

ಭಾಗ್ಯವಾನ್ ಸನಿಲ್ ಮೂಲ್ಕಿ
ಶ್ರೀ ಕ್ಷೇತ್ರ ಬಪ್ಪನಾಡು ದೇವಸ್ಥಾನದ ಉತ್ತರದಲ್ಲಿ ಶಾಂಭವಿ ನದಿ ಬದಿಯ ಪ್ರಕೃತಿ ರಮ್ಯ ಪ್ರದೇಶದಲ್ಲಿ ಶಾಲಾ ಮಕ್ಕಳ ಕಲರವ. ಶ್ರೀ ಕ್ಷೇತ್ರದ ಜಲಕದ ಕಟ್ಟೆ ಬಳಿ ನದಿ ದಂಡೆಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ, ಲಘು ಪಾನೀಯ ಬಾಟಲ್, ಅಪಾಯಕಾರಿ ಗ್ಲಾಸ್ ತುಂಡುಗಳು ಹಾಗೂ ಮೊದಲಾದ ಮಾದಕ ಪಾನೀಯ ಬಾಟಲನ್ನು ಮಕ್ಕಳು ಹೆಕ್ಕಿ ಪ್ರತ್ಯೇಕಿಸಿ ಗೋಣಿಗಳಲ್ಲಿ ತುಂಬಿ ವಿಲೇವಾರಿ ಮಾಡಿದ್ದಾರೆ.
ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತದ ಶ್ರೀ ವ್ಯಾಸಮಹರ್ಷಿ ವಿದ್ಯಾಪೀಠ ಶಾಲೆಯ ವಿದ್ಯಾರ್ಥಿಗಳು ಪ್ರಾಣ ಪ್ರತಿಷ್ಠಾನದ ಸಹಕಾರ ಹಾಗೂ ಚೆನ್ನೈನ ದ ಎನರ್ಜಿ ಹಾಗೂ ರಿಸೋರ್ಸ್ ಇನ್‌ಸ್ಟಿಟ್ಯೂಟ್ ಮತ್ತು ಯು.ಎಸ್.ಕಾನ್‌ಸ್ಟಿಟ್ಯೂಟ್ ನಿರ್ದೇಶನದಲ್ಲಿ ನಡೆಯುವ ಓಶಿಯನ್ ಮ್ಯಾಟರ್ಸ್, ಬ್ಲೂ ಕ್ಯಾಂಪೇನ್ ಯೋಜನೆ ಅಂಗವಾಗಿ ಶಾಂಭವಿ ನದಿ ತೀರ ಸ್ವಚ್ಛತಾ ಅಭಿಯಾನ ಕಾರ್ಯಕ್ರಮದಡಿ ಸೇವಾ ಕಾರ್ಯ ನಡೆಸಿದರು.
ಶ್ರೀ ವ್ಯಾಸ ಮಹರ್ಷಿ ವಿದ್ಯಾಪೀಠ ಶಾಲೆಯ ಸುಮಾರು 120 ವಿದ್ಯಾರ್ಥಿಗಳು, 10 ಶಿಕ್ಷಕರು ಹಾಗೂ ಪ್ರಾಣ ಪ್ರತಿಷ್ಠಾನದ 20 ಸ್ವಯಂಸೇವಕರು ಭಾಗವಹಿಸುವಿಕೆಯಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 12ರವರೆಗೆ ನಡೆದ ಕಾರ್ಯಕ್ರಮದಲ್ಲಿ ಶಾಂಭವಿ ನದಿ ದಡದ ಒಂದು ಕಿ.ಮೀ. ಪ್ರದೇಶದಲ್ಲಿ 35 ದೊಡ್ಡ ಚೀಲ ಪ್ಲಾಸ್ಟಿಕ್ ಬಾಟಲ್, 25 ದೊಡ್ಡ ಚೀಲ ಗ್ಲಾಸ್ ಬಾಟಲ್, ಪ್ಲಾಸ್ಟಿಕ್ ಚಪ್ಪಲಿ, ಹಳೇ ಬಟ್ಟೆ ಇತ್ಯಾದಿ ತ್ಯಾಜ್ಯ ವಸ್ತುಗಳು ನದಿ ಸೇರುವುದನ್ನು ತಡೆಯಲಾಯಿತು. ನದಿ ಬದಿಯಲ್ಲಿ ತ್ಯಾಜ್ಯ ಬಿಸಾಡದಂತೆ ಪರಿಸರವಾಸಿಗಳ ಮನ ಒಲಿಸಲಾಯಿತು.
ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಕೆ.ನರಸಿಂಹ ಪೈ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿ, ಜೀವ ವೈವಿಧ್ಯಗಳ ರಕ್ಷಣೆಯಲ್ಲಿ ಸಮುದ್ರದ ಪಾತ್ರ ಬಹಳ ಹಿರಿದಾಗಿದ್ದು ಸಮುದ್ರಕ್ಕೆ ನೀರುಣಿಸುವ ನದಿಗಳು ಶುದ್ಧವಾಗಿರುವುದು ಬಹಳ ಅಗತ್ಯ ಈ ನಿಟ್ಟಿನಲ್ಲಿ ಪ್ರಾಣ ಪ್ರತಿಷ್ಠಾನ ಮತ್ತು ಬ್ಲೂ ಕ್ಯಾಂಪೇನ್ ಯೋಜನೆ ಪರಿಣಾಮಕಾರಿ ಸೇವೆ ನೀಡುತ್ತಿದೆ ಎಂದರು.
ಎ.ಜೆ ಇನ್‌ಸ್ಟಿಟ್ಯೂಟ್‌ನ ಪ್ರೊ.ಮಂಜುಳಾ ಶಾಂತಾರಾಮ್, ಉಪನ್ಯಾಸಕರಾದ ಲೈಲಾ ಜಸಿಲಾ ಹಾಗೂ ಉಪನ್ ವಿದ್ಯಾರ್ಥಿಗಳಿಗೆ ಸಮುದ್ರ ಜಲ ಚರ ಜೀವನ ಮತ್ತು ಪ್ಲಾಸ್ಟಿಕ್ ಮಾಲಿನ್ಯ ವಿಷಯದ ಬಗ್ಗೆ ಅರಿವು ಮೂಡಿಸಿದರು. ಶಿಕ್ಷಕರಾದ ಕಾಮಾಕ್ಷಿ ನಾಯಕ್, ಅಶ್ವಿತಾ, ಶ್ರೀ ಲಕ್ಷ್ಮೀ ಕಾಮತ್, ಪ್ರಾಣ ಪ್ರತಿಷ್ಠಾನದ ಯೋಗಾಚಾರ್ಯ ವಿನೋದ್ ಕುಮಾರ್, ಮೂಲ್ಕಿ ತಪೋವನ ಫಾರ್ಮ್‌ನ ರಾಧೇಶ್ ಮೋಹನ್‌ದಾಸ್, ಅನಂತ ಭಟ್ ಹೆಜಮಾಡಿ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನಡೆಯಿತು.
ಪರಿಸರ ರಕ್ಷಣೆಯಿಂದ ಮಾತ್ರ ನಮ್ಮ ಬದುಕು ಸುಸೂತ್ರವಾಗಲು ಸಾಧ್ಯ ಎಂಬ ಅರಿವು ಮಕ್ಕಳಿಗೆ ಮೂಡಿಸುವಲ್ಲಿ ಬ್ಲೂ ಕ್ಯಾಂಪೇನ್ ಯೋಜನೆ ಬಹಳ ಸಹಕಾರಿಯಾಗಿ ಪ್ರಾಣ ಪ್ರತಿಷ್ಠಾನ ತಂಡದ ನಿರ್ದೇಶನದಲ್ಲಿ ಪರಿಣಾಮಕಾರಿ ಸೇವೆ ನೀಡಲು ಸಾಧ್ಯವಾಯಿತು. -ಚಂದ್ರಿಕಾ ಎಸ್.ಭಂಡಾರಿಮುಖ್ಯಶಿಕ್ಷಕಿ, ಶ್ರೀ ವ್ಯಾಸ ಮಹರ್ಷಿ ವಿದ್ಯಾಪೀಠ
ನದಿ ಮುಖಜ ಭೂಮಿಗಳು ಹಾಗೂ ನಮ್ಮ ಪರಿಸರದ ತೋಡುಗಳಿಗೆ ತ್ಯಾಜ್ಯ ವಸ್ತುಗಳನ್ನು ಬಿಸಾಡುವ ಪ್ರವೃತ್ತಿಗೆ ಕಡಿವಾಣ ಬಿದ್ದರೆ ಮಾತ್ರ ಸಮುದ್ರವನ್ನು ಶುದ್ದಿಯಾಗಿ ಇಡಲು ಸಾಧ್ಯ ಶಾಂಭವಿ ನದಿ ಬದಿಯ ಶುದ್ದೀಕರಣ ಕಾರ್ಯದಲ್ಲಿ ಮಕ್ಕಳ ಸೇವೆ ಅವಿಸ್ಮರಣೀಯ. -ಪೃಥ್ವಿನ್ ಗೋಪಿನಾಥ್ಮಾರ್ಗದರ್ಶಕರು, ಬೆಳ್ಮಣ್ ಪ್ರಾಣ ಪ್ರತಿಷ್ಠಾನ https://www.vijayavani.net/pocso-case-convicted-at-court-5-yerar-imprisionment