಪ್ರಧಾನಿ ನರೇಂದ್ರ ಮೋದಿ ಅವರ ಆಶಯ. ಅದರಂತೆ ರಾಜ್ಯದಲ್ಲಿ ಈ ವರ್ಷ 980 ಸೊಸೈಟಿಗಳಲ್ಲಿ ನಾನಾ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ.
ನಬಾರ್ಡ್ ಆರ್ಥಿಕ ನೆರವಿನೊಂದಿಗೆ ಅಪೆೆಕ್ಸ್, ಡಿಸಿಸಿ ಬ್ಯಾಂಕ್ಗಳ ಮೂಲಕ ದೇಶದ 35 ಸಾವಿರ ಪ್ರಾಥಮಿಕ ಪತ್ತಿನ ಸಹಕಾರ ಸಂಘಗಳನ್ನು 3 ವರ್ಷಗಳ ಒಳಗೆ ಬಹುಸೇವಾ ಕೇಂದ್ರಗಳನ್ನಾಗಿ ಪರಿವರ್ತಿಸಬೇಕು ಎಂದು ಪ್ರಧಾನಿ ನೀಡಿದ ಕರೆಗೆ ದೇಶದ ಹಲವು ರಾಜ್ಯಗಳು ಓಗೊಟ್ಟಿದ್ದವು. ರಾಜ್ಯದ 5500 ಪ್ರಾಥಮಿಕ ಪತ್ತಿನ ಸಹಕಾರ ಸಂಘ (ಪಿಎಸಿಎಸ್)ಗಳ ಪೈಕಿ ಈ ವರ್ಷ 980ನ್ನು ಬಹುಸೇವಾ ಕೇಂದ್ರ (ಎಂಎಸ್ಸಿ)ಗಳನ್ನಾಗಿ ಪರಿವರ್ತಿಸಲು ರಾಜ್ಯ ಸಹಕಾರಿ ವಲಯ ಸಜ್ಜಾಗಿದೆ. ಇದಕ್ಕಾಗಿ ಅಪೆೆಕ್ಸ್ ಬ್ಯಾಂಕ್ ತನ್ನ 21 ಡಿಸಿಸಿ ಬ್ಯಾಂಕ್ಗಳ ಮೂಲಕ ಈ ವರ್ಷ ಆರಿಸಿಕೊಂಡ ಸೊಸೈಟಿಗಳಿಗೆ ಅವುಗಳ ಅಪೇಕ್ಷೆಗೆ ಪೂರಕವಾಗಿ 300 ಕೋಟಿ ರೂ. ಸಾಲ ಹಂಚಿಕೆ ಮಾಡಲಾಗುತ್ತಿದೆ. ಸೆಪ್ಟೆಂಬರ್ ಮಧ್ಯದಲ್ಲಿ ಕೇಂದ್ರ ಹಣಕಾಸು ಸಚಿವರು ಬೆಂಗಳೂರಲ್ಲಿ ಇದಕ್ಕೆ ಚಾಲನೆ ನೀಡಲಿದ್ದಾರೆ. ಅಂದಿನ ಸಮಾರಂಭ ಖಚಿತವಾದರೆ ಅಲ್ಲಿಯೇ ಕೃಷಿ ಇಲಾಖೆ ಹಲವು ಯೋಜನೆಗಳನ್ನು ಉದ್ಘಾಟಿಸುವ ಸಾಧ್ಯತೆ ಇದೆ.
ಶೇ.4ರ ಬಡ್ಡಿ ದರ: ಸೊಸೈಟಿಗಳಲ್ಲಿ ಹಲವು ಮೂಲ ಸೌಕರ್ಯಗಳ ಅಭಿವೃದ್ಧಿಗೆ ನಬಾರ್ಡ್ ಕೊಡುವ ಆರ್ಥಿಕ ನೆರವನ್ನು ಡಿಸಿಸಿ ಬ್ಯಾಂಕ್ ಗಳು ಶೇ.4ರ ಬಡ್ಡಿ ದರದೊಂದಿಗೆ ಸಾಲದ ರೂಪದಲ್ಲಿ ಕೊಡಲಿವೆ. ಈ ಯೋಜನೆಗೆ ಸಾಲ ಪಡೆಯುವ ಸೊಸೈಟಿ ಶೇ. 20ರ ಮೊತ್ತ ಭರಿಸಿದರೆ ಶೇ.80ನ್ನು ಡಿಸಿಸಿ ಬ್ಯಾಂಕ್ಗಳು ನೀಡಲಿವೆ.
ಸೊಸೈಟಿ ಮೊತ್ತದಲ್ಲಿ ಶೇ.5ನ್ನು ಕಡಿತಗೊಳಿಸುವ ವಿವೇಚನೆ ಆಯಾ ಡಿಸಿಸಿ ಬ್ಯಾಂಕ್ಗಳಿಗೆ ಬಿಡಲಾಗಿದೆ. ಸೌಕರ್ಯಗಳಿಗೆ ಪಡೆದ ಸಾಲವನ್ನು ಸಕಾಲದಲ್ಲಿ ತೀರಿಸಿದರೆ ಶೇ.4 ಬಡ್ಡಿ ದರ ಶೇ.1ಕ್ಕೆ ಕಡಿತಗೊಳಿಸಲು ಅವಕಾಶವಿದೆಯಂತೆ. ಸೊಸೈಟಿಗಳು ಬಹು ಸೇವಾಕೇಂದ್ರಗಳೆಂದು ಗುರುತಿಸಿಕೊಳ್ಳಲು ಕೇಂದ್ರ ಸರ್ಕಾರ ಸೂಚಿಸಿರುವ ಹಲವು ಮೂಲ ಸೌಕರ್ಯಗಳನ್ನು ವೃದ್ಧಿಸಿಕೊಳ್ಳಬಹುದು. ಕೃಷಿ ಸಂಗ್ರಹ ಕೇಂದ್ರ, ಕೋಲ್ಡ್ ಸ್ಟೋರೆಜ್ ಘಟಕ, ಕೃಷಿ ಸೇವಾ ಕೇಂದ್ರ, ಕೃಷಿ ಮಾಹಿತಿ ಕೇಂದ್ರ, ಕೃಷಿ ಸಾರಿಗೆ-ಮಾರುಕಟ್ಟೆ ಸೌಕರ್ಯ, ಗ್ರಾಹಕರ ಮಳಿಗೆ ಇತ್ಯಾದಿ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸುವ ಮೂಲಕ ಸಹಕಾರಿ ವಲಯವನ್ನೂ ಕೃಷಿ ವಲಯದ ಅಭಿವೃದ್ಧಿಗೆ ಇನ್ನಷ್ಟು ಪೂರಕವಾಗಿ ಬಳಸಿಕೊಳ್ಳಲು ಕೇಂದ್ರ ಮುಂದಡಿ ಇಟ್ಟಿದೆ.
ಪ್ರಧಾನಿ ಅವರು ಆರು ತಿಂಗಳ ಹಿಂದೆ ಈ ಯೋಜನೆಗೆ ಚಾಲನೆ ನೀಡಿ ಹಾಸನ ಜಿಲ್ಲೆ ಉಗನೆ ಸೊಸೈಟಿ ಪ್ರಮುಖರೊಂದಿಗೆ ಸಂವಾದ ನಡೆಸಿದ್ದರು. ಚಿತ್ರದುರ್ಗ ಜಿಲ್ಲೆಯಲ್ಲಿ ಈ ವರ್ಷ 24 ಸೊಸೈಟಿಗಳಿಗೆ 7.10ಕೋಟಿ ರೂ.ಗಳ ಯೋಜನೆ ಸಿದ್ಧಪಡಿಸಲಾಗಿದೆ. ಡಿಸಿಸಿ ಬ್ಯಾಂಕ್ 5.76 ಕೋಟಿ ರೂ.ಸಾಲ ಕೊಡಲಿದೆ.
| ಎಂ.ಇಲ್ಯಾಸ್ಉಲ್ಲಾ ಷರೀಫ್ ವ್ಯವಸ್ಥಾಪಕ ನಿರ್ದೇಶಕ, ಡಿಸಿಸಿ ಬ್ಯಾಂಕ್ ಚಿತ್ರದುರ್ಗ