

ಧನಂಜಯ ಗುರುಪುರ
ಕಳೆದ ಮೂರು ವರ್ಷದಿಂದ ನಿರ್ವಹಣೆ ಕೊರತೆಯಿಂದ ತುಕ್ಕು ಹಿಡಿದಿರುವ ಮೂಲರಪಟ್ಣ ತೂಗುಸೇತುವೆ ದುರಸ್ತಿಗೊಳಿಸುವಂತೆ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಸಾರ್ವಜನಿಕರು ಮನವಿ ಮಾಡಿದ್ದಾರೆ.
ಮಂಗಳೂರು ತಾಲೂಕಿನ ಮುತ್ತೂರು ಗ್ರಾಪಂ ಮತ್ತು ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಪಂ ವ್ಯಾಪ್ತಿಯ ಗ್ರಾಮಸ್ಥರ ಬೇಡಿಕೆಯಂತೆ 2016ರಲ್ಲಿ ಮೂಲರಪಟ್ಣದಲ್ಲಿ ಸಾರ್ವಜನಿಕರ ಉಪಯೋಗಗಕ್ಕಾಗಿ ತೂಗುಸೇತುವೆ ನಿರ್ಮಿಸಲಾಗಿತ್ತು. ಮಂಗಳೂರು ತಾಲೂಕಿನ ಸುರತ್ಕಲ್, ಗುರುಪುರ- ಕೈಕಂಬ, ಎಡಪದವು, ಗಂಜಿಮಠ, ಕುಪ್ಪೆಪದವು ಹಾಗೂ ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ಗೆ ಸಂಪರ್ಕ ಕಲ್ಪಿಸುವ ಮೂಲರಪಟ್ಣ ಸೇತುವೆಯು 2018ರಲ್ಲಿ ಮುರಿದು ಬಿದ್ದಾಗ ಈ ತೂಗುಸೇತುವೆಯು ಸ್ಥಳೀಯರು ಹಾಗೂ ದೂರದ ಪ್ರಯಾಣಿಕರಿಗೆ ಅನಿವಾರ್ಯ ಸಂಪರ್ಕ ಸೇತುವಾಗಿತ್ತು. ಮೂಲರಪಟ್ಣದಲ್ಲಿ ಹೊಸದಾಗಿ ನಿರ್ಮಿಸಲಾದ ಸೇತುವೆಯು 2021ರ ನವೆಂಬರ್ 21ರಂದು ಉದ್ಘಾಟನೆಗೊಂಡಿತ್ತು. ಬಳಿಕ ಮೂಲರಪಟ್ಣ ತೂಗುಸೇತುವೆ ಅನಾಥವಾಗಿದೆ.
ಕಳೆದ ಮೂರು ವರ್ಷದಿಂದ ತೂಗುಸೇತುವೆಯ ಒಂದು ಪಾರ್ಶ್ವದಲ್ಲಿ ಯಥೇಚ್ಛ ಗಿಡಗಂಟಿ ಬೆಳೆದಿದ್ದು, ನಡೆದಾಡುವುದು ಕಷ್ಟಕರವಾಗಿದೆ. ಆಳೆತ್ತರ ಬೆಳೆದಿರುವ ಪೊದೆಯಿಂದ ತೂಗುಸೇತುವೆ ಕಾಣದಂತಾಗಿದೆ. ಹಾವಸೆ ಹಿಡಿದಿರುವುದರಿಂದ ಮಳೆಗಾಲದಲ್ಲಿ ನಡೆದಾಡುವುದು ಅಪಾಯಕಾರಿ. ಇದರ ಬೋಲ್ಟ್ಗಳು, ನೆಟ್, ಉಕ್ಕಿನ ಸರಳುಗಳಿಗೆ ತುಕ್ಕು ಹಿಡಿದಿದೆ. ಪ್ರಸಕ್ತ ಇದರ ನಿರ್ವಹಣೆಗೆ ಕನಿಷ್ಠ 10 ಲಕ್ಷ ರೂ. ಅಗತ್ಯವಿದೆ. ನಿರ್ವಹಣೆ ಕೊರತೆಯಿಂದ ಇದರ ಬಾಳಿಕೆ ಕುಂಠಿತಗೊಳ್ಳುತ್ತಿದೆ ಎಂಬುದು ತೂಗುಸೇತುವೆ ತಜ್ಞರ ಅಭಿಪ್ರಾಯ.
ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರವಿದ್ದಾಗ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಆಗಿನ ಅಧ್ಯಕ್ಷೆ ನಿವೇದಿತಾ ಆಳ್ವ ಅವರ ಮುತುವರ್ಜಿಯಲ್ಲಿ 2014-15ರಲ್ಲಿ ಫಲ್ಗುಣಿ ನದಿಗೆ ಅಡ್ಡಲಾಗಿ ನಿರ್ಮಾಣ ಕಾರ್ಯ ಆರಂಭಗೊಂಡಿದ್ದ ಮೂಲರಪಟ್ಣ ತೂಗುಸೇತುವೆ 2016ರ ಆಗಸ್ಟ್ 11ರಂದು ಉದ್ಘಾಟನೆಗೊಂಡಿತ್ತು. ಪ್ರಾಧಿಕಾರದ 1.40 ಕೋಟಿ ರೂ. ಅನುದಾನದಲ್ಲಿ ನಿರ್ಮಾಣ ಕಾರ್ಯ ಆರಂಭಗೊಂಡಿದ್ದ ಇದಕ್ಕೆ ಮಂಗಳೂರು ಉತ್ತರದ ಆಗಿನ ಶಾಸಕ ಮೊದಿನ್ ಬಾವಾ ಹಾಗೂ ಬಂಟ್ವಾಳ ಶಾಸಕ ಬಿ.ರಮಾನಾಥ ರೈ ತಮ್ಮ ಶಾಸಕರ ನಿಧಿಯಿಂದ ತಲಾ 5 ಲಕ್ಷ ರೂ. ಒದಗಿಸಿದ್ದರು. ಇದು ಒಟ್ಟು 1.50 ಕೋಟಿ ರೂ. ವೆಚ್ಚದ ಕಾಮಗಾರಿಯಾಗಿದೆ. ಇದರ ಉದ್ದ 160 ಮೀಟರ್, ಅಗಲ ಒಂದೂವರೆ ಮೀಟರ್ ಆಗಿದ್ದರೆ, ಎಲ್ಲ ಪಿಲ್ಲರ್ಗಳಿಂದ ಸುಮಾರು 10 ಮೀಟರ್ ಎತ್ತರದಲ್ಲಿದೆ
ಯಾವುದೇ ವಿಪತ್ತು ಸಂಭವಿಸಿದ ಸಂದರ್ಭ ಬಡಗಬೆಳ್ಳೂರು ಮತ್ತು ಮುತ್ತೂರು ಗ್ರಾಪಂ ವ್ಯಾಪ್ತಿಯ ಗ್ರಾಮಸ್ಥರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಇಲ್ಲೊಂದು ತೂಗುಸೇತುವೆ ನಿರ್ಮಿಸುವಂತೆ ಸಾರ್ವಜನಿಕರು ಬೇಡಿಕೆ ಇಟ್ಟಿದ್ದರು. ಅದರಂತೆ ನಿರ್ಮಾಣಗೊಂಡಿದ್ದ ಈ ತೂಗುಸೇತುವೆಯು ಮೂಲರಪಟ್ಣ ಸೇತುವೆ ಮುರಿದು ಬಿದ್ದಾಗ 2018ರಿಂದ 2021ರವರೆಗೆ ಮಂಗಳೂರು- ಬಂಟ್ವಾಳ ಭಾಗದ ಪ್ರಯಾಣಿಕರಿಗೆ ಸಂಪರ್ಕ ಕೊಂಡಿಯಾಗಿತ್ತು. ಹೊಸ ಸೇತುವೆ ನಿರ್ಮಾಣದ ಬಳಿಕ ತೂಗುಸೇತುವೆ ಕೇಳುವವರಿಲ್ಲದಂತಾಗಿದೆ. - ಹರಿಯಪ್ಪ ಮುತ್ತೂರು, ರಾಜ್ಯ ಧಾರ್ಮಿಕ ಪರಿಷತ್ತಿನ ದ.ಕ ಜಿಲ್ಲಾ ಸದಸ್ಯ