

ವಿಜಯವಾಣಿ ಸುದ್ದಿಜಾಲ ಮೂಲ್ಕಿ
ಮೂಲ್ಕಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ 4 ಡಯಾಲಿಸಿಸ್ ಯಂತ್ರಗಳಿದ್ದರೂ ರೋಗಿಯೊಬ್ಬನ ಸಾವು, ಹಸಿ-ಒಣ ಕಸ ವಿಂಗಡೆಣೆಗೆ ಕ್ರಮ, ಅನುದಾನ ಸಿಗದೆ ಅರ್ಧಕ್ಕೆ ನಿಂತ ಮನೆ, ಸಭೆಗೆ ಅಧಿಕಾರಿಗಳ ಗೈರು ಮುಂತಾದ ವಿಷಯಗಳ ಚರ್ಚೆಯೊಂದಿಗೆ ಮಂಗಳವಾರ ಮೂಲ್ಕಿ ನಗರ ಪಂಚಾಯಿತಿ ಅಧ್ಯಕ್ಷ ಸತೀಶ್ ಅಂಚನ್ ಅಧ್ಯಕ್ಷತೆಯಲ್ಲಿ ಮಾಸಿಕ ಸಭೆ ನಡೆಯಿತು.
ತಾಲೂಕು ವ್ಯಾಪ್ತಿಗೆ ಆದ್ಯತೆ: ಮೂಲ್ಕಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ 4 ಡಯಾಲಿಸಿಸ್ ಯಂತ್ರಗಳ ಮೂಲಕ ಸೇವೆ ನಡೆಯುತ್ತಿದ್ದರೂ ಶೆಡ್ಯೂಲ್ ಬಿಟ್ಟು ತೀವ್ರ ಸಮಸ್ಯೆಯ ರೋಗಿಗಳಿಗೆ ಚಿಕಿತ್ಸೆ ನೀಡದ ಪರಿಣಾಮ ರೋಗಿಯೊಬ್ಬ ಮೃತಪಟ್ಟಿದ್ದಾರೆ ಎಂದು ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷರಾಜ್ ಶೆಟ್ಟಿ ದೂರಿದರು. 4 ಯಂತ್ರಗಳ ಮೂಲಕ ಕನಿಷ್ಟ 28 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮೂಲ್ಕಿ ತಾಲೂಕು ಹೊರತುಪಡಿಸಿ ಹಲವಾರು ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು, ಶೆಡ್ಯೂಲ್ ತಪ್ಪಿಸಲು ಅಸಾಧ್ಯವಾಗಿದೆ ಎಂದು ವೈದ್ಯಾಧಿಕಾರಿ ಡಾ.ಕೃಷ್ಣ ತಿಳಿಸಿದರು. ಆದ್ಯತೆ ಮೇರೆಗೆ ಒಂದು ಯಂತ್ರ ಕಾದಿರಿಸುವಂತೆ ಹಾಗೂ ಮೂಲ್ಕಿ ತಾಲೂಕು ವ್ಯಾಪ್ತಿಗೆ ಆದ್ಯತೆ ನೀಡುವಂತೆ ಸದಸ್ಯರು ಆಗ್ರಹಿಸಿದರು.
ಹಸಿ-ಒಣ ಕಸ ವಿಂಗಡನೆ: ಮೂಲ್ಕಿ ನಗರ ವ್ಯಾಪ್ತಿಯಲ್ಲಿ ಕಸ ಸಂಗ್ರಹಣೆ ವೇಳೆ ಕೆಲವೊಂದು ಕಡೆ ಹಸಿ-ಒಣ ಕಸ ವಿಂಗಡಿಸದೆ ಪೌರ ಕಾರ್ಮಿಕರಿಗೆ ನೀಡುತ್ತಿರುವ ಬಗ್ಗೆ ಹಲವು ಸದಸ್ಯರು ಆಕ್ಷೇಪ ಎತ್ತಿ ಸೂಕ್ತ ಕ್ರಮಕ್ಕೆ ಆಗ್ರಹಿಸಿದರು. ಸಭೆಯಲ್ಲಿಯೇ ಪೌರ ಕಾರ್ಮಿಕರನ್ನು ಕರೆಸಿ ಸ್ಪಷ್ಟೀಕರಣ ಕೇಳಿದಾಗ ಕೆಲವೊಂದು ವಾಣಿಜ್ಯ ಕೇಂದ್ರಗಳಲ್ಲಿ ಹಸಿ-ಒಣ ಕಸ ಒಟ್ಟುಗೂಡಿಸಿ ಕೊಡುತ್ತಿದ್ದು, ಕಸ ಸಂಗ್ರಹಕ್ಕೆ ಒತ್ತಾಯಿಸುತ್ತಿರುವ ಬಗ್ಗೆಯೂ ಪೌರ ಕಾರ್ಮಿಕರು ದೂರಿದರು. ಮುಂದೆ ಪ್ರತ್ಯೇಕವಾಗಿ ನೀಡದ ಕಸಗಳನ್ನು ಪಡೆಯದಿರಲು ಸಭೆ ನಿರ್ಧರಿಸಿ ಪೌರ ಕಾರ್ಮಿಕರಿಗೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಖ್ಯಾಧಿಕಾರಿ ಮಧುಕರ್ ಕೆ.ಸೂಚನೆ ನೀಡಿದರು.
ಅರ್ಧಕ್ಕೆ ನಿಂತ ಮನೆ: ಬಿಜಾಪುರ ಕಾಲನಿಯಲ್ಲಿ ಕಮಲಾಬಾಯಿ ಎಂಬುವರು ಮನೆ ನಿರ್ಮಾಣ ಕಾರ್ಯ ನಡೆಸಿದ್ದು, ಸರ್ಕಾರದ ಅನುದಾನ ದೊರೆಯದೆ ಅರ್ಧಕ್ಕೆ ನಿರ್ಮಾಣ ಕಾರ್ಯ ನಿಂತ ಕಾರಣ ರಸ್ತೆ ಬದಿಯಲ್ಲಿ ಮಲಗುವ ಸ್ಥಿತಿ ಉಂಟಾಗಿದೆ. ಈ ಬಗ್ಗೆ ತಕ್ಷಣ ಕ್ರಮಕ್ಕೆ ಸದಸ್ಯ ಭೀಮಾಶಂಕರ್ ಆರ್.ಕೆ. ಆಗ್ರಹಿಸಿದರು. ಉಪತಹಸೀಲ್ದಾರ್ ದಿಲೀಪಿ ರೋಡ್ಕರ್ ಸೂಕ್ತ ಕ್ರಮದ ಭರವಸೆ ನೀಡಿದರು.
ಅಧಿಕಾರಿಗಳ ಗೈರು: ಹೆದ್ದಾರಿ, ಪೊಲೀಸ್, ಅರಣ್ಯ, ಮೆಸ್ಕಾಂ ಸಹಿತ ನಾನಾ ಇಲಾಖಾಧಿಕಾರಿಗಳ ಗೈರು ಹಾಜರಾತಿ ಬಗ್ಗೆ ಸದಸ್ಯರಾದ ಯೋಗೀಶ್ ಕೋಟ್ಯಾನ್, ಮಂಜುನಾಥ ಕಂಬಾರ್, ಬಾಲಚಂದ್ರ ಕಾಮತ್ ಆಕ್ಷೇಪ ವ್ಯಕ್ತಪಡಿಸಿದರು.
ಹಳೆ ಪೀಠೋಪಕರಣ ಬದಲಿಗೆ ಮನವಿ: ನಪಂ ಕಚೇರಿ ಹಾಗೂ ಸಭಾಂಗಣದ ಪೀಠೋಪಕರಣಗಳು ನಾದುರಸ್ತಿಯಲ್ಲಿದ್ದು, ಬದಲಿಸುವಂತೆ ಸದಸ್ಯ ಪುತ್ತುಬಾವ, ಭೀಮಾಶಂಕರ್, ಬಾಲಚಂದ್ರ ಕಾಮತ್, ಮಂಜುನಾಥ ಕಂಬಾರ ಆಗ್ರಹಿಸಿದರು. ಮುಂದಿನ ಸಭೆಯೊಳಗೆ ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವ ಭರವಸೆ ದೊರೆಯಿತು.
ಸ್ಥಳೀಯ ರಸ್ತೆ, ಚರಂಡಿ, ಪೈಪ್ಲೈನ್ ಸಹಿತ ನಾನಾ ಕಾಮಗಾರಿಗಳ ಬಗ್ಗೆ ವಂದನಾ ಕಾಮತ್, ಸುಭಾಷ್ ಶೆಟ್ಟಿ ಸಹಿತ ಹಲವರು ಮಾತನಾಡಿದರು. ಉಪಾಧ್ಯಕ್ಷೆ ಲಕ್ಷ್ಮೀ ಉಪಸ್ಥಿತರಿದ್ದರು. ಮುಖ್ಯಾಧಿಕಾರಿ ಮಧುಕರ್ ಕೆ. ಕಾರ್ಯಕ್ರಮ ನಿರ್ವಹಿಸಿ ಸ್ವಾಗತಿಸಿದರು.