More

    ಕಣ್ಣೀರಿಟ್ಟ ಯುವತಿ ಮನೆಗೆ ಕಾಪು ತಹಸೀಲ್ದಾರ್ ಭೇಟಿ: ಶೀಘ್ರ ಸೌಲಭ್ಯ ಕಲ್ಪಿಸುವ ಭರವಸೆ

    ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
    ಕಾಪು ತಾಲೂಕು ಆಡಳಿತ ಸೌಧ ಸಭಾಂಗಣದಲ್ಲಿ ಕಳೆದ ವಾರ ನಡೆದಿದ್ದ 2023-24ನೇ ಸಾಲಿನ ತಾಲೂಕು ಮಟ್ಟದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಾಂಗದ ಹಿತರಕ್ಷಣಾ ಹಾಗೂ ಕುಂದುಕೊರತೆ ಸಭೆಯಲ್ಲಿ ತಮ್ಮ ಸಮಸ್ಯೆಯ ಬಗ್ಗೆ ಕಣ್ಣೀರಿಟ್ಟ ಬಡಾ ಉಚ್ಚಿಲ ಸುಪ್ರೀತಾ ಮನೆಗೆ ತಹಸೀಲ್ದಾರ್ ಪ್ರತಿಭಾ ಆರ್. ತೆರಳಿ ಪರಿಶೀಲನೆ ನಡೆಸಿದ್ದಾರೆ.

    ಪರಿಶಿಷ್ಟ ಪಂಗಡದ ಪದವೀಧರೆ ಯುವತಿ

    ಉಚ್ಚಿಲ ಬಡಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪರಿಶಿಷ್ಟ ಪಂಗಡದ ಪದವೀಧರೆ ಆಗಿರುವ ಸುಪ್ರಿತಾ ಸಭೆಯಲ್ಲಿ ನಮ್ಮ ಮನೆಗೆ ಕಳೆದ ಹಲವು ವರ್ಷಗಳಿಂದ ವಿದ್ಯುತ್ ವ್ಯವಸ್ಥೆ ಇಲ್ಲ. ನೀರಿನ ಸೌಲಭ್ಯವೂ ಇಲ್ಲ. ಹಿಂದೆ ಭಾಗ್ಯಲಕ್ಷ್ಮೀ ಯೋಜನೆ ಮೂಲಕ ದೀಪದ ವ್ಯವಸ್ಥೆ ಆಗಿತ್ತು. ಕೆಲವು ವರ್ಷದ ಹಿಂದೆ ಮಳೆಗಾಳಿಗೆ ಮರಗಳು ಉರುಳಿ ಲೈನ್ ತುಂಡಾಗಿದೆ. ಬಳಿಕ ವಿದ್ಯುತ್ ಸಂಪರ್ಕ ಕಲ್ಪಿಸಲು ಕಿರುಕುಳ ನೀಡಲಾಗುತ್ತಿದೆ. ದಯವಿಟ್ಟು ನಮ್ಮ ಮನೆಗೂ ವಿದ್ಯುತ್ ಮತ್ತು ನೀರು ದೊರಕಿಸಿಕೊಡಿ ಎಂದು ಅಳಲು ತೋಡಿಕೊಂಡಿದ್ದರು. ಅದೇ ಸಭೆಯಲ್ಲಿ ತಹಶೀಲ್ದಾರ್ ಸಂಬಂಧಪಟ್ಟ ಇಲಾಖೆಗೆ ಸಮಸ್ಯೆ ಪರಿಹಾರಕ್ಕೆ ಸೂಚಿಸಿದ್ದರು.

    ಶೀಘ್ರ ಸೌಲಭ್ಯ ಕಲ್ಪಿಸುವ ಭರವಸೆ

    ಯುವತಿಯ ಮನೆಗೆ ತೆರಳಿದ ತಹಶೀಲ್ದಾರ್ ಅವರ ಕುಟುಂಬಕ್ಕೆ ಧೈರ್ಯ ತುಂಬಿ ತಕ್ಷಣ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಕಂದಾಯ ನಿರೀಕ್ಷಕ ಇಸಾಕ್ ಸಾಬ್, ಗ್ರಾಮ ಆಡಳಿತಾಧಿಕಾರಿ ಜಗದೀಶ್ ಇದ್ದರು.


    ಭಾಗ್ಯಲಕ್ಷ್ಮೀ ಯೋಜನೆ ಅನ್ವಯ ನಮ್ಮ ಮನೆಗೆ ದೀಪದ ವ್ಯವಸ್ಥೆ ಕಲ್ಪಿಸಲಾಗಿದ್ದು, ಕೆಲವು ವರ್ಷಗಳ ಹಿಂದೆ ಸುರಿದಿದ್ದ ಭಾರಿ ಗಾಳಿ ಮಳೆಯ ಪರಿಣಾಮ ಮರಗಳು ಉರುಳಿ ಲೈನುಗಳು ತುಂಡಾಗಿದ್ದವು. ಇದನ್ನು ಸರಿಪಡಿಸಲು ಮುಂದಾಗುವುದು ಬಿಟ್ಟು ಕಿರುಕುಳ ನೀಡಲಾಗುತ್ತಿದೆ. ಇದೀಗ ತಹಸೀಲ್ದಾರ್ ಅವರಿಂದ ವ್ಯವಸ್ಥೆಯ ಭರವಸೆ ದೊರೆತಿದೆ.
    -ಸುಪ್ರಿತಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts