

ವಿಜಯವಾಣಿ ಸುದ್ದಿಜಾಲ ಕಾಸರಗೋಡು
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕೇರಳ ಸರ್ಕಾರದ ತಿರುವನಂತಪುರ ಭಾರತ್ ಭವನ ಆಶ್ರಯದಲ್ಲಿ ಅನಂತಪುರಿ ಗಡಿನಾಡ ಕನ್ನಡ ಸಂಸ್ಕೃತಿ ಉತ್ಸವ ತಿರುವನಂತರಪುರ ಸಿ.ವಿ.ರಾಮನ್ ಪಿಳ್ಳೆ ರಸ್ತೆಯ ತೈಕಾಡ್ ಭಾರತ್ ಭವನದಲ್ಲಿ ಜರುಗಿತು.
ಕೇರಳ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಜಿ.ಆರ್.ಅನಿಲ್ ಸಮಾರಂಭ ಉದ್ಘಾಟಿಸಿದರು. ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಸಂಸ್ಥಾಪಕ ಎಸ್.ಪ್ರದೀಪ್ ಕುಮಾರ್ ಕಲ್ಕೂರ ಸಾಧಕರನ್ನು ಗೌರವಿಸಿದರು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸೋಮಣ್ಣ ಬೇವಿನಮರದ ಅಧ್ಯಕ್ಷತೆ ವಹಿಸಿದ್ದರು.
ಭಾರತ್ ಭವನ್ ಸದಸ್ಯ ಕಾರ್ಯದರ್ಶಿ ಪ್ರಮೋದ್ ಪಯ್ಯನ್ನೂರು, ಭಾರತ್ ಭಾರತಿಯ ಸಾಧನಾ ರಾವ್, ಹಿರಿಯ ವಿದ್ವಾಂಸ ಸಂಶೋಧಕ ಡಾ.ವೀರಣ್ಣ ತುಪ್ಪದ ಹುಮಾನಾಬಾದ್ ಬೀದರ್, ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಶಿವ ರೆಡ್ಡಿ ಖ್ಯಾಡೇದ, ತಿರುವನಂತಪುರ ಕರ್ನಾಟಕ ಸಂಘದ ಕಾರ್ಯದರ್ಶಿ ಡಾ.ಅನಿತಾ ಕುಮಾರಿ ಹೆಗಡೆ, ಧಾರ್ಮಿಕ ಮುಂದಾಳು ಅರಿಬೈಲು ಗೋಪಾಲ ಶೆಟ್ಟಿ ಕಾಸರಗೋಡು, ಸಮಾಜ ಸೇವಕ ಮಂಜುನಾಥ ಆಳ್ವ ಮಡ್ವ, ಕೇರಳ ಲೋಕಸೇವಾ ಆಯೋಗದ ನಿವೃತ್ತ ಅಂಡರ್ ಸೆಕ್ರಟೆರಿ ಗಣೇಶ್ ಪ್ರಸಾದ್ ಪಾಣೂರು, ಅನಂತಪುರಿ ಗಡಿನಾಡ ಸಾಂಸ್ಕೃತಿಕ ಉತ್ಸವದ ಪ್ರಧಾನ ಸಂಚಾಲಕ ಎ.ಆರ್.ಸುಬ್ಬಯ್ಯ ಕಟ್ಟೆ, ಪ್ರೊ.ಶ್ರೀನಾಥ್, ವಕೀಲ ಎಂ.ಎಸ್.ಥೋಮಸ್ ಡಿಸೋಜ, ಜೆಡ್.ಎ.ಕಯ್ಯಾರು, ರಾಧಾಕೃಷ್ಣ ಕೆ.ಉಳಿಯತ್ತಡ್ಕ ಉಪಸ್ಥಿತರಿದ್ದರು.
ಕಾಸರಗೋಡು ಗಡಿನಾಡ ಸಾಹಿತ್ಯ ಅಕಾಡೆಮಿ ಕಾರ್ಯದರ್ಶಿ ಅಖಿಲೇಶ್ ನಗುಮುಗಂ ಸ್ವಾಗತಿಸಿದರು. ಪತ್ರಕರ್ತ ರವಿ ನಾಯ್ಕಾಪು ನಿರೂಪಿಸಿದರು. ಅಧ್ಯಕ್ಷ ಎನ್.ಚನಿಯಪ್ಪ ನಾಯ್ಕ ವಂದಿಸಿದರು. ಬಹುಭಾಷಾ ಕವಿಸಂಗಮ, ವಿಚಾರಗೋಷ್ಠಿ ನಡೆಯಿತು.
ಸಾಧಕರಿಗೆ ಗೌರವ ಸನ್ಮಾನ
ಸಾಂಸ್ಕೃತಿಕ ಸಂಘಟಕ ಜೇಮ್ಸ್ ಮೆಂಡೋನ್ಸಾ ದುಬೈ, ನಾಟಕ- ಸಿನಿಮಾ ನಿರ್ಮಾಪಕ ಕಿಶೋರ್ ಡಿ.ಶೆಟ್ಟಿ ಮಂಗಳೂರು, ತುಳು ಸಂಶೋಧಕ ಎಲ್.ಆರ್.ಪೋತಿ ತಿರುವನಂತಪುರ, ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆಗೈದ ರಾವ ಚೇರಾಲ್, ಲೇಖಕ ಶಿವಾನಂದ ಕೋಟ್ಯಾನ್ ಅವರನ್ನು ಸನ್ಮಾನಿಸಲಾಯಿತು.
ಪುಸ್ತಕ ಬಿಡುಗಡೆ
ರಾಜನ್ ಮುನಿಯೂರು ಬರೆದ ಪುಸ್ತಕ ‘ತುಳುನಾಡನ್ ತುಡಿಪ್ಪುಗಳ್’ ಕೃತಿಯನ್ನು ಸಚಿವ ಜಿ.ಆರ್.ಅನಿಲ್ ಹಾಗೂ ಶಿವಾನಂದ ಕೋಟ್ಯಾನ್ ಕಟಪಾಡಿ ರಚಿಸಿದ ‘ಗುರುದರ್ಶನ’ ಕೃತಿಯನ್ನು ಶಿಕ್ಷಣ ಸಚಿವ ವಿ.ಶಿವನ್ ಕುಟ್ಟಿ ಬಿಡುಗಡೆಗೊಳಿಸಿದರು. ಡಾ.ನಾಗೇಶ್ ಮತ್ತು ನಾಗರಾಜ ಬೆಂಗಳೂರು ತಂಡದ ನೇತೃತ್ವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ವೀರಗಾಸೆ, ಚಿಲಿಪಿಲಿ ಕುಣಿತ, ಜಾನಪದ ನೃತ್ಯ, ಶಾಸ್ತ್ರೀಯ ನೃತ್ಯ, ಕಥಕ್ ನೃತ್ಯ, ಮೋಹಿನಿಯಾಟ್ಟಂ, ಯಕ್ಷಗಾನ, ಕಥಕ್ಕಳಿ ಪ್ರದರ್ಶನ, ಸ್ಥಳೀಯ ಕನ್ನಡ ಸಂಘ ಮಕ್ಕಳಿಂದ ಭರತನಾಟ್ಯ ಪ್ರಸ್ತುತಿಗೊಂಡಿತು.