

ಮೂಲ್ಕಿ: ತುಳುನಾಡಿನ ಧಾರ್ಮಿಕ ಪರಂಪರೆಯ ಬ್ರಹ್ಮರಥ ತಯಾರಿಯನ್ನು ಡಿಜಿಟಲೀಕರಣದ ಮೂಲಕ ಜಗತ್ತಿಗೆ ಪರಿಚಯಿಸುವ ದೃಷ್ಟಿಯಿಂದ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಬ್ರಹ್ಮರಥದ 3ಡಿ ಅನಿಮೇಷನ್ ಮಾದರಿ ತಯಾರಿಸಲಾಗಿದೆ. ಹಳೆಯಂಗಡಿ ಸರ್ಕಾರಿ ಕಾಲೇಜಿನ ಪ್ರಥಮ ಎಂಕಾಂ ವಿದ್ಯಾರ್ಥಿ, ಮುಂಡ್ಕೂರು ರಾಧಾಕೃಷ್ಣ ರಾವ್ ಪುತ್ರ ಅಭಿರಾಮ್ ಸತತ ಒಂದು ವರ್ಷ ರಥ ವಿನ್ಯಾಸ ಬಗ್ಗೆ ಅಭ್ಯಾಸ ಮಾಡಿ, 3 ತಿಂಗಳ ಅವಧಿಯಲ್ಲಿ ರಥದ 3ಡಿ ಮಾಡೆಲ್ ತಯಾರು ಮಾಡಿದ್ದಾರೆ. ರಥದ ಜಿಡ್ಡೆ ಹಾಗೂ ರಥಕ್ಕೆ ಬಳಸುವ ಎಲ್ಲ ಪರಿಕರ, ಪತಾಕೆ, ಕೊಡೆ, ಜಾಲರಿ ಎಲ್ಲದರ ಪ್ರತ್ಯೇಕ 3ಡಿ ಮಾಡೆಲ್ ತಯಾರಿಸಿ, ರಥ ಜೋಡಿಸುವ ರೀತಿಯಲ್ಲಿಯೇ 3ಡಿ ಅನಿಮೇಷನ್ ಮಾಡಿದ್ದಾರೆ. ವಾತ್ರವಲ್ಲದೆ ದೇವರ ಅಟ್ಟೆ ಇರುವ ಬಲಿಮೂರ್ತಿಯನ್ನೂ ರಚಿಸಿದ್ದಾರೆ. 3ಡಿ ಮಾಡೆಲ್ ತಯಾರಿಸಲು ಸಹಕರಿಸಿದ ದೇವಸ್ಥಾನದ ಅರ್ಚಕ ವರ್ಗ, ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಕಳೆದ ವರ್ಷ ಗಣೇಶ ಚೌತಿ ಸಂದರ್ಭ ಚತುರ್ಭುಜ ಗಣಪತಿ ದೇವರ 3ಡಿ ಮಾಡೆಲ್ ಹಾಗೂ ಅನಿಮೇಷನ್ ಮಾಡಿದ್ದರು. ಮುಂದಿನ ಪ್ರಾಜೆಕ್ಟ್ ಆಗಿ ಕರಾವಳಿಯ ದೇವಸ್ಥಾನಗಳು ಹಾಗೂ ಗುತ್ತಿನ ಮನೆಯ ಅನಿಮೇಷನ್ ಮಾದರಿಗಳನ್ನು ತಯಾರಿಸಲಾಗುತ್ತಿದ್ದು ಅಂತಿಮ ಹಂತದಲ್ಲಿವೆ. ಮುಂದಿನ ವರ್ಷದಲ್ಲಿ ಮುಂಡ್ಕೂರು ದೇವಸ್ಥಾನದ ಬ್ರಹ್ಮರಥದ 3ಡಿ ಮಾಡೆಲ್ ಪೂರ್ಣಗೊಳಿಸುವ ಯೋಜನೆ ಇದೆ. ಇದರ ಜತೆ ಪೌರಾಣಿಕ ಹಾಗೂ ಜಾನಪದೀಯ ವ್ಯಕ್ತಿಗಳ ಮತ್ತು ವಸ್ತುಗಳ ಮಾಡೆಲ್ ರಚನೆ ಮಾಡುವ ಉದ್ದೇಶವನ್ನೂ ಅಭಿರಾಮ್ ಹೊಂದಿದ್ದಾರೆ.
ತುಳುನಾಡಿನ ಪರಂಪರೆ ಆರಾಧನಾ ಪದ್ಧತಿ ವಿಶೇಷವೂ ವಿಶಿಷ್ಟವೂ ಆಗಿದ್ದು, ಮುಂದಿನ ತಲೆವಾರಿಗೆ ಉಳಿಯಬೇಕು. ಈ ನಿಟ್ಟಿನಲ್ಲಿ ಡಿಜಿಟಲೀಕರಣದ ಮೂಲಕ ಸಾಧ್ಯವಿದೆ. ಈ ಬಗ್ಗೆ ಅಭಿರಾಮ್ ನಡೆಸುವ ಕಾರ್ಯದ ಬಗ್ಗೆ ಸಂತಸವಿದೆ. ಮುಂಡ್ಕೂರು ರಾಧಾಕೃಷ್ಣ ರಾವ್, ಅಭಿರಾಮ್ ತಂದೆ https://www.vijayavani.net/man-arrested-for-stealing-from-anganwadi https://www.vijayavani.net/sri-durgambika-temple-bhajane