More

    ಬೋಟ್ ದುರಂತ ಪರಿಹಾರ ದೊರಕಿಲ್ಲ: ಗಂಗೊಳ್ಳಿ ಪಂಚಾಯಿತಿ ಗ್ರಾಮಸಭೆಯಲ್ಲಿ ಸ್ಥಳೀಯರ ಆಕ್ರೋಶ

    ಗಂಗೊಳ್ಳಿ: ಎರಡು ತಿಂಗಳ ಹಿಂದೆ ಗಂಗೊಳ್ಳಿಯಲ್ಲಿ ನಡೆದ ಬೋಟ್ ದುರಂತಕ್ಕೆ ಈವರೆಗೆ ಸರ್ಕಾರದಿಂದ ಯಾವುದೇ ಪರಿಹಾರ ಮಂಜೂರಾಗಿಲ್ಲ. ಸಂತ್ರಸ್ತ ಮೀನುಗಾರರಿಗೆ ಪರಿಹಾರ ದೊರೆಯುವುದು ಯಾವಾಗ? ಎಂದು ಗ್ರಾಮಸ್ಥರು ಪ್ರಶ್ನಿಸಿದರು. ಗಂಗೊಳ್ಳಿಯಲ್ಲಿ ಬುಧವಾರ ಜರುಗಿದ ಗಂಗೊಳ್ಳಿ ಗ್ರಾಮ ಪಂಚಾಯಿತಿಯ ಪ್ರಥಮ ಸುತ್ತಿನ ಗ್ರಾಮಸಭೆಯಲ್ಲಿ ಈ ವಿಷಯ ಪ್ರಸ್ತಾಪಗೊಂಡಿತು.

    ಗಂಗೊಳ್ಳಿಯ ಸ್ಟೆಲ್ಲಾ ಮಾರೀಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ನೃತ್ಯ ಪ್ರದರ್ಶನ ವಿಷಯ ಪ್ರಸ್ತಾಪಿಸಿದ ನವೀನ್ ಗಂಗೊಳ್ಳಿ, ಯಶವಂತ ಗಂಗೊಳ್ಳಿ ಮತ್ತು ರಾಘವೇಂದ್ರ ಗಾಣಿಗ, ನೃತ್ಯದಲ್ಲಿ ಹಿಂದುಗಳ ಭಾವನೆ ಹಾಗೂ ಧಾರ್ಮಿಕ ಆಚರಣೆಗಳಿಗೆ ಧಕ್ಕೆಯಾಗಿದೆ. ಶಿಕ್ಷಣ ಇಲಾಖೆಯ ಮೃದುಧೋರಣೆಯಿಂದ ಇಂತಹ ಘಟನೆ ನಡೆಯತ್ತಿದ್ದು 15 ದಿನದೊಳಗೆ ಕ್ರಮಕೈಗೊಳ್ಳದಿದ್ದರೆ ಶಿಕ್ಷಣ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.

    ಅಂಗನವಾಡಿ ಕೇಂದ್ರಗಳಿಗೆ ಎರಡು ತಿಂಗಳಿಂದ ಆಹಾರ ಸರಬರಾಜು ಆಗದಿರುವ ಬಗ್ಗೆ ಯಶವಂತ ಖಾರ್ವಿ ವಿಷಯ ಪ್ರಸ್ತಾಪಿಸಿದರು. 12 ಕೋಟಿ ರೂ. ವೆಚ್ಚದಲ್ಲಿ ಪುನರ್ ನಿರ್ಮಾಣಗೊಳ್ಳುತ್ತಿರುವ ಗಂಗೊಳ್ಳಿ ಮೀನುಗಾರಿಕೆ ಜೆಟ್ಟಿ ಕಾಮಗಾರಿ ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದು, ಮೀನುಗಾರರಿಗೆ ಸಮಸ್ಯೆಯಾಗುತ್ತಿದೆ. ಕಾಮಗಾರಿ ಪುನರಾರಂಭಿಸುವಂತೆ ಒತ್ತಾಯಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಯಶವಂತ ಗಂಗೊಳ್ಳಿ ಅಸಮಾಧಾನ ವ್ಯಕ್ತಪಡಿಸಿದರು.

    ಗಂಗೊಳ್ಳಿ ಗ್ರಾಪಂ ಅಧ್ಯಕ್ಷ ಶ್ರೀನಿವಾಸ ಖಾರ್ವಿ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ಮೀನುಗಾರಿಕೆ ಇಲಾಖೆಯ ಸೀನಿಯರ್ ಸೂಪರ್‌ವೈಸರ್ ಮಹಾವೀರ ಮಾರ್ಗದರ್ಶಿ ಅಧಿಕಾರಿಯಾಗಿದ್ದರು.

    ಪಿಡಿಒ ಉಮಾಶಂಕರ ಅವರನ್ನು ಗೌರವಿಸಲಾಯಿತು. ಗಂಗೊಳ್ಳಿ ಗ್ರಾಪಂ ಉಪಾಧ್ಯಕ್ಷೆ ಪ್ರೇಮಾ ಸಿ.ಪೂಜಾರಿ, ಗ್ರಾಪಂ ಸದಸ್ಯರು, ಗಂಗೊಳ್ಳಿ ಗ್ರಾಮ ಕರಣಿಕ ಮಾಧವ ಕೊಠಾರಿ, ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅಮಿತಾ, ಮೆಸ್ಕಾಂ ಗಂಗೊಳ್ಳಿ ಶಾಖಾಧಿಕಾರಿ ದಿನೇಶ ಶೆಟ್ಟಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಂಗನವಾಡಿ ಮೇಲ್ವಿಚಾರಕಿ ರೇಖಾ, ಶಿಕ್ಷಣ ಸಂಯೋಜಕ ಶೇಖರ್, ಸಮಾಜ ಕಲ್ಯಾಣ ಇಲಾಖೆಯ ಪ್ರಭಾದೇವಿ, ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ಕೇಶವ ಮೊದಲಾದವರು ಉಪಸ್ಥಿತರಿದ್ದರು. ಗ್ರಾಪಂ ನೌಕರ ನಾರಾಯಣ ಶ್ಯಾನುಭಾಗ್ ಕಾರ್ಯಕ್ರಮ ನಿರ್ವಹಿಸಿದರು.

    ಅನುಮತಿ ಇಲ್ಲದೆ ಎಲ್‌ಕೆಜಿ-ಯುಕೆಜಿ

    ಗ್ರಾಪಂ ವ್ಯಾಪ್ತಿಯ ಕೆಲವು ಶಾಲೆಗಳಲ್ಲಿ ಇಲಾಖೆಯ ಅನುಮತಿ ಇಲ್ಲದೆ ಎಲ್‌ಕೆಜಿ, ಯುಕೆಜಿ ತರಗತಿ ನಡೆಸುತ್ತಿದ್ದಾರೆ. ಈ ಬಗ್ಗೆ ಕ್ರಮಕೈಗೊಳ್ಳುವಂತೆ ಇಲಾಖೆ ಉಪನಿರ್ದೇಶಕರು ಆದೇಶ ನೀಡಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ. ಅಂತಹ ಶಾಲೆಗಳ ವಿರುದ್ಧ ಕ್ರಮ ಜರುಗಿಸುವಂತೆ ಫಿಲೋಮಿನಾ ಫೆರ್ನಾಂಡಿಸ್ ಆಗ್ರಹಿಸಿದರು.

    ಚುನಾವಣೆ ಬಹಿಷ್ಕಾರ ಎಚ್ಚರಿಕೆ

    ಪಂಜುರ್ಲಿ ದೇವಸ್ಥಾನದ ಸಮೀಪದ ಚರಂಡಿ ಅಭಿವೃದ್ಧಿಗೆ 90 ಲಕ್ಷ ರೂ. ಮಂಜೂರಾಗಿದ್ದರೂ, ಈವರೆಗೆ ಕಾಮಗಾರಿ ಆರಂಭಿಸದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ನವೀನ್ ಗಂಗೊಳ್ಳಿ, ಚುನಾವಣೆ ಘೋಷಣೆ ಆಗುವುದರೊಳಗೆ ಕಾಮಗಾರಿ ಆರಂಭಿಸದಿದ್ದಲ್ಲಿ ಚುನಾವಣೆ ಬಹಿಷ್ಕರಿಸಲಾಗುವುದು ಎಂದು ಎಚ್ಚರಿಸಿದರು.

    ಕುಂದಾಪುರದಲ್ಲಿ ಶವ ಮಹಜರೇಕೆ?

    ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ ಇದೆ. ಶವ ಮಹಜರು ನಡೆಸಲು ಕಟ್ಟಡ ಇದ್ದರೂ ಕುಂದಾಪುರದಲ್ಲಿ ಶವ ಮಹಜರು ನಡೆಸುವ ಬಗ್ಗೆ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದರು. ಸಿಬ್ಬಂದಿ ನೇಮಕಾತಿ ಮಾಡುವಂತೆ ಸರ್ಕಾರವನ್ನು ಆಗ್ರಹಿಸುವ ನಿರ್ಣಯ ಕೈಗೊಂಡು ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ಮನವಿ ಮಾಡಿದರು.

    ಬ್ಯಾಂಕ್ ವಿಲೀನದಿಂದ ತೊಂದರೆ

    ಗಂಗೊಳ್ಳಿಯಲ್ಲಿ ಎರಡು ರಾಷ್ಟ್ರೀಕೃತ ಬ್ಯಾಂಕುಗಳು ವಿಲೀನಗೊಂಡ ಬಳಿಕ ಗ್ರಾಹಕರಿಗೆ ಸಮಸ್ಯೆಯಾಗುತ್ತಿದೆ. ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಇದೆ. ಬ್ಯಾಂಕಿನಲ್ಲಿ ಸಿಬ್ಬಂದಿ ಕೊರತೆ ಹಾಗೂ ಸಮರ್ಪಕ ಸೇವೆ ದೊರೆಯದಿರುವುದರಿಂದ ಜನರು ಪರದಾಡುವಂತಾಗಿದೆ ಎಂದು ನವೀನ್ ಗಂಗೊಳ್ಳಿ, ರಾಘವೇಂದ್ರ ಗಾಣಿಗ ಹೇಳಿದರು.

    ಕೆರೆ ಒತ್ತುವರಿ ತೆರವು

    ಅತಿಕ್ರಮಣಗೊಂಡಿರುವ ಸರ್ಕಾರಿ ಕೆರೆಗಳ ಒತ್ತುವರಿ ತೆರವು ಬಗ್ಗೆ ಯಾವ ಕ್ರಮಕೈಗೊಳ್ಳಲಾಗಿದೆ ಎಂದು ಯಶವಂತ ಗಂಗೊಳ್ಳಿ ಮತ್ತು ನವೀನ್ ಗಂಗೊಳ್ಳಿ ಪ್ರಶ್ನಿಸಿದರು. ಜಲ್‌ಜೀವನ್ ಮಿಷನ್ ಕಾಮಗಾರಿ ಸಂದರ್ಭ ರಸ್ತೆಗಳನ್ನು ತುಂಡರಿಸಲಾಗಿದ್ದು, ಈವರೆಗೆ ಅದನ್ನು ಸರಿಪಡಿಸಲಾಗಿಲ್ಲ ಎಂದು ಯಶವಂತ ಗಂಗೊಳ್ಳಿ ಹೇಳಿದರು. ಗಂಗೊಳ್ಳಿಯಲ್ಲಿ ಈವರೆಗೆ ದಲಿತರ ಗ್ರಾಮಸಭೆ ನಡೆಸಿಲ್ಲ ಎಂದು ಅಶೋಕ ಎನ್.ಡಿ ಆಕ್ಷೇಪ ವ್ಯಕ್ತಪಡಿಸಿದರು.

    ಜಿಪಂ ಕ್ರಿಯಾಯೋಜನೆಯಲ್ಲಿ ಕಡೆಗಣನೆ

    ಶಾಲಾ ವಠಾರದಲ್ಲಿ ಮುಖ್ಯರಸ್ತೆಯಲ್ಲಿ ವೇಗ ನಿಯಂತ್ರಕ ಅಳವಡಿಸುವಂತೆ ಗ್ರಾಮಸ್ಥರು ಆಗ್ರಹಿಸಿದರು. ಗಂಗೊಳ್ಳಿಯಲ್ಲಿ ಅಗ್ನಿಶಾಮಕ ದಳದ ಘಟಕವನ್ನು ಸ್ಥಾಪಿಸಬೇಕೆಂದು ರಾಘವೇಂದ್ರ ಗಾಣಿಗ ಮನವಿ ಮಾಡಿದರು. ಗಂಗೊಳ್ಳಿಯ 2 ಹಿಂದು ರುದ್ರಭೂಮಿ ಅಭಿವೃದ್ಧಿ ಸಂಬಂಧ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗಿದ್ದರೂ, ಜಿಪಂ ಕ್ರಿಯಾಯೋಜನೆಯಲ್ಲಿ ಗಂಗೊಳ್ಳಿ ಹಿಂದು ರುದ್ರಭೂಮಿ ಅಭಿವೃದ್ಧಿಗೆ ಅನುದಾನ ನೀಡಿಲ್ಲ. ಗಂಗೊಳ್ಳಿಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿತು. ಎಸ್‌ಎಲ್‌ಆರ್‌ಎಂ ಘಟಕದಲ್ಲಿ ತ್ಯಾಜ್ಯ ವಿಲೇವಾರಿ ಸರಿಯಾಗಿ ನಡೆಯುತ್ತಿಲ್ಲ. ಘಟಕದ ಒಳಗೆ ರಾಶಿ ಹಾಕಿರುವ ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯಗಳನ್ನು ದನಗಳು ತಿನ್ನುತ್ತಿದ್ದು, ವ್ಯವಸ್ಥೆ ಸರಿಪಡಿಸುವಂತೆ ಸ್ಥಳೀಯರು ಆಗ್ರಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts