ತಂತ್ರಜ್ಞಾನ ಬಳಕೆಯಿಂದ ರೇಷ್ಮೆ ಕೃಷಿಯಲ್ಲಿ ಸ್ವಾವಲಂಬನೆ -ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅಭಿಮತ

Sudhee_24_Golden_Jubilee_Celebration_of_CSB_Silkworm_Seed_Organization_@_NIMHANS_Convention_Center (7)
Published on

ಬೆಂಗಳೂರು: ರೇಷ್ಮೆ ಕೃಷಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡಲ್ಲಿ ಸ್ವಾವಲಂಬನೆ ಸಾಧಿಸಬಹುದಾಗಿದ್ದು, ಚೀನಾಕ್ಕೆ ರ‌್ತಾಗುತ್ತಿರುವ ರೇಷ್ಮೆ ತ್ಯಾಜ್ಯವನ್ನು, ಇಲ್ಲಿಯೇ ಮರುಬಳಕೆ ಮಾಡುವ ಯೋಜನೆ ರೂಪಿಸಿದಲ್ಲಿ ಆರ್ಥಿಕ ಲಾಭವಾಗಲಿದೆ ಎಂದು ಕೇಂದ್ರದ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ರಾಷ್ಟ್ರೀಯ ರೇಷ್ಮೆಹುಳು ಬೀಜ ಸಂಸ್ಥೆ (ಎನ್‌ಎಸ್‌ಎಸ್‌ಒ) ನಗರದ ನಿಮ್ಹಾನ್ಸ್ ಕನ್ವೆನ್ಷನ್ ಹಾಲ್‌ನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸುವರ್ಣ ಮಹೋತ್ಸವ ಉದ್ಘಾಟಿಸಿ ಮಾತನಾಡಿದರು.

ರೇಷ್ಮೆ ಬಟ್ಟೆಗೆ ಎಲ್ಲೆಡೆ ಬೇಡಿಕೆಯಿದೆ. ಕರ್ನಾಟಕದ ಮೈಸೂರು ಸಿಲ್ಕ್ ಸೀರೆಯು ದೇಶದಾದ್ಯಂತ ಪ್ರಸಿದ್ಧಿ ಪಡೆದಿದೆ. ಆದ್ದರಿಂದ ರೇಷ್ಮೆಯಲ್ಲಿ ಗುಣಮಟ್ಟ ಕಾಯ್ದುಕೊಂಡು ಉತ್ಪಾದನೆ ಹೆಚ್ಚಿಸಬೇಕು. ಈ ನಿಟ್ಟಿನಲ್ಲಿ ರೇಷ್ಮೆಯ ಬಟ್ಟೆ, ನೂಲು ಮತ್ತು ತ್ಯಾಜ್ಯಕ್ಕೆ ಸಂಬಂಧಿಸಿದಂತೆ ಸರ್ಕಾರ, ರೈತರು ಹಾಗೂ ಉದ್ಯಮಿಗಳು ಒಟ್ಟಾಗಿ ಕೆಲಸ ಮಾಡಬೇಕಿದೆ ಎಂದು ಹೇಳಿದರು.

ಕೇಂದ್ರದಿಂದ ವಿಶೇಷ ಯೋಜನೆ:

ಪ್ರಪಂಚದಲ್ಲಿ ಅಧಿಕ ರೇಷ್ಮೆ ಉತ್ಪಾದನೆ ರಾಷ್ಟ್ರಗಳ ಸ್ಥಾನದಲ್ಲಿ ಭಾರತ 2ನೇ ಸ್ಥಾನದಲ್ಲಿದೆ. ಆದರೂ ರೇಷ್ಮೆಯಲ್ಲಿ ಸ್ವಾವಲಂಬನೆ ಸಾಧ್ಯವಾಗಲಿಲ್ಲ. ಎಣ್ಣೆ ಕಾಳುಗಳು, ಬೇಳೆ ಕಾಳುಗಳನ್ನೂ ಆಮದು ಮಾಡಿಕೊಳ್ಳುತ್ತಿದ್ದೇವೆ. ನಮ್ಮ ದೇಶದಲ್ಲಿ ರೇಷ್ಮೆ ಬಟ್ಟೆಗಳ ತಯಾರಿಕೆಗೆ 45 ಸಾವಿರ ಮೆಟ್ರಿಕ್ ಟನ್ ರೇಷ್ಮೆ ಅಗತ್ಯ. 41 ಸಾವಿರ ಮೆಟ್ರಿಕ್ ಟನ್ ಮಾತ್ರ ಬೆಳೆಯಲಾಗುತ್ತಿದೆ. ಸುಮಾರು 5 ಸಾವಿರ ಮೆಟ್ರಿಕ್ ಟನ್ ರೇಷ್ಮೆಯನ್ನು ಚೀನಾದಿಂದ ಆಮದು ಮಾಡಿಕೊಳ್ಳುತ್ತಿದ್ದೇವೆ. ಎಣ್ಣೆ ಕಾಳುಗಳು, ಬೇಳೆ ಕಾಳು ಹಾಗೂ ರೇಷ್ಮೆಯಲ್ಲಿ ಸ್ವಾವಲಂಬನೆ ಸಾಧಿಸಲು ವಿಶೇಷ ಯೋಜನೆಗಳನ್ನು ಕೇಂದ್ರ ಸರ್ಕಾರ ರೂಪಿಸುತ್ತಿದೆ ಎಂದು ಹೇಳಿದರು.

ರೇಷ್ಮೆ ಬೆಳೆ ದ್ವಿಗುಣವಾಗಬೇಕು. ರಾಜ್ಯದಲ್ಲಿ ಸಿಲ್ಕ್ ಕಾರಿಡಾರ್ ಮಾಡುವ ಜತೆಗೆ, ಮಲ್ಬೇರಿ ರೇಷ್ಮೆ ಬೆಳೆಗೆ ಸಂಬಂಧಿಸಿದಂತೆ ವಿಶೇಷ ಮಲ್ಬೇರಿ ವಲಯವೆಂದು ಘೋಷಿಸಬೇಕಿದೆ. ಜಿಲ್ಲಾ ಮಟ್ಟದಲ್ಲಿ ರೇಷ್ಮೆ ವಸ್ತುಸಂಗ್ರಹಾಲಯವನ್ನೂ ನಿರ್ಮಿಸಬೇಕು ಎಂದು ಸಂಸದ ಡಾ.ಸಿ.ಎನ್. ಮಂಜುನಾಥ್ ಆಗ್ರಹಿಸಿದರು.

ಕೇಂದ್ರ ರೇಷ್ಮೆ ಮಂಡಳಿಯ ಸದಸ್ಯ ಕಾರ್ಯದರ್ಶಿ ಪಿ. ಶಿವಕುಮಾರ್, ಎನ್‌ಎಸ್‌ಎಸ್‌ಒ ನಿರ್ದೇಶಕ (ತಾಂತ್ರಿಕ) ಎಸ್. ಮಂಥಿರಾಮೂರ್ತಿ ಉಪಸ್ಥಿತರಿದ್ದರು.

ಕೋಟ್:

ವಿಜ್ಞಾನಿಗಳು ಮತ್ತು ರೈತರು ನಮ್ಮ ದೇಶದ ಆಸ್ತಿಗಳಾಗಿದ್ದಾರೆ. ಕರ್ನಾಟಕದ ಹೆಸರಿನ ಜತೆಗೆ ರೇಷ್ಮೆ, ಶ್ರೀಗಂಧ ಬೆಸೆದುಕೊಂಡಿದೆ. ದೇಶದಲ್ಲಿ ರೇಷ್ಮೆ ಹಾಗೂ ಬಂಗಾರಕ್ಕೆ ವಿಶೇಷ ಮಹತ್ವವಿದ್ದು, ಧಾರ್ಮಿಕ ಆಚರಣೆಗಳಲ್ಲಿ ಇವುಗಳಿಗೆ ಮಹತ್ವದ ಸ್ಥಾನ ನೀಡಲಾಗಿದೆ. ದೇಶದಲ್ಲಿ ರೇಷ್ಮೆ ಉತ್ಪಾದನೆಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಬೆಂಗಳೂರಿನ ಸುತ್ತಮುತ್ತಲಿನ ಜಿಲ್ಲೆಗಳಲ್ಲಿಯೇ ಶೇ. 70 ರೇಷ್ಮೆ ಉತ್ಪಾದನೆ ಮಾಡಲಾಗುತ್ತಿದೆ. ಕೃಷಿಯಲ್ಲಿ ಮಾಸಿಕ ವೇತನ ಪಡೆಯಲು ರೇಷ್ಮೆ ಕೃಷಿ ಸಹಕಾರಿ. ಆದ್ದರಿಂದ ಈ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತೆ ರೈತರನ್ನು ಪ್ರೋತ್ಸಾಹಿಸಬೇಕು.

-ಡಾ.ಸಿ.ಎನ್. ಮಂಜುನಾಥ್, ಸಂಸದ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net