

ವಿಜಯವಾಣಿ ಸುದ್ದಿಜಾಲ ಕಾಸರಗೋಡು
ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಶತಮಾನದ ಮೊದಲ ಮೂಡಪ್ಪ ಸೇವೆ ಶನಿವಾರ ಜರುಗಲಿದೆ. ಕುಂಬಳೆ ಸೀಮೆಯ ಅತಿ ದೊಡ್ಡ ಸಂಭ್ರಮವಾಗಿ ಮೂಡಪ್ಪ ಸೇವೆಗೆ ಮಧೂರು ದೇಗುಲ ಅಣಿಯಾಗಿದೆ. ಮಹಾ ಉತ್ಸವಕ್ಕೆ ಲಕ್ಷಾಂತರ ಭಕ್ತರು ಮಧೂರಿಗೆ ಬಂದು ಸೇರಲಿದ್ದಾರೆ.
ಕಳೆದ 14 ವರ್ಷಗಳಿಂದ ನವೀಕರಣ ಜೀರ್ಣೋದ್ಧಾರ ಪ್ರಕ್ರಿಯೆ ಪೂರ್ತಿಗೊಂಡು ಏ.27ರಂದು ಪುನಃ ಪ್ರತಿಷ್ಠಾಪನಾ ಬ್ರಹ್ಮಕಲಶ, ಮೂಡಪ್ಪ ಸೇವಾ ಕಾರ್ಯಕ್ರಮಗಳಿಗೆ ಚಾಲನೆ ದೊರತಿದೆ.
ದೇವಳದಲ್ಲಿ ಶುಕ್ರವಾರ ಅಕ್ಕಿ ಮುಹೂರ್ತ ನೆರವೇರಿತು. ಬೆಳಗ್ಗೆ ದೀಪದ ಬಲಿ, ಶತರುದ್ರಾಭಿಷೇಕ, 128 ಕಾಯಿ ಅಷ್ಟದ್ರವ್ಯ ಮಹಾಗಣಪತಿ ಯಾಗ ನೆರವೇರಿತು. ಪಾರಂಪರಿಕ ಒನಕೆ, ಬೀಸುವ ಕಲ್ಲಿನ ಮೂಲಕ ಅಕ್ಕಿ ಹುಡಿಮಾಡುವ ಪ್ರಕ್ರಿಯೆ ನಡೆಯಲಿದ್ದು, ಶ್ರೀದೇವರ ನಡೆಯಲ್ಲಿ ಅರೆಯುವ ಕಲ್ಲು ಒನಕೆ, ಬೀಸುವ ಕಲ್ಲಿಗೆ ಪೂಜೆ ನಡೆಸಲಾಯಿತು.
ಅಪ್ಪ ತಯಾರಿ ನೇತೃತ್ವ
ದೇವ ನರ್ತಕ, ಮಧೂರು ಕ್ಷೇತ್ರ ಸಿಬ್ಬಂದಿ ಧನಂಜಯ ಈ ಬಾರಿಯ ಮೂಡಪ್ಪ ಸೇವೆಯ ಅಪ್ಪ ತಯಾರಿಯ ನೇತೃತ್ವ ವಹಿಸಿದ್ದಾರೆ. ಇವರು 1962 ಹಾಗೂ 1992ರ ಮೂಡಪ್ಪ ಸೇವೆಯಲ್ಲಿ ಆ ಕಾಲದ ಪ್ರಸಿದ್ಧ ದೇವ ನರ್ತಕ ಪಡುಕಕ್ಕೆಪ್ಪಾಡಿ ರಾಮಕೃಷ್ಣ ಭಟ್ಟ ಅವರ ಪುತ್ರ. 1992ರಲ್ಲಿ ತಂದೆ ಜತೆ ಧನಂಜಯ ಸಹಾಯಕರಾಗಿ ಅಪ್ಪ ನಿರ್ಮಾಣದಲ್ಲಿ ಕೈ ಜೋಡಿಸಿದ್ದರು. ಮಧೂರು ಕ್ಷೇತ್ರದಲ್ಲಿ ಸೇವೆಯ ಜತೆಗೆ ಕೇರಳದ ಅತ್ಯಂತ ವಿಶಿಷ್ಟವಾದ ತಿಡಂಬು ನೃತ್ಯದಲ್ಲೂ ಧನಂಜಯ ಪ್ರಾವೀಣ್ಯ ಪಡೆದಿದ್ದಾರೆ.