

* ಬಿರುಸುಗೊಂಡ ಆಕಾಂಕ್ಷಿತರ ಚಟುವಟಿಕೆಗಳು
* ಹೈಕಮಾಂಡ್ ಅಂಗಳದಲ್ಲಿದೆ ಭವಿಷ್ಯ!
ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ
ಚನ್ನಪಟ್ಟಣ ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಚುನಾವಣೆಗೆ ಜ.4ಕ್ಕೆ ಮುಹೂರ್ತ ನಿಗದಿಯಾಗಿದೆ. ಚುನಾವಣೆ ಘೋಷಣೆ ಬೆನ್ನಲ್ಲೇ ಆಕಾಂಕ್ಷಿತರ ಚಟುವಟಿಕೆ ಬಿರುಸುಗೊಂಡಿವೆ.
ಅಧ್ಯಕ್ಷ ಸ್ಥಾನ ಬಿಸಿಎ (ಹಿಂದುಳಿದ ವರ್ಗ) ಹಾಗೂ ಉಪಾಧ್ಯಕ್ಷ ಸ್ಥಾನ ಎಸ್ಸಿ (ಪರಿಶಿಷ್ಟ ಜಾತಿ)ಗೆ ಮೀಸಲಾಗಿದ್ದು, ಮೀಸಲು ಅರ್ಹ ಸದಸ್ಯರು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಆಕಾಂಕ್ಷಿತರ ಪಟ್ಟಿಯೂ ದೊಡ್ಡದಾಗಿದೆ.
31 ಸದಸ್ಯ ಬಲದ ನಗರಸಭೆಯಲ್ಲಿ ಜೆಡಿಎಸ್‌ನಿಂದ 16, ಕಾಂಗ್ರೆಸ್ ಮತ್ತು ಬಿಜೆಪಿಯಿಂದ ತಲಾ 7 ಹಾಗೂ ಒರ್ವ ಪಕ್ಷೇತರ ಸದಸ್ಯೆ ಆಯ್ಕೆಯಾಗಿದ್ದರು. ಆದರೆ, ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಹಲವು ಸದಸ್ಯರು ಕಾಂಗ್ರೆಸ್‌ಗೆ ಸೇರ್ಪಡೆಯಾದ ಹಿನ್ನೆಲೆಯಲ್ಲಿ ನಗರಸಭೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಹೊಂದಿದೆ. ಮೈತ್ರಿ ಪಕ್ಷದಲ್ಲಿ 5 ಮಂದಿ ಸದಸ್ಯರು ಮಾತ್ರ ಗುರುತಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಎರಡು ಸ್ಥಾನಗಳು ಕೈ ವಶವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
ಬಿಸಿಎ ಹಿಂದುಳಿದ ವರ್ಗಕ್ಕೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿತರ ಸಂಖ್ಯೆ ಹೆಚ್ಚಾಗಿದೆ. 17ನೇ ವಾರ್ಡ್‌ನ ವಾಸಿಲ್ ಆಲಿಖಾನ್, 22ನೇ ವಾರ್ಡ್‌ನ ಶಾಭೀರ್, 18ನೇ ವಾರ್ಡ್‌ನ ಲಿಯಾಕತ್, 24ನೇ ವಾರ್ಡ್‌ನ ಸಯ್ಯದ್ ರಫೀಕ್, 23ನೇ ವಾರ್ಡ್‌ನ ಮತೀನ್, 11ನೇ ವಾರ್ಡ್‌ನ ಬಿ.ಎನ್. ನಾಗೇಶ್, 5ನೇ ವಾರ್ಡ್‌ನ ಎಂ.ಜೆ.ರೇವಣ್ಣ ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿದ್ದಾರೆ. ಇನ್ನು ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಉಪಾಧ್ಯಕ್ಷ ಸ್ಥಾನಕ್ಕೆ 14ನೇ ವಾರ್ಡ್‌ನ ಶ್ರೀನಿವಾಸಮೂರ್ತಿ ಹಾಗೂ 12ನೇ ವಾರ್ಡ್‌ನ ಲೋಕೇಶ್ ಪೈಪೋಟಿ ನಡೆಸುತ್ತಿದ್ದಾರೆ.
ಅಧ್ಯಕ್ಷ ಸ್ಥಾನ ಅಲಂಕರಿಸಲು ಹಲವು ಸದಸ್ಯರು ಕಸರತ್ತು ಶುರುವಿಟ್ಟುಕೊಂಡಿದ್ದಾರೆ. ಆದರೆ, ಅಧ್ಯಕ್ಷ ಸ್ಥಾನ ಯಾರ ಪಾಲಾಗಲಿದೆ ಎಂಬುದರ ಭವಿಷ್ಯ ಹೈಕಮಾಂಡ್ ಅಂಗಳದಲ್ಲಿದೆ ಎಂಬುದು ಎಲ್ಲ ಆಕಾಂಕ್ಷಿತರಿಗೂ ಅರಿವಿದೆ. ಈ ಹಿನ್ನೆಲೆಯಲ್ಲಿ ಹೈಕಮಾಂಡ್ ಮನವೊಲಿಸುವ ಹರಸಾಹಸಕ್ಕೂ ಕೆಲ ಸದಸ್ಯರು ಮುಂದಾಗಿದ್ದಾರೆ. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಯಾರು ಅಲಂಕರಿಸಬೇಕು ಎಂಬುದರ ಹಿಂದೆ ಮಾಜಿ ಸಂಸದ ಡಿ.ಕೆ.ಸುರೇಶ್ ಮಾತೇ ಅಂತಿಮ ಎನ್ನಲಾಗುತ್ತಿದೆ. ಈ ವಿಚಾರವಾಗಿ ಕ್ಷೇತ್ರದ ಶಾಸಕ ಸಿ.ಪಿ.ಯೋಗೇಶ್ವರ್ ಕೂಡ ಹೈಕಮಾಂಡ್ ಕಡೆ ಬೊಟ್ಟು ತೋರಿಸುತ್ತಿರುವುದು ಇದನ್ನು ಸ್ಪಷ್ಟಪಡಿಸಿದೆ.
ಚನ್ನಪಟ್ಟಣ ನಗರಸಭೆ ಅಧ್ಯಕ್ಷ ಸ್ಥಾನ ಮೂಲ ಕಾಂಗ್ರೆಸ್ಸಿಗರಿಗೆ ಸಿಗುತ್ತದೆಯೋ ಅಥವಾ ಇತ್ತೀಚೆಗೆ ಪಕ್ಷ ಸೇರ್ಪಡೆಯಾದ ವಲಸಿಗರಿಗೆ ಸಿಗಲಿದೆಯೋ? ಎಂಬ ಕುತೂಹಲ ಮೂಡಿಸಿದೆ. ಕಾಂಗ್ರೆಸ್‌ನಿಂದ ಚುನಾಯಿತರಾಗಿರುವ ವಾಸಿಲ್, ಶಾಭೀರ್, ಲಿಯಾಕತ್, ಮತೀನ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿತರಾಗಿದ್ದರೆ, ಜೆಡಿಎಸ್‌ನಿಂದ ಕಾಂಗ್ರೆಸ್ ಸೇರ್ಪಡೆಯಾದ ನಾಗೇಶ್, ರೇವಣ್ಣ ಹಾಗೂ ಸಯ್ಯದ್ ರಫೀಕ್ ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿದ್ದಾರೆ. ಈ ಹಿಂದೆ ಕಾಂಗ್ರೆಸ್‌ಗೆ ಯಾವುದೇ ಬಹುಮತ ಇರಲಿಲ್ಲ. ನಾವುಗಳು ಬಂದ ಬಳಿಕ ಪಕ್ಷಕ್ಕೆ ಬಹುಮತ ಬಂದಿದೆ. ಈ ಹಿನ್ನೆಲೆಯಲ್ಲಿ ನಿಮ್ಮನ್ನು ನಂಬಿ ಬಂದಿರುವ ನಮಗೆ ಅಧಿಕಾರ ಕೊಡಿ ಎಂಬುದು ವಲಸಿಗ ಸದಸ್ಯರ ಒತ್ತಾಯವಾಗಿದೆ. ಇದರ ಮಧ್ಯೆ ಹಿರಿತನ ಹಾಗೂ ಪಕ್ಷ ನಿಷ್ಠೆಯ ಆಧಾರದ ಮೇಲೆ ನಮ್ಮನ್ನು ಪರಿಗಣಿಸಿ ಎಂಬುದು ಮೂಲ ಕಾಂಗ್ರೆಸ್ ಸದಸ್ಯರ ಕೋರಿಕೆಯಾಗಿದೆ. ಒಟ್ಟಾರೆ, ಅಧ್ಯಕ್ಷ ಸ್ಥಾನ ಯಾರ ಪಾಲು ಎಂಬುದು ಗುಟ್ಟಾಗಿ ಇರುವುದಂತೂ ಸುಳ್ಳಲ್ಲ.