ಮುಜರಾಯಿ ಇಲಾಖೆ ವ್ಯಾಪ್ತಿಯ ಕೆಲ ದೇವಾಲಯಗಳ ಸೇವಾ ಶುಲ್ಕ ಏರಿಕೆ

Kukke Temple
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ
Published on

ಬೆಂಗಳೂರು: ರಾಜ್ಯದ ಮುಜರಾಯಿ ಇಲಾಖೆ ವ್ಯಾಪ್ತಿಯ ಕೆಲ ದೇವಾಲಯಗಳ ಸೇವಾ ಶುಲ್ಕ ಏರಿಕೆ ಮಾಡಲಾಗಿದ್ದು, ಅಕ್ಟೋಬರ್ 1 ರಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ.

ಕಳೆದ ಐದು ವರ್ಷಗಳಿಂದ ಸೇವಾಶುಲ್ಕ ಪರಿಷ್ಕರಣೆ ಮಾಡದ ಹಾಗೂ ಸೇವಾಶುಲ್ಕ ಪರಿಷ್ಕರಣೆಗೆ ಮನವಿ ಸಲ್ಲಿಸಿದ್ದ ದೇವಾಲಯಗಳ ಸೇವಾ ಶುಲ್ಕವನ್ನು ಹೆಚ್ಚಿಸಲಾಗಿದೆ. ಆಗಮ ಪಂಡಿತರ ಪರಿಶೀಲನೆ ನಂತರ ಶೇ.5-10 ವರೆಗೆ ಮತ್ತು ಕೆಲವು ದೇವಾಲಯಗಳಿಗೆ ಶೇ.15ರವರೆಗೆ ಶುಲ್ಕ ಏರಿಕೆ ಮಾಡಿ ಮುಜರಾಯಿ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಇದು ದೇವಾಲಯಗಳ ಆಡಳಿತ ಮಂಡಳಿ ತೀರ್ಮಾನವೇ ಹೊರತು ಸರಕಾರದ ನಿರ್ಧಾರವಲ್ಲವೆಂದು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಕುಕ್ಕೆ ಸುಬ್ರಹ್ಮಣ್ಯದಲ್ಲಿ 2010ರಲ್ಲಿ ಸೇವಾಶುಲ್ಕ ಏರಿಕೆ ಮಾಡಲಾಗಿತ್ತು. 15 ವರ್ಷಗಳ ನಂತರ ಇದೀಗ ಸೇವಾಶುಲ್ಕ ಹೆಚ್ಚಳ ಮಾಡಲಾಗಿದೆ. ಕುಕ್ಕೆಯಲ್ಲಿ ಆಶ್ಲೇಷ ಪೂಜೆ ಸೇವಾದ ದರವನ್ನು 400 ರೂ. ಗಳಿಂದ 500 ರೂ.ಗೆ ಏರಿಕೆ ಮಾಡಲಾಗಿದೆ. ಅದೇ ರೀತಿ ನಾಗಪ್ರತಿಷ್ಠೆ ದರವನ್ನೂ 400 ರಿಂದ 500 ರೂ. ಗೆ ಹೆಚ್ಚಿಸಲಾಗಿದೆ. ರೂಪಾಯಿ. ಆದರೆ ಧಾರ್ಮಿಕ ದತ್ತಿ ಇಲಾಖೆ ಪರಿಷ್ಕೃತ ದರ 500 ರೂಪಾಯಿ ಹೆಚ್ಚಿಸಿದೆ. ಹೀಗೆ ಉಳಿದ ಸೇವೆಗಳಲ್ಲೂ ದರ ಹೆಚ್ಚಳ ಮಾಡಲಾಗಿದೆ.

ಸೇವಾ ದರ ಏರಿಕೆ ಆದ ದೇವಸ್ಥಾನಗಳು:

*ಬೆಂಗಳೂರು ನಗರದಲ್ಲಿ ಮಲ್ಲೇಶ್ವರದ ಯೋಗ ನರಸಿಂಹಸ್ವಾಮಿ ದೇವಾಲಯ, ನಂದಿ ತೀರ್ಥ ದೇವಾಲಯ ಮತ್ತು ಮಹಾಗಣಪತಿ ದೇವಾಲಯ.

*ಚಿಕ್ಕಬಳ್ಳಾಪುರದ ವಿಧುರಾಶ್ವಥ ನಾರಾಯಣ ಸ್ವಾಮಿ ದೇವಾಲಯ ಮತ್ತು ತಲಕಾಯ ಬೆಟ್ಟಿದ ವೆಂಕಟರಮಣ ದೇವಾಲಯ.

*ದಕ್ಷಿಣ ಕನ್ನಡದ ಪುತ್ತೂರಿನ ಮಹಾಲಿಂಗೇಶ್ವರ ದೇವಾಲಯ, ಕುಕ್ಕೆ ಸುಬ್ರಮಣ್ಯ ದೇವಾಲಯ, ಸೌತಡ್ಕ ಮಹಾಗಣಪತಿ ದೇವಾಲಯ ಮತ್ತು ಮಾರಾಳಿಯ ಸೂರ್ಯನಾರಾಯಣ ಸ್ವಾಮಿ ದೇವಾಲಯ.

*ಬೆಂಗಳೂರು ದಕ್ಷಿಣ ಜಿಲ್ಲೆ (ರಾಮನಗರ)ದ ದೇವರ ಹೊಸಹಳ್ಳಿಯ ಆಂಜನೇಯ ಸ್ವಾಮಿ ದೇವಾಲಯ.

*ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ದೇವಪೂರುವಿನ ಹಾಲು ರಾಮೇಶ್ವರ ದೇವಾಲಯ.

*ರಾಯಚೂರು ಜಿಲ್ಲೆಯ ದೇವಸೂಗೂರಿನ ಸೂಗೂರೇಶ್ವರ ಸ್ವಾಮಿ ದೇವಾಲಯ,

* ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಮಂದಾರ್ತಿಯ ದುರ್ಗಾಪರಮೇಶ್ವರಿ ದೇವಾಲಯ.

*ಕೊಪ್ಪಳ ಜಿಲ್ಲೆಯ ಹುಲಿಗಿಯ ಹುಲಿಗೆಮ್ಮ ದೇವಾಲಯ.

*ಮಂಡ್ಯ ಜಿಲ್ಲೆ ಮೇಲುಕೋಟೆಯ ಚೆಲುವ ನಾರಾಯಣ ಸ್ವಾಮಿ ದೇವಾಲಯದಲ್ಲಿ ಸೇವಾ ದರ ಹೆಚ್ಚಳ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net