More

    ಕೇಂದ್ರ ಸರ್ಕಾರದಿಂದ ಕುಂದಾಪುರದ ಚಮ್ಮಾರ ಮಣಿಕಂಠರಿಗೆ ಗಣರಾಜ್ಯೋತ್ಸವಕ್ಕೆ ಆಹ್ವಾನ

    ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ
    ಕುಂದಾಪುರದ ಝಾನ್ಸಿರಾಣಿ ಲಕ್ಷ್ಮೀಬಾಯಿ ರಸ್ತೆಯ ಪಶು ಚಿಕಿತ್ಸಾಲಯದ ಬಳಿ ಸಣ್ಣದೊಂದು ಪೆಟ್ಟಿಗೆ ಅಂಗಡಿಯಲ್ಲಿ ತಲೆ ತಗ್ಗಿಸಿ ಕೆಲಸ ಮಾಡುತ್ತಿದ್ದ ಮಣಿಕಂಠ ಎಲ್ಲರಿಗೂ ಗೊತ್ತು. ಆದರೆ ಮಣಿಕಂಠ ಪ್ರಧಾನ ಮಂತ್ರಿ ಸ್ವನಿಧಿ ಯೋಜನೆ ಫಲಾನುಭವಿ ಅನ್ನೋದು, ಪಡೆದ ಸಾಲದ ಕಂತು ಪ್ರಾಮಾಣಿಕವಾಗಿ ಕಟ್ಟಿರುವುದು, ಗಣರಾಜ್ಯೋತ್ಸವಕ್ಕೆ ಆಹ್ವಾನ ಬಂದಿರುವುದು ಯಾರಿಗೂ ಗೊತ್ತಿಲ್ಲ.

    ಸ್ವನಿಧಿ ಸಾಲ ಮರುಪಾವತಿಗೆ ಸಿಕ್ಕ ಗಣರಾಜ್ಯೋತ್ಸವ ಗೌರವ

    ಕುಂದಾಪುರದಿಂದ ಗಣರಾಜ್ಯೋತ್ಸವಕ್ಕೆ ಹೊರಟ ಮಣಿಕಂಠ ಚಪ್ಪಲಿ ಕೊಡೆ ದುರಸ್ತಿ ಕಾಯಕ ಮಾಡುವ ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವ ಕುಂದಾಪುರದ ಮೊದಲ ವ್ಯಕ್ತಿ. ಸ್ವನಿಧಿ ಯೋಜನೆಯ ಸಾಲವನ್ನು, ಸಮಯಕ್ಕೆ ಸರಿಯಾಗಿ ಕಟ್ಟಿ ಇಲಾಖೆ ಮೆಚ್ಚುಗೆ ಗಳಿಸಿದ ಮಣಿಕಂಠನಿಗೆ ಇಲಾಖೆ ಮತ್ತೆ 20 ಸಾವಿರ ರೂ. ಸಾಲ ನೀಡಿತು. ಪಡೆದ ಸಾಲದಲ್ಲಿ ಮಳೆಗಾಲದಲ್ಲಿ ಬೇಕಾಗುವ ಚಪ್ಪಲಿ, ಕೊಡೆ ಮಾರಾಟ ಮಾಡಿ ಯಶಸ್ವಿ ಆದರು. ಪಡೆದ ಸಾಲವನ್ನು ಐದೇ ತಿಂಗಳಲ್ಲಿ ಮರುಪಾವತಿಸಿದರು.

    ಚಮ್ಮಾರ ಮಣಿಕಂಠರ ಪ್ರಾಮಾಣಿಕತೆ

    ಸಾಲ ಮನ್ನಾ, ಬಡ್ಡಿರಹಿತ ಸಾಲ ಅಂತ, ಉಚಿತ ಸಿಗುತ್ತೆ ಅಂತ, ಪಡೆದ ಸಾಲ ಕಟ್ಟಲು ಮೀನಮೇಷ ಎಣಿಸುವ ಜನರ ಮಧ್ಯೆ ಮಣಿಕಂಠ ವಿಭಿನ್ನವಾಗಿ ಕಾಣುತ್ತಾರೆ. ಇಲಾಖೆ ಮಣಿಕಂಠನ ಪ್ರಾಮಾಣಿಕತೆಗೆ ಮತ್ತೆ ಮೂರನೇ ಬಾರಿ 50 ಸಾವಿರ ರೂ. ಸಾಲ ಮಂಜೂರು ಮಾಡಿದೆ.

    ಚಪ್ಪಲಿ ದುರಸ್ತಿಯಿಂದ ಜೀವನ ಸಾಗುತ್ತಿದೆ

    ಕುಂದಾಪುರದ ಶಾಸ್ತ್ರೀ ಸರ್ಕಲ್ ಬಳಿ ಪಾದರಕ್ಷೆ ರಿಪೇರಿ ಮಾಡುವ ಪೆಟ್ಟಿಗೆ ಅಂಗಡಿ ನಡೆಸುವ ಮಣಿಕಂಠರ ಮೂಲ ಭದ್ರಾವತಿ. ಐವತ್ತು ವರ್ಷದ ಹಿಂದೆ ಇಲ್ಲಿಗೆ ಬಂದು ಚಪ್ಪಲಿ ದುರಸ್ತಿ ಅಂಗಡಿ ಆರಂಭಿಸಿದರು. ಮಣಿಕಂಠರ ತಂದೆ ಸ್ವಲ್ಪದಿನ ಅಂಗಡಿ ನಡೆಸಿದ್ದು, ಅವರ ಅನಾರೋಗ್ಯದ ನಂತರ ಮಣಿಕಂಠ ಮತ್ತೆ ಅಂಗಡಿ ತೆಕ್ಕೆಗೆ ಬಂದರು. ಚಪ್ಪಲಿ ದುರಸ್ತಿ, ಕೊಡೆ ರಿಪೇರಿ, ಚಪ್ಪಲಿ ರಿಪೇರಿಯಲ್ಲಿ ಬಂದ ವರಮಾನದಲ್ಲಿ ಪತ್ನಿ, ಇಬ್ಬರು ಮಕ್ಕಳು, ತಾಯಿ, ತಮ್ಮನ ಜತೆ ಜೀವನ ನಡೆಸುತ್ತಿದ್ದು, ಬರುವ ಅಲ್ಪ ವರಮಾನದಲ್ಲಿ ಪಡೆದ ಸಾಲ ಮರುಪಾವತಿ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.

    ಶೇ.7 ಬಡ್ಡಿದರ, 1 ವರ್ಷ ಅವಧಿಯ ಸಾಲ

    ಎರಡು ವರ್ಷಗಳ ಹಿಂದೆ ಕೌಶಲಾಭಿವೃದ್ಧಿ ಇಲಾಖೆ ಕುಂದಾಪುರ ಪುರಸಭೆ ಮೂಲಕ ಸಿಎಂ ಸ್ವನಿಧಿ ಯೋಜನೆಯಡಿ 10 ಸಾವಿರ ರೂ ಸಾಲ ನೀಡಿತು. ಶೇ.7ರ ಬಡ್ಡಿ ದರದ ಸಾಲ ಮರುಪಾವತಿಗೆ 12 ತಿಂಗಳು ಅವಧಿ ಇದ್ದರೂ ಮಣಿಕಂಠ 2,500ರೂ.ನಂತೆ ಕಟ್ಟಿ ಐದೇ ತಿಂಗಳಲ್ಲಿ ತೀರಿಸಿದರು.

    ಪುರಸಭೆಯಿಂದ ಮಣಿಕಂಠಗೆ ಬೀಳ್ಕೊಡುಗೆ

    ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳಲು ಹೊರಟ ಮಣಿಪಂಠ ಹಾಗೂ ಪತ್ನಿ ನಿರ್ಮಲಾ ಅವರನ್ನು ಪುರಸಭೆಯಿಂದ ಗೌರವಿಸಿ ಶುಭಕೋರಿ ಬೀಳ್ಕೊಡಲಾಯಿತು. ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ, ಆಡಳಿತಾಧಿಕಾರಿ ರಶ್ಮಿ ಎಸ್.ಆರ್ ನಿರ್ದೇಶನದಲ್ಲಿ ಗೌರವಿಸಲಾಯಿತು. ಪುರಸಭೆ ಮುಖ್ಯಾಧಿಕಾರಿ ಮಂಜುನಾಥ ಆರ್, ಜಿಲ್ಲಾ ಲಿಡ್ಕರ್ ನಿಗಮ ಸಂಯೋಜಕ ತಿಮ್ಮೇ ಸ್ವಾಮಿ, ಸದಸ್ಯರಾದ ಪ್ರಭಾಕರ ವಿ, ದೇವಕಿ ಪಿ.ಸಣ್ಣಯ್ಯ, ಸಮುದಾಯ ಸಂಘಟನಾಧಿಕಾರಿ ಶರತ್ ಎಸ್.ಖಾರ್ವಿ, ಕಂದಾಯ ಅಧಿಕಾರಿ ರಜನಿ ಗೌಡ, ಹಿರಿಯ ಆರೋಗ್ಯ ನಿರೀಕ್ಷಕ ಗುರುಪ್ರಸಾದ ನಾಯ್ಕ, ಪ್ರಥಮ ದರ್ಜೆ ಸಹಾಯಕ ಗಣೇಶ್ ಕುಮಾರ್ ಜಪ್ತಿ ಇದ್ದರು.

    ರಸ್ತೆ ಪಕ್ಕದಲ್ಲಿ ಕುಳಿತು ಚಪ್ಪಲಿ ಹೊಲಿಯುವ ನನ್ನಂತವರನ್ನೂ ಸರ್ಕಾರ ಗುರುತಿಸಿದೆ ಅಂದರೆ ಮಾತೇ ಬರುತ್ತಿಲ್ಲ. ಸಿಕ್ಕಿದ ಸಣ್ಣ ಸಾಲವೇ ಆಗಿದ್ದರೂ, ಬಡ್ಡಿ ಕಮ್ಮಿ ಇದ್ದುದರಿಂದ ಲಾಭ ಹೆಚ್ಚಿದ್ದು, ತೀರಿಸುವುದಕ್ಕೆ ಸುಲಭ ಆಯಿತು. ಗಣರಾಜ್ಯೋತ್ಸವ ಆಹ್ವಾನ ಮೂಲಕ ನಮ್ಮ ಕಸುಬಿನವರನ್ನು ಗುರುತಿಸಿರುವುದು, ಪ್ರಯತ್ನಕ್ಕೆ, ಪ್ರಾಮಾಣಿಕತೆಗೆ ಬೆಲೆ ಸಿಗುತ್ತದೆ ಅನ್ನುವುದಕ್ಕೆ ಸಾಕ್ಷಿ.
    -ಮಣಿಕಂಠ
    ಗಣರಾಜ್ಯೋತ್ಸವ ಆಹ್ವಾನ ಪಡೆದವರು


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts