

ಬೆಂಗಳೂರು: ಕೇಂದ್ರ ಸರ್ಕಾರದ ವಿವಿಧ ಇಲಾಖೆ, ಸಚಿವಾಲಯಗಳ ಎಂಟಿಎಸ್ (ಮಲ್ಟಿ ಟಾಸ್ಕಿಂಗ್ ಸ್ಟಾಫ್) ಹುದ್ದೆಗಳ ಭರ್ತಿಗೆ ಸಿಬ್ಬಂದಿ ಆಯ್ಕೆ ಆಯೋಗದ (ಎಸ್ಎಸ್ಸಿ) ಮೂಲಕ ನಡೆಸಲಾಗುವ ನೇಮಕಾತಿ ಪರೀಕ್ಷೆಯನ್ನು ಕನ್ನಡದಲ್ಲೂ ಬರೆಯುವುದಕ್ಕೆ ಅವಕಾಶ ಕಲ್ಪಿಸಲು ಕೇಂದ್ರ ಸರ್ಕಾರ ಸಮ್ಮತಿಸಿದೆ. ಆ ಮೂಲಕ ಕನ್ನಡಿಗರಿಗೆ ನ್ಯಾಯ ಸಿಗಬೇಕೆಂಬ ಆಶಯ, ಕಳಕಳಿಯಿಂದ ವಿಜಯವಾಣಿ ಪ್ರಕಟಿಸಿದ ವರದಿಗೆ ಗೆಲುವು ಸಿಕ್ಕಂತಾಗಿದೆ.
ಎಂಟಿಎಸ್ ಹಾಗೂ ಹವಾಲ್ದಾರ್ ಶ್ರೇಣಿಯ ಒಟ್ಟು 11 ಸಾವಿರಕ್ಕೂ ಅಧಿಕ ಹುದ್ದೆಗಳ ನೇಮಕಕ್ಕೆ ಎರಡು ದಿನಗಳ ಹಿಂದಷ್ಟೇ ಅಧಿಸೂಚನೆ ಹೊರಡಿಸಿದ್ದ ಎಸ್ಎಸ್ಸಿ, ಹಿಂದಿ ಹಾಗೂ ಇಂಗ್ಲಿಷ್ನಲ್ಲಿ ಮಾತ್ರ ಪರೀಕ್ಷೆಗೆ ಅವಕಾಶ ನೀಡಿತ್ತು. ಎಸ್ಎಸ್ಎಲ್ಸಿ ವಿದ್ಯಾರ್ಹತೆಯ ಈ ಹುದ್ದೆಗಳ ನೇಮಕಾತಿಯಲ್ಲಿ ಕನ್ನಡಿಗರಿಗೆ ಆಗುತ್ತಿದ್ದ ಅನ್ಯಾಯದ ಬಗ್ಗೆ ವಿಜಯವಾಣಿ ಗುರುವಾರದ ಸಂಚಿಕೆಯ ಮುಖಪುಟದಲ್ಲಿ ‘ಕನ್ನಡಿಗರಿಗೆ ಎಂಟಿಎಸ್ ಅನ್ಯಾಯ’ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು. ಈ ವರದಿಗೆ ತ್ವರಿತವಾಗಿ ಸ್ಪಂದಿಸಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಸಚಿವ ಜಿತೇಂದ್ರ ಸಿಂಗ್ ಜತೆ ಚರ್ಚೆ ನಡೆಸಿದರು. ಬಳಿಕ ಕೆಳ ಹಂತದ ಹುದ್ದೆಗಳಿಗೆ ಕನ್ನಡದಲ್ಲೂ ಪರೀಕ್ಷೆ ನಡೆಸಲು ಸಚಿವರು ಸಮ್ಮತಿಸಿರುವುದಾಗಿ ಪ್ರಲ್ಹಾದ ಜೋಶಿ ಮಾಹಿತಿ ನೀಡಿದ್ದಾರೆ.
ಪರಿಷತ್ನಲ್ಲಿ ಪ್ರತಿಧ್ವನಿ: ಮಲ್ಟಿ ಟಾಸ್ಕಿಂಗ್ ಸ್ಟಾಫ್(ಎಂಟಿಎಸ್) ಹುದ್ದೆ ಹಾಗೂ ಹವಾಲ್ದಾರ್ ಶ್ರೇಣಿಯ ಹುದ್ದೆ ಪರೀಕ್ಷೆಯಲ್ಲಿ ಕನ್ನಡಿಗರಿಗೆ ಅನ್ಯಾಯವಾಗುತ್ತಿರುವುದನ್ನು ಬಯಲಿಗೆಳೆದ ವಿಜಯವಾಣಿ ವರದಿ ಗುರುವಾರ ವಿಧಾನ ಪರಿಷತ್ನಲ್ಲೂ ಪ್ರತಿಧ್ವನಿಸಿತು. ಇಂಗ್ಲಿಷ್ ಮತ್ತು ಹಿಂದಿಯಲ್ಲಷ್ಟೇ ಪರೀಕ್ಷೆಗೆ ಅವಕಾಶ ನೀಡಿರುವುದ ರಿಂದ ಕನ್ನಡಿಗರಿಗೆ ಅನ್ಯಾಯವಾಗಲಿದೆ ಎಂದು ಬಿಜೆಪಿಯ ಶಶಿಲ್ ನಮೋಶಿ ವಿಜಯವಾಣಿ ವರದಿ ಪ್ರಸ್ತಾಪಿಸಿ ಆಕ್ರೋಶ ಹೊರಹಾಕಿದರು.
ಕಸಾಪ ಕಾನೂನು ಹೋರಾಟ: ಎಂಟಿಎಸ್ ಹುದ್ದೆ ವಿಚಾರವಾಗಿ ಕನ್ನಡಿಗರಿಗೆ ನ್ಯಾಯ ದೊರಕಿಸಿಕೊಡಲು ಕೇಂದ್ರ ಸರ್ಕಾರ ಭರವಸೆ ನೀಡಿದ್ದರೂ ಕೇಂದ್ರದ ನೇಮಕಾತಿ ಪ್ರಕ್ರಿಯೆಗಳಲ್ಲಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಹಾಗೂ ಸ್ವಾಯತ್ತ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ ಕಾನೂನು ಹೋರಾಟಕ್ಕೆ ನಿರ್ಧರಿಸಿದೆ. ಎಂಟಿಎಸ್ ಹುದ್ದೆಗಳ ನೇಮಕಕ್ಕೆ ಕನ್ನಡದಲ್ಲೂ ಪರೀಕ್ಷೆ ನಡೆಸುವಂತೆ ಒತ್ತಾಯಿಸಿ ನೇಮಕಾತಿ ಪ್ರಾಧಿಕಾರ, ಸಂಬಂಧಿಸಿದ ಸಚಿವರಿಗೆ ನೋಟಿಸ್ ಕಳುಹಿಸುವುದಾಗಿ ಕಸಾಪ ಅಧ್ಯಕ್ಷ ಡಾ. ಮಹೇಶ ಜೋಶಿ ಹೇಳಿದ್ದಾರೆ.
ತ್ರಿಭಾಷಾ ಸೂತ್ರ ಪಾಲಿಸಿ: ಒಕ್ಕೂಟ ವ್ಯವಸ್ಥೆಯಲ್ಲಿ ತ್ರಿಭಾಷಾ ಸೂತ್ರ ಪಾಲಿಸುವುದು ಕಡ್ಡಾಯ. ಹಿಂದಿ, ಇಂಗ್ಲಿಷ್ನಲ್ಲಿ ಬರೆಯಲು ಅವಕಾಶವಿರುವಾಗ ಕನ್ನಡದಲ್ಲೇಕಿಲ್ಲ ಎಂದು ಪ್ರಶ್ನಿಸಿದ ಅವರು, ಕೆಳ ಹಂತದ ಹುದ್ದೆಗಳಲ್ಲಿ ಸ್ಥಳೀಯರಿಗೆ ಪ್ರಾತಿನಿಧ್ಯ ಹಾಗೂ ಆದ್ಯತೆ ನೀಡಬೇಕು. ಈ ಪರೀಕ್ಷೆಗಳನ್ನು ಕನ್ನಡವೂ ಸೇರಿ ಪ್ರಾದೇಶಿಕ ಭಾಷೆಗಳಲ್ಲೂ ನಡೆಸಬೇಕು. ಈ ನಿಟ್ಟಿನಲ್ಲಿ ಕಸಾಪ ಕಾನೂನು ಹೋರಾಟಕ್ಕೆ ಮುಂದಾಗಿದೆ ಎಂದು ಜೋಶಿ ತಿಳಿಸಿದ್ದಾರೆ.
| ಪ್ರಲ್ಹಾದ್ ಜೋಶಿ ಕೇಂದ್ರ ಸಚಿವ
| ಡಾ. ಮಹೇಶ ಜೋಶಿಕಸಾಪ ಅಧ್ಯಕ್ಷದಶಕಗಳ ಬಳಿಕ ಮೊದಲು: ಎಸ್ಎಸ್ಸಿ ದಶಕಗಳ ಹಿಂದೆ ಕಾನ್ಸ್ಟೆಬಲ್ ಹುದ್ದೆಗೆ ಕನ್ನಡದಲ್ಲಿ ಪರೀಕ್ಷೆ ನಡೆಸಿತ್ತು. ಆ ಬಳಿಕ ಈ ಕ್ರಮಕ್ಕೆ ತಿಲಾಂಜಲಿ ನೀಡಿತ್ತು. ಇದರಿಂದಾಗಿ ಕನ್ನಡಿಗರು ಇತರ ರಾಜ್ಯದ ಆಕಾಂಕ್ಷಿಗಳೊಂದಿಗೆ ಪೈಪೋಟಿ ನಡೆಸುವುದು ಕಷ್ಟವಾಗಿ ಉದ್ಯೋಗಾವಕಾಶಗಳಿಂದ ವಂಚಿತರಾಗುತ್ತಿದ್ದರು. ಇದೀಗ ಮತ್ತೆ ಕನ್ನಡದಲ್ಲಿ ಪರೀಕ್ಷೆ ನಡೆಸಲು ನಿರ್ಧರಿಸುವುದು ಕನ್ನಡಿಗರಿಗೆ ಮತ್ತಷ್ಟು ಬಲ ನೀಡಲಿದೆ.
ಎಸ್ಸೆಸ್ಸೆಲ್ಸಿ ವಿದ್ಯಾರ್ಹತೆಯ 7600ಕ್ಕೂ ಅಧಿಕ ಮಲ್ಟಿ ಟಾಸ್ಕಿಂಗ್ ಸ್ಟಾಫ್, 3,603 ಹವಾಲ್ದಾರ್ ಹುದ್ದೆ ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಈ ಅಧಿಸೂಚನೆಗೆ ಸೂಕ್ತ ತಿದ್ದುಪಡಿ ಮಾಡಿ ಕನ್ನಡಿಗರು, ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಅವಕಾಶ ಕಲ್ಪಿಸಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲು ಕೋರಿದರು. ಈ ಕುರಿತು ಪ್ರತಿಕ್ರಿಯಿಸಿದ ಉತ್ತರ ನೀಡಿದ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ, ಈ ವಿಷಯವನ್ನು ಸಿಎಂ ಗಮನಕ್ಕೆ ತಂದು ಸೂಕ್ತ ಉತ್ತರ ಒದಗಿಸುವ ಭರವಸೆ ನೀಡಿದರು.
ಯಾರಿಗೆ ನೋಟಿಸ್?: ನವದೆಹಲಿಯಲ್ಲಿ ಕೇಂದ್ರ ಕಚೇರಿ ಹೊಂದಿರುವ ಎಸ್ಎಸ್ಸಿ ಅಧ್ಯಕ್ಷರಿಗೆ, ಬೆಂಗಳೂರಿನ ಕೋರಮಂಗಲದಲ್ಲಿರುವ ಪ್ರಾದೇಶಿಕ ಕಚೇರಿಯ ನಿರ್ದೇಶಕರಿಗೆ ಹಾಗೂ ಕೇಂದ್ರದ ಸಿಬ್ಬಂದಿ ಮತ್ತು ತರಬೇತಿ ಖಾತೆಯ ಸಚಿವರಿಗೆ ನೋಟಿಸ್ ಕಳುಹಿಸಲಾಗುವುದು ಎಂದು ಜೋಶಿ ತಿಳಿಸಿದ್ದಾರೆ.
ಕೇಂದ್ರ ಸಚಿವರಿಗೂ ಪತ್ರ: ಅಧಿಸೂಚನೆಯಲ್ಲಿ ತಿದ್ದುಪಡಿ ತಂದು ಕನ್ನಡದಲ್ಲೂ ಪರೀಕ್ಷೆಯಲು ಅವಕಾಶ ನೀಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕಿದೆ. ಈ ನಿಟ್ಟಿನಲ್ಲಿ ರಾಜ್ಯದ ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ಶೋಭಾ ಕರಂದ್ಲಾಜೆ ಹಾಗೂ ಭಗವಂತ್ ಖೂಬಾ ಅವರಿಗೂ ಕಸಾಪ ಪತ್ರ ರವಾನಿಸಲಿದೆ.
ಇವರಿಗೇಕೆ ಸಾಧ್ಯವಿಲ್ಲ?: ಇತ್ತೀಚೆಗಷ್ಟೇ ಕಾರ್ವಿುಕರ ರಾಜ್ಯ ವಿಮಾ ನಿಗಮ (ಇಎಸ್ಐಸಿ) ಎಂಟಿಎಸ್ ಹುದ್ದೆಗಳಿಗೆ ಕನ್ನಡದಲ್ಲೂ ಪರೀಕ್ಷೆ ಬರೆಯಲು ಅವಕಾಶ ನೀಡಿದೆ. ಬ್ಯಾಂಕಿಂಗ್ ಹುದ್ದೆಗಳಿಗೆ ನೇಮಕಾತಿ ನಡೆಸುವ ಐಬಿಪಿಎಸ್ ಕೂಡ ಕನ್ನಡದಲ್ಲಿ ಪರೀಕ್ಷೆ ಹಮ್ಮಿಕೊಂಡಿದೆ. ಹೀಗಿರುವಾಗ ಎಸ್ಎಸ್ಸಿಗೇಕೆ ಸಾಧ್ಯವಿಲ್ಲ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಶಾಶ್ವತ ಪರಿಹಾರ: ಕೇಂದ್ರದ ಹುದ್ದೆಗಳ ನೇಮಕಾತಿಯಲ್ಲಿ ಕನ್ನಡಿಗರು ಹಲವು ಸಮಸ್ಯೆ ಎದುರಿಸುತ್ತಿದ್ದಾರೆ. ಯುಪಿಎಸ್ಸಿ ನಡೆಸುವ ಮುಖ್ಯ ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯಬಹುದಾದರೂ, ಪೂರ್ವಭಾವಿ ಪರೀಕ್ಷೆಯನ್ನು ಹಿಂದಿ ಅಥವಾ ಇಂಗ್ಲಿಷ್ನಲ್ಲಿಯೇ ಬರೆಯಬೇಕು. ಕೇಂದ್ರದ ಸಾರ್ವಜನಿಕ ವಲಯದ ಉದ್ಯಮಗಳಲ್ಲೂ ನೇರ ನೇಮಕಾತಿಗೆ ಕನ್ನಡ ಬಳಕೆಯಾಗುತ್ತಿಲ್ಲ. ದಾಖಲೆ, ಪ್ರಮಾಣಪತ್ರಗಳನ್ನು ಒದಗಿಸುವುದು ಕೂಡ ಸವಾಲಾಗಿದೆ. ಕನ್ನಡಿಗರಿಗೆ ಹೆಚ್ಚು ಉದ್ಯೋಗಾವಕಾಶ ದೊರೆಯುವಂತಾಗಲು ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದು ಜೋಶಿ ಹೇಳುತ್ತಾರೆ.
ಎಸ್ಎಸ್ಸಿ ಹೇಳೋದೇನು?: ಎಸ್ಎಸ್ಸಿಯ ಪ್ರಾದೇಶಿಕ ನಿರ್ದೇಶಕರಾಗಿ 2002ರ ಬ್ಯಾಚ್ನ ಒಡಿಶಾ ಕೇಡರ್ನ ಐಐಎಸ್ ಅಧಿಕಾರಿ, ಕನ್ನಡಿಗ ಎಸ್.ಎನ್. ಗಿರೀಶ್ ಕಾರ್ಯ ನಿರ್ವಹಿಸುತ್ತಿದ್ದಾರೆ. ಎಸ್ಎಸ್ಸಿ ಹೊರಡಿಸುವ ಅಧಿಸೂಚನೆಗಳಿಗೆ ರಾಷ್ಟ್ರಮಟ್ಟದ ಪರೀಕ್ಷೆ ನಡೆಸಲಾಗುತ್ತದೆ. ಮೊದಲ ಪತ್ರಿಕೆಯು ಕಂಪ್ಯೂಟರ್ ಆಧರಿತವಾಗಿರುವುದರಿಂದ ವಿವರಣಾತ್ಮಕ ಉತ್ತರ ಬರೆಯಬೇಕಿಲ್ಲ. ಜತೆಗೆ, ಈ ಹುದ್ದೆಗಳು ದೇಶವ್ಯಾಪಿ ನಿಯೋಜನೆಗೆ ಒಳಪಟ್ಟಿರುವುದರಿಂದ ಅಭ್ಯರ್ಥಿಗಳಿಗೆ ಇಂಗ್ಲಿಷ್ ಭಾಷಾ ಜ್ಞಾನ ಇರಬೇಕಾಗುತ್ತದೆ. ಎರಡು ಹಂತದ ಈ ಪರೀಕ್ಷೆಯಲ್ಲಿ ಒಂದು ಪತ್ರಿಕೆಯನ್ನು (ಪ್ರಬಂಧ) ಕನ್ನಡದಲ್ಲಿ ಬರೆಯಬಹುದು. ಇದೇ ಪತ್ರಿಕೆಯ ಇಂಗ್ಲಿಷ್ ಎಲ್ಲರಿಗೂ ಕಡ್ಡಾಯವಾಗಿದೆ ಎನ್ನುತ್ತಾರೆ. ಆದರೆ, ಇದು ಕೇವಲ ಅರ್ಹತಾದಾಯಕ ಎನ್ನುವುದು ಕೂಡ ಅಷ್ಟೇ ಸತ್ಯ.
ಸಚಿವರ ಭೇಟಿಯಾದ ಸಂಸದರು: ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಹಾಗೂ ಕೋಲಾರ ಸಂಸದ ಮುನಿಸ್ವಾಮಿ ಎಸ್ಎಸ್ಸಿ ಪರೀಕ್ಷೆ ವಿಚಾರವಾಗಿ ಕೇಂದ್ರ ಸಚಿವ ಜೀತೇಂದ್ರ ಸಿಂಗ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು. ತಕ್ಷಣವೇ ಈ ಸಮಸ್ಯೆಗೆ ಪರಿಹಾರ ಕಲ್ಪಿಸುವುದಾಗಿ ಸಚಿವರು ಭರವಸೆ ನೀಡಿದ್ದಾರೆಂದು ತೇಜಸ್ವಿ ಸೂರ್ಯ ತಿಳಿಸಿದರು.