

ಮಂಡ್ಯ: ಸಕ್ಕರೆ ನಾಡು ಮಂಡ್ಯ ಲೋಕಸಭಾ ಚುನಾವಣಾ ಕಣದಿಂದ ಹಿಂದೆ ಸರಿಯುವುದಾಗಿ ಮತ್ತು ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಬೆಂಬಲ ನೀಡುವುದಾಗಿ ಸಂಸದೆ ಸುಮಲತಾ ಅಂಬರೀಷ್ ಅವರು ಘೋಷಣೆ ಮಾಡಿದ್ದಾರೆ.
ಮಂಡ್ಯದಲ್ಲಿ ಇಂದು (ಏಪ್ರಿಲ್ 3) ನಡೆದ ಬೆಂಬಲಿಗರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಸಮಲತಾ ಅಂಬರೀಷ್ ಈ ಮಹತ್ವದ ಘೋಷಣೆ ಮಾಡಿದರು.
ಮಂಡ್ಯವನ್ನು ಬಿಡುವ ಪ್ರಶ್ನೆಯೇ ಇಲ್ಲ
ಪಕ್ಷೇತರ ಸಂಸದೆಯಾದರೂ 4 ಸಾವಿರ ಕೋಟಿ ಅನುದಾನ ಕೊಟ್ಟಿದ್ದು ಬಿಜೆಪಿ. ಪ್ರತಿ ವಿಷಯದಲ್ಲೂ ನನ್ನನ್ನು ವಿಶ್ವಾಸಕ್ಕೆ ಪಡೆದರು. ನಿಮ್ಮ ನಾಯಕತ್ವ ಬೇಕು ಎಂದು ಸ್ವತಃ ಪ್ರಧಾನಿ ನರೇಂದ್ರ ಮೋದಿ ನನಗೆ ಹೇಳಿದರು. ನಾಯಕತ್ವ ಬೆಳೆಸೋ ಗುಣ ಬಿಜೆಪಿಯಲ್ಲಿದೆ. ಭಾರತವನ್ನು ಇಡೀ ಪ್ರಪಂಚ ತಿರುಗಿ ನೋಡುವಂತೆ ಮೋದಿ ಮಾಡಿದ್ದಾರೆ. ಮೋದಿ ಅವರದ್ದು ಅಭಿವೃದ್ಧಿ ಮಂತ್ರ. ಒಂದೇ ಒಂದು ಕಳಂಕ ಅವರ ಮೇಲಿಲ್ಲ. ಅವರ ನಾಯಕತ್ವದಲ್ಲಿ ಮುನ್ನಡೆಯುತ್ತೇನೆ. ನಾನು ಈ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿಲ್ಲ. ಆದರೆ, ಮಂಡ್ಯವನ್ನು ಬಿಡುವ ಪ್ರಶ್ನೆ ಇಲ್ಲ ಎಂದು ಸುಮಲತಾ ಅವರು ಹೇಳಿದರು.
ಶಕ್ತಿ ತುಂಬಲು ಈ ನಿರ್ಧಾರ
ನಮ್ಮ ಜಿಲ್ಲೆಯ ಅಭಿವೃದ್ಧಿಯೇ ನನ್ನ ಸ್ವಾರ್ಥ. ಎಂಪಿ, ಎಂಎಲ್ಎ ಸ್ಥಾನ ಸಿಗದಿದ್ರೆ ಪಕ್ಷ ಬಿಡ್ತಾರೆ ಎಂದು ಹೇಳುತ್ತಿದ್ದರು. ಆದರೆ ಎಂಪಿ ಸೀಟ್ ಬಿಟ್ಟುಕೊಟ್ಟು ಬಿಜೆಪಿ ಸೇರುವ ನಿರ್ಧಾರ ಮಾಡಿದ್ದೇನೆ. ನನ್ನ ಕಾರ್ಯಕರ್ತರು, ಅಭಿಮಾನಿಗಳಿಗೆ ಶಕ್ತಿ ತುಂಬಲು ಈ ನಿರ್ಧಾರ ಮಾಡಿದ್ದೇನೆ. ಪಕ್ಷೇತರ ಸ್ಪರ್ಧೆ ಬೇಡ, ಕಾಂಗ್ರೆಸ್ಗೆ ನನ್ನ ಅವಶ್ಯಕತೆಯೂ ಇಲ್ಲ. ಬದಲಾದ ಪರಿಸ್ಥಿತಿ, ಸನ್ನಿವೇಶವನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಹಠ ಸಾಧನೆ ಮಾಡುವ ಉದ್ದೇಶ ಇದ್ದಿದ್ದರೆ ಪಕ್ಷೇತರ ಸ್ಪರ್ಧೆ ಮಾಡಬಹುದು. ಅದರಿಂದ ಯಾರಿಗೆ ಲಾಭ ಇದೆ? ಇಲ್ಲಿ ನನ್ನ ಸ್ವಾರ್ಥ ಏನು ಇಲ್ಲ. ಲಾಭಕ್ಕಾಗಿ ಯೋಚಿಸಿದ್ರೆ ಬೇರೆ ಕ್ಷೇತ್ರ ಆಯ್ಕೆ ಮಾಡಬಹುದಿತ್ತು. ಬಂದ ಅವಕಾಶಗಳನ್ನು ಮಂಡ್ಯಕ್ಕಾಗಿ ಬಿಟ್ಟಿದ್ದೇನೆ. ರಾಜಕೀಯ ಮಾಡಿದ್ರೆ ಮಂಡ್ಯದಲ್ಲಿ ಮಾತ್ರ ಎಂದು ನಿರ್ಧಾರ ಮಾಡಿದ್ದೇನೆ. ಅಸಂಖ್ಯಾತ ಅಂಬರೀಷ್ ಅಭಿಮಾನಿಗಳನ್ನ ಬಿಟ್ಟು ಹೋದರೆ ಮಂಡ್ಯ ಸೊಸೆ ಅನಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.
ಮಂಡ್ಯ ಸೊಸೆ ಎನ್ನುವ ಸ್ಥಾನ ಶಾಶ್ವತ
ಕಾಂಗ್ರೆಸ್ ಸೇರಿ ಎಂದು ಕೆಲವರು ಹೇಳಿದ್ದೀರಾ. ರಾಜಕೀಯ ಒಳ ಸುಳಿಗಳು ನಿಮಗೆ ಅರ್ಥವಾಗಲ್ಲ. ಸುಮಲತಾ ಅವಶ್ಯಕತೆ ಕಾಂಗ್ರೆಸ್ಗೆ ಇಲ್ಲ ಎಂದು ಕೆಲ ನಾಯಕರು ಹೇಳಿದರು ಎಂದು. ಈ ವೇಳೆ ಅವರ ಹೆಸರು ಹೇಳಿ ಎಂದು ಅಭಿಮಾನಿಗಳ ಪಟ್ಟು ಹಿಡಿದರು. ಅಂಬರೀಷ್ ಇದ್ದಾಗಲು ಅವರು ಇದೇ ರೀತಿ ತೊಂದರೆ ಕೊಟ್ಟರು. ಅವರ ಹೆಸರು ಹೇಳಿ ಎಂದು ಡಿಸಿಎಂ ಡಿಕೆಶಿ ವಿರುದ್ಧ ಆಕ್ರೋಶ ಹೊರಹಾಕಿದರು. ನನಗೆ ಗೌರವ ಇಲ್ಲದ ಕಾಂಗ್ರೆಸ್ಗೆ ಹೋಗಲು ಹೇಳಬೇಡಿ. ನನ್ನ ಸ್ಥಾನಕ್ಕೆ ಬೇರೆ ಅವರು ಬರಬಹುದು, ಮಂಡ್ಯ ಸೊಸೆ ಎನ್ನುವ ಸ್ಥಾನ ಶಾಶ್ವತ ಎಂದು ಸುಮಲತಾ ಅವರು ಭಾವುಕರಾಗಿ ಮಾತನಾಡಿದರು.
ಕೊನೆ ಉಸಿರು ಇರೋವರೆಗೂ ನಿಮ್ಮ ಆಶೀರ್ವಾದ ಮರೆಯಲ್ಲ. 5 ವರ್ಷ ಹೇಗೆ ಕಳೆಯಿತು ಗೊತ್ತಿಲ್ಲ. ಈಗ ಮತ್ತೆ ಚುನಾವಣೆ ಹಾಗೂ ಮತ್ತೆ ಸವಾಲು ಬಂದಿದೆ. ಕಳೆದ ಬಾರಿಗಿಂತಲೂ ಹೆಚ್ಚಿನ ಸವಾಲು ಈಗ ಇದೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ನನಗೆ ಬೆಂಬಲ ನೀಡಿತ್ತು. 2023ರಲ್ಲಿ ನಾನು ಬಿಜೆಪಿಗೆ ಬೆಂಬಲ ನೀಡಿದ್ದೆ. ಇವತ್ತು ಜೆಡಿಎಸ್ ಜೊತೆ ಮೈತ್ರಿಯಾಗಿದೆ. ಬದಲಾದ ಪರಿಸ್ಥಿತಿಯಲ್ಲಿ ಬದಲಾದ ಸವಾಲು. ಕೊನೆಯ ಗಳಿಗೆವರೆಗೂ ಮಂಡ್ಯ ಬಿಜೆಪಿ ಉಳಿಸಿಕೊಳ್ಳಲು ಪ್ರಯತ್ನ ಮಾಡಿದೆ. ಬೇರೆ ಬೇರೆ ಸಲಹೆ, ಅವಕಾಶಗಳು ಬಂದರೂ ತಿರಸ್ಕರಿಸಿದೆ. ಬೆಂಗಳೂರು ಉತ್ತರ, ಚಿಕ್ಕಬಳ್ಳಾಪುರ ಸಲಹೆ ನೀಡಿದ್ರು. ಆದರೆ, ಮಂಡ್ಯ ಬಿಟ್ಟು ನಾನು ಎಲ್ಲೂ ಹೋಗಲ್ಲ. ಇದ್ರೂ, ಸತ್ರೂ, ಗೆದ್ದರು, ಸೋತ್ರು ಮಂಡ್ಯಾನೆ. ಅಧಿಕಾರಕ್ಕೆ ಎಂದೂ ಅಂಬರೀಶ್ ಅಂಟಿಕೊಂಡವರಲ್ಲ. ಇವತ್ತು ಅವರೇ ನನಗೆ ಸ್ಪೂರ್ತಿ ಎಂದು ಸುಮಲತಾ ಅವರು ಹೇಳಿದರು.