ಮರವೇ ಸರ್ವರೋಗಕ್ಕೆ ಪರಿಹಾರ

0706KLB01
Published on

ಕಲಬುರಗಿ: ಕೋವಿಡ್ ವೇಳೆಯಲ್ಲಿ ಔಷಧ, ಮಾತ್ರೆಗಿಂತ ಹೆಚ್ಚಾಗಿ ಆಮ್ಲಜನಕ್ಕಾಗಿ ಜನರು ಪರದಾಡುತ್ತಿದ್ದರು. ಉತ್ತಮ ಗಾಳಿ ಬೇಕಿತ್ತು. ಅಂತಹ ದುಸ್ಥಿತಿಗೆ ಮರಗಳ ಕಡಿತ ಕಾರಣ. ಮರಗಳು ಎಲ್ಲ ರೋಗಕ್ಕೂ ಮದ್ದಾಗಿದ್ದು, ಸಸಿಗಳನ್ನು ನೆಟ್ಟು ಪೋಷಿಸುವುದು ಎಲ್ಲ ಕರ್ತವ್ಯ ಎಂದು ಶ್ರೀ ಸಿದ್ಧಲಿಂಗ ಸ್ವಾಮೀಜಿ ನುಡಿದರು.

ನಗರದ ಮಕ್ತಂಪುರ ಗದ್ದುಗೆ ಮಠದದಲ್ಲಿ ಭಾನುವಾರ ಏರ್ಪಡಿಸಿದ್ದ ೫೭ನೇ ವರ್ಷದ ಸದ್ಭಾವ ಗೋಷ್ಠಿ, ಶಿವಯೋಗಿತ್ರಯರ ಪುಣ್ಯಸ್ಮರಣೆ, ಶ್ರೀಕುಮಾರ ಕಲ್ಪವೃಕ್ಷ ಪರಿಸರ ಸಂರಕ್ಷಣೆ ಅಭಿಯಾನದಡಿ ಲಕ್ಷವೃಕ್ಷ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಪರಿಸರ ಉಳಿಸುವ ಕಾರ್ಯ ನಿರಂತರವಾಗಿ ಸಾಗಬೇಕು. ಕಸ ಎನ್ನುವ ಹಲವು ಸಸಿಗಳು ಜೀವ ಉಳಿಸುವ ಮದ್ದಾಗಿವೆ ಎಂದು ಹೇಳಿದರು.
ಲಕ್ಷ ಸಸಿಗಳನ್ನು ನೆಡುವುದು ದೇವರ ಕಾರ್ಯವಾಗಿದೆ. ಅದನ್ನು ಶ್ರೀಮಠದ ಮಾಡುತ್ತಿರುವುದು ಶ್ಲಾಘನೀಯ. ಕರ್ನಾಟಕದಲ್ಲಿ ಸಿದ್ಧಗಂಗೆ, ಸುತ್ತೂರು, ಧಾರವಾಡದ ಮುರುಘಾ ಮಠ, ಭಾಲ್ಕಿ ಸೇರಿ ಹಲವು ಮಠಗಳು ಶೈಕ್ಷಣಿಕ, ಸಾಮಾಜಿಕ ಕ್ರಾಂತಿ ಮಾಡಿವೆ. ಈ ನಿಟ್ಟಿನಲ್ಲಿ ಗದ್ದುಗೆ ಮಠ ಚಿರಸ್ಥಾಯಿಯಾಗುವ ಕಾರ್ಯ ಮಾಡಿದೆ ಎಂದು ಬಣ್ಣಿಸಿದರು.

ಶಾಸಕ ಅಲ್ಲಮಪ್ರಭು ಪಾಟೀಲ್ ಮಾತನಾಡಿ, ಭೂಮಿಗೆ ಬಿದ್ದ ಬೀಜ, ಎದೆಗೆ ಬಿದ್ದ ಅಕ್ಷರ ನೀಡುವ ಕೊಡುಗೆ ಅಪಾರ. ಹಸಿರು ಪರಿಸರ, ಗಿಡಗಳಿಂದ ಉತ್ತಮ ಮಳೆ ಬೆಳೆ ಆಗಿ, ಶುದ್ಧ ಗಾಳಿ ದೊರೆಯುತ್ತದೆ. ಕೈಗಾರಿಕೆ, ಮನುಷ್ಯನ ಅತಿ ದುರಾಸೆಯಿಂದ ಮರಗಳ ನಾಶವಾಗುತ್ತಿರುವುದು ದುರದೃಷ್ಟಕರ. ಪೂಜ್ಯರ ಲಕ್ಷವೃಕ್ಷದಂತ ಅಭಿಯಾನಕ್ಕೆ ಸರ್ವರೂ ಕೈಜೋಡಿಸಬೇಕು. ಸರ್ಕಾರದ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಶ್ರೀ ಮಡಿವಾಳ ರಾಜಯೋಗೇಂದ್ರ ಸ್ವಾಮೀಜಿ, ಶ್ರೀ ಚರಲಿಂಗ ಸ್ವಾಮೀಜಿ, ಶ್ರೀ ಸದಾಶಿವ ಸ್ವಾಮೀಜಿ, ಶ್ರೀ ಶಿವಾನಂದ ಸ್ವಾಮೀಜಿ, ಶ್ರೀ ನಿರುಪಾದಿ ದೇವರು, ಶ್ರೀ ಶಿವಕುಮಾರ ದೇವರು, ಪ್ರಮುಖರಾದ ಎಚ್‌ಕೆಇ ಮಾಜಿ ಅಧ್ಯಕ್ಷ ಬಸವರಾಜ ಭೀಮಳ್ಳಿ, ವೀರಶೈವ ಮಹಾಸಭೆ ಜಿಲ್ಲಾಧ್ಯಕ್ಷ ಶರಣು ಮೋದಿ, ಕೆಕೆಸಿಸಿಐ ಅಧ್ಯಕ್ಷ ಶಶಿಕಾಂತ ಪಾಟೀಲ್, ಶಿವಶರಣಪ್ಪ ಗೋಗಿ, ಬಸವರಾಜ ಸುಳ್ಳಿಕೇರಿ, ಶರಣು ಪಪ್ಪಾ, ಶರಣು ಪಪ್ಪಾ ಇತರರಿದ್ದರು.

ದೆಹಲಿಯಲ್ಲಿ ಉಸಿರಾಡಲು ಶುದ್ಧ ಗಾಳಿ ದೊರೆಯುತ್ತಿಲ್ಲ. ಹೊರಗೆ ಬಾರದಂತ ಸ್ಥಿತಿ ಸೃಷ್ಟಿಯಾಗಿದೆ. ಪರಿಸರ ಮಾಲಿನ್ಯ ಮನುಷ್ಯ ನಿರ್ವಹಿಸದಿದ್ದರೆ ಜೀವನ ಕಷ್ಟಕರವಾಗಲಿದೆ. ಶುದ್ಧೀಕರಣಕ್ಕೆ ಎಲ್ಲರೂ ಪ್ರಯತ್ನಿಸೋಣ. ಮಠಗಳು ಪರಿಸರ ರಕ್ಷಣೆಯ ದಾರಿಯಲ್ಲಿ ತೆಗೆದುಕೊಂಡು ಹೋಗುತ್ತಿವೆ.
| ಅಲ್ಲಮಪ್ರಭು ಪಾಟೀಲ್, ಶಾಸಕ

ಶ್ರೀಮಠದಿಂದ ಶ್ರೀಕುಮಾರ ಕಲ್ಪವೃಕ್ಷ ಪರಿಸರ ಸಂರಕ್ಷಣೆ ಅಭಿಯಾನದಡಿ ಲಕ್ಷವೃಕ್ಷ ಅಭಿಯಾನ ಕೈಗೊಂಡಿದ್ದು, ಭಕ್ತರ ಸಹಕಾರದಲ್ಲಿ ಬೀಜದುಂಡೆ, ಸಸಿ ಪೋಷಣೆ ಮಾಡಿ, ಸಸಿಗಳನ್ನು ವಿತರಿಸಲಾಗಿದೆ. ಶ್ರೀಮಠದ ಎಲ್ಲ ಭಕ್ತರ ಸಹಕಾರದಲ್ಲಿ ಇಂತಹ ಬೃಹತ್ ಅಭಿಯಾನ ಸಾಧ್ಯವಾಗಿದೆ. ನೆಟ್ಟ ಸಸಿಗಳ ರಕ್ಷಣೆ ಎಲ್ಲರದ್ದು.
| ಶ್ರೀ ಚರಲಿಂಗ ಸ್ವಾಮೀಜಿ
ಮಕ್ತಂಪುರ ಗದ್ದುಗೆ ಮಠ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net