

*ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ *ಮಾರಾಟಕ್ಕೆ ಕಾದಿರುವ 50617 ರೈತರು *ಮಾ.30ರ ವರೆಗೂ ನೋಂದಣಿ
ತುಮಕೂರು: ಕನಿಷ್ಟ ಬೆಂಬಲ ಬೆಲೆ ಯೋಜನಯಲ್ಲಿ ರಾಗಿ ಖರೀದಿಗೆ ನೋಂದಣಿ ಪೂರ್ಣಗೊಂಡಿದ್ದರೂ ಖರೀದಿ ಆರಂಭ ವಿಳಂಬವಾಗಿರುವ ಹಿನ್ನೆಲೆಯಲ್ಲಿ ರೈತರ ಆತಂಕ ದೂರ ಮಾಡಲು ಜಿಲ್ಲಾಧಿಕಾರಿ ಶುಭಕಲ್ಯಾಣ್ ಖರೀದಿ ಕೇಂದ್ರಕ್ಕೆ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಿದರು.
ಮಂಗಳವಾರ ನಗರದ ಎಪಿಎಂಸಿ ಯಾರ್ಡ್ನಲ್ಲಿರುವ ರಾಗಿ ಖರೀದಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿ, ಸ್ಥಳದಲ್ಲಿದ್ದ ರೈತರೊಂದಿಗೆ ಮಾತನಾಡಿದರು.
ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಸಲು ಈಗಾಗಲೇ ಜಿಲ್ಲೆಯಲ್ಲಿ ತೆರೆದಿರುವ 10 ಖರೀದಿ ಕೇಂದ್ರಗಳಲ್ಲಿ ನೋಂದಣಿ ಪ್ರಕ್ರಿಯೆ ಪ್ರಾರಂಭಿಸಲಾಗಿದೆ. ರೈತರು ಖರೀದಿ ಕೇಂದ್ರದಲ್ಲಿ ಮಧ್ಯವರ್ತಿಗಳನ್ನು ಸಂಪರ್ಕಿಸದೆ ನೇರವಾಗಿ ನಿಯೋಜಿತ ಅಧಿಕಾರಿಗಳನ್ನೇ ಸಂಪರ್ಕಿಸಬೇಕು ಎಂದು ಮನವಿ ಮಾಡಿದರು.
ಖರೀದಿ ಕೇಂದ್ರಗಳಲ್ಲಿ ರಾಗಿ ಖರೀದಿಗಾಗಿ ಮಾರ್ಚ್ 31ರ ವರೆಗೂ ಅವಕಾಶವಿದ್ದು, ರೈತರು ತಡ ಮಾಡದೇ ಅಗತ್ಯ ದಾಖಲೆಗಳೊಂದಿಗೆ ಖರೀದಿ ಕೇಂದ್ರಕ್ಕೆ ಭೇಟಿ ನೀಡಿ ನೋಂದಣಿ ಮಾಡಿಸಿ ಬೆಂಬಲ ಬೆಲೆ ಯೋಜನೆಯ ಸದುಪಯೋಗ ಪಡೆಯಬೇಕು. ಶ್ರೀದಲ್ಲಿಯೇ ಖರೀದಿ ಕೂಡ ಆರಂಭವಾಗಲಿದೆ ಎಂದು ತಿಳಿಸಿದರು.
ಖರೀದಿ ಕೇಂದ್ರದಲ್ಲಿ ರೈತರು ರಾಗಿ ಮಾರಾಟ ಮಾಡಲು ಕಡ್ಡಾಯವಾಗಿ ಫ್ರೂಟ್ಸ್ ಐಡಿ ಹೊಂದಿರಬೇಕು. ಫ್ರೂಟ್ಸ್ ಐಡಿಗೆ ಸೇರ್ಪಡೆಗೊಂಡಿರುವ ಸರ್ವೆ ನಂಬರ್ಗಳಲ್ಲಿ ಬೆಳೆದ ರಾಗಿ ಮಾತ್ರ ಖರೀದಿ ಕೇಂದ್ರಗಳಲ್ಲಿ ಖರೀದಿಸಲಾಗುವುದು. ಸರ್ವೆ ನಂಬರ್ಗಳಲ್ಲಿ ರಾಗಿ ಬೆಳೆದಿರುವ ಬಗ್ಗೆ ಬೆಳೆ ಸಮೀಕ್ಷೆಯಲ್ಲಿ ದಾಖಲಾಗಿರುವುದು ಕಡ್ಡಾಯ. ರೈತರು ಹೆಸರಿನಲ್ಲಿರುವ ಜಮೀನಿನ ಎಲ್ಲ ಸರ್ವೆ ನಂಬರ್ಗಳನ್ನು ವ್ಯಾಪ್ತಿಯ ಕಂದಾಯ, ಕೃಷಿ, ತೋಟಗಾರಿಕೆ, ರೇಷ್ಮೆ ಹಾಗೂ ಪಶುಸಂಗೋಪನೆ ಇಲಾಖೆ ಸಂಪರ್ಕಿಸಿ ಫ್ರೂಟ್ಸ್ ಐಡಿಗೆ ಸೇರ್ಪಡೆ ಮಾಡಬೇಕು ಎಂದರು.
ಜಿಲ್ಲೆಯಲ್ಲಿ ತೆರೆಯಲಾಗಿರುವ ಎಲ್ಲಾ 10 ಖರೀದಿ ಕೇಂದ್ರಗಳಿಗೆ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ನಿಯೋಜಿತ ಅಧಿಕಾರಿಗಳು ರಾಗಿಯನ್ನು ಮಧ್ಯವರ್ತಿಗಳಿಂದ ಖರೀದಿಸದೆ ರೈತರಿಂದ ಮಾತ್ರ ಖರೀದಿಸಬೇಕು. ರಾಗಿ ಖರೀದಿ ಪ್ರಕ್ರಿಯೆ ಸುಗಮವಾಗಿ ನಡೆಸಬೇಕು. ರೈತರ ಫ್ರೂಟ್ಸ್ ಐಡಿ ಬಗ್ಗೆ ತಾಂತ್ರಿಕ ಸಮಸ್ಯೆಗಳುಂಟಾದಲ್ಲಿ ಕೃಷಿ ಇಲಾಖೆಯಲ್ಲಿ ಸ್ಥಾಪಿಸಿರುವ ಸಹಾಯವಾಣಿ 8884006306, 8884006308 ಸಂಪರ್ಕಿಸಲು ತಿಳಿಸಿದರು.
ಆಹಾರ ಇಲಾಖೆ ಜಂಟಿ ನಿರ್ದೇಶಕ ಮಂಟೇಸ್ವಾಮಿ, ಜಂಟಿ ಕೃಷಿ ನಿರ್ದೇಶಕ ಡಾ.ರಮೇಶ್ ಜತೆಗಿದ್ದರು.
50617 ರೈತರ ನೋಂದಣಿ:
ಜಿಲ್ಲೆಯಲ್ಲಿ ಖರೀದಿ ಕೇಂದ್ರಗಳಲ್ಲಿ ಈವರೆಗೆ 749973 ಕ್ವಿಂಟಾಲ್ ರಾಗಿ ಖರೀದಿಗಾಗಿ 50617 ರೈತರು ನೋಂದಣಿ ಮಾಡಿಕೊಂಡಿದ್ದು ಶೀಘ್ರವಾಗಿ ಖರೀದಿ ಪ್ರಕ್ರಿಯೆ ಆರಂಭಿಸಬೇಕಯ ಎಂದು ಒತ್ತಾಯ ಕೇಳಿಬಂದಿದೆ. ನೋಂದಣಿ ಆರಂಭವಾಗಿ ಎಲ್ಲೆಡೆಯೂ ಪೂರ್ಣವಾಗುತ್ತಿದ್ದರೂ ಜಿಲ್ಲಾಡಳಿತ ಖರೀದಿಗೆ ಮುಂದಾಗದಿರುವುದು ರೈತರಲ್ಲಿ ಆತಂಕ ಮೂಡಿಸಿದೆ.
ಕೃಷಿ ಚಟಿವಟಿಕೆ ಮುಗಿಸಿ ಆರ್ಥಿಕ ಸಂಕಷ್ಟದಲ್ಲಿರುವ ರೈತರು ರಾಗಿ ಮಾರಾಟ ಮಾಡಲು ತಿದಿಗಾಲಿನಲ್ಲಿ ನಿಂತಿದ್ದು ಜಿಲ್ಲಾಡಳಿತ ಇರುವ ಸಮಸ್ಯೆಗಳನ್ನು ಪರಿಹರಿಸಿಕೊಂಡು ಖರೀದಿ ಆರಂಭಿಸಬೇಕಿದೆ. ಖರೀದಿಸುವ ರಾಗಿ ರಾಜ್ಯ ಉಗ್ರಾಣ ನಿಗಮಗಳಿಗೆ ಸಾಗಾಣಿಕೆ ಮಾಡಲು ಗುತ್ತಿಗೆದಾರ ನೇಮಕ ಮಾಡಲಾಗಿದ್ದು, ಸಾಗಾಣಿಕೆ ಮಾಡುವ ವಾಹನಗಳಿಗೆ ಕಡ್ಡಾಯವಾಗಿ ಜಿಪಿಎಸ್ ಅಳವಡಿಸಬೇಕಿದೆ.
ಜಿಲ್ಲೆಯಲ್ಲಿ 10 ರಾಗಿ ಖರೀದಿ ಕೇಂದ್ರ
ಕನಿಷ್ಟ ಬೆಂಬಲ ಯೋಜನೆಯಡಿ ರಾಗಿ ಖರೀದಿಸಲು ಜಿಲ್ಲೆಯಲ್ಲಿ 10 ಕೇಂದ್ರಗಳನ್ನು ಆರಂಭಿಸಲಾಗಿದ್ದು ರೈತರ ನೋಂದಣಿ ಪ್ರಕ್ರಿಯೆ ಡಿಸೆಂಬರ್ 1ರಿಂದಲೇ ಪ್ರಾರಂಭವಾಗಿದೆ, ಪ್ರತಿವರ್ಷದಂತೆ ಜ.1ರಿಂದಲೇ ಖರೀದಿ ಆರಂಭಿಸಲಾಗುವುದು ಎಂದು ಭರವಸೆ ನೀಡಿದ್ದ ಜಿಲ್ಲಾಡಳಿತ ಮಾತಿಗೆ ತಪ್ಪಿದೆ. ೆಬ್ರವರಿ ಮೊದಲವಾರವಾದರೂ ಖರೀದಿ ಇನ್ನೂ ಆರಂಂಭಿಸಿಲ್ಲ. ಕುಣಿಗಲ್ ತಾಲೂಕಿನಲ್ಲಿ 2 ಖರೀದಿ ಕೇಂದ್ರ ಹಾಗೂ ತುಮಕೂರು, ಶಿರಾ, ಮಧುಗಿರಿ, ಚಿಕ್ಕನಾಯಕನಹಳ್ಳಿ, ಹುಳಿಯಾರು, ತಿಪಟೂರು, ತುರುವೇಕೆರೆ, ಗುಬ್ಬಿ ತಾಲೂಕಿನಲ್ಲಿ ತಲಾ ಒಂದರಂತೆ ಜಿಲ್ಲೆಯಲ್ಲಿ 10 ರಾಗಿ ಖರೀದಿ ಕೇಂದ್ರ ಸ್ಥಾಪಿಸಲಾಗಿದ್ದು ಮೂಲಸೌಕರ್ಯ ಒದಗಿಸಲು ಹರಸಾಹಸ ಪಡುತ್ತಿದೆ. ಕನಿಷ್ಟ ಬೆಂಬಲ ಯೋಜನೆಯಡಿ ಒಂದು ಕ್ವಿಂಟಾಲ್ ರಾಗಿಗೆ 4290 ರೂ. ಬೆಂಬಲ ಬೆಲೆ ನಿಗದಿಪಡಿಸಲಾಗಿದೆ.