ಜಲಜೀವನ ಮಿಷನ್ ಟ್ಯಾಂಕ್ ವೀಕ್ಷಿಸಿದ ಸಂಸದ

10 gkp 09
Published on

ಗೋಣಿಕೊಪ್ಪಲು: ನಿಟ್ಟೂರು ಕರ್ಮಾಡು ಗ್ರಾಮ ಪಂಚಾಯಿತಿಯಲ್ಲಿ ಜಲಜೀವನ ಮಿಷನ್ ಯೋಜನೆಯಡಿ ನಿರ್ಮಿಸಲಾದ ನೀರಿನ ಟ್ಯಾಂಕ್ ಶಿಥಿಲಾವಸ್ಥೆ ತಲುಪಿದ್ದು, ಶುಕ್ರವಾರ ಇಲ್ಲಿಗೆ ಭೇಟಿ ನೀಡಿದ್ದ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆ ವತಿಯಿಂದ ಗುತ್ತಿಗೆದಾರರು ಕಳಪೆ ಕಾಮಗಾರಿ ನಡೆಸಿದ್ದು, ಕುಸಿಯುವ ಹಂತ ತಲುಪಿತ್ತು. ಆದರೆ ಇಲಾಖೆಯ ಅಧಿಕಾರಿಗಳು ಟ್ಯಾಂಕ್ ಕೆಡವಿ ಹೊಸ ಟ್ಯಾಂಕ್ ನಿರ್ಮಾಣ ಮಾಡುವ ಬದಲು ಇದೇ ಟ್ಯಾಂಕನ್ನು ದುರಸ್ತಿ ಮಾಡುವ ಕಾರ್ಯಕ್ಕೆ ಚಾಲನೆ ನೀಡಿದ್ದರು. ಇತ್ತೀಚೆಗೆ ಕಾರ್ಮಿಕರು ಕೆಲಸ ಮಾಡುತ್ತಿದ್ದಾಗಲೇ ಟ್ಯಾಂಕ್‌ನಿಂದ ಗಾರೆ ಕಿತ್ತುಬಂದು ಕಟ್ಟಡ ಕಾರ್ಮಿಕರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದರು.

ಟ್ಯಾಂಕಿನ ಪಿಲ್ಲರ್‌ಗಳಿಗೆ 20 ಎಂ.ಎಂ. ಕಬ್ಬಿಣದ ರಾಡ್‌ಗಳನ್ನು ಹಾಕುವ ಬದಲಾಗಿ 10 ಎಂ.ಎಂ. ರಾಡ್‌ಗಳನ್ನು ಬಳಸಲಾಗಿದ್ದು, ಪಿಲ್ಲರ್‌ಗಳ ಸುತ್ತಳತೆ ಕನಿಷ್ಠ ಒಂದು ಅಡಿಗಳಾದರೂ ಇರಬೇಕು. ಎಲ್ಲ ಪಿಲ್ಲರ್‌ಗಳು ಕೇವಲ ಎಂಟು ಇಂಚು ಸುತ್ತಳತೆ ಇದ್ದು, ಈ ಟ್ಯಾಂಕ್ ಯಾವುದೇ ಸಂದರ್ಭದಲ್ಲಿ ಕುಸಿಯುವ ಸಾಧ್ಯತೆಗಳಿದೆ ಎಂದು ಗ್ರಾಪಂ ಉಪಾಧ್ಯಕ್ಷರಾದ ಕಾಟಿಮಾಡ ಶರೀನ್ ಮುತ್ತಣ್ಣ ಮತ್ತು ಪ್ರಮುಖರಾದ ಕೊಟ್ಟಂಗಡ ಮಂಜುನಾಥ್ ಜಿಲ್ಲಾಡಳಿತದ ಗಮನಕ್ಕೆ ತಂದಿದ್ದರು.

ಈ ವಿಚಾರ ಕುರಿತು ವಿಜಯವಾಣಿ ಸಹ ವಿಶೇಷ ವರದಿಯನ್ನೂ ಪ್ರಕಟಿಸಿತ್ತು. ಇದರ ಬೆನ್ನಲ್ಲೇ ಸಂಸದ ಯದುವೀರ್ ಅವರು ದಿಢೀರ್ ಭೇಟಿ ನೀಡಿ ಕೂಡಲೇ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net