ಶಿರೂರು ವಿಚಾರವನ್ನು ಸಂಸತ್ ನಲ್ಲಿ ಮಾತನಾಡಿದ ಕಾಗೇರಿ

Kageri speech in parliament
Published on

ಕಾರವಾರ: ರಾಷ್ಟ್ರೀಯ ‌ ಹೆದ್ದಾರಿ 66 ರ ವಿಸ್ತರಣೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಅವೈಜ್ಞಾನಿಕವಾಗಿ ಕೈಗೊಂಡಿದ್ದರಿಂದ ಶಿರೂರಿನಲ್ಲಿ ಗುಡ್ಡ ಕುಸಿತ ಸಂಭವಿಸಿದೆ. ಹಾಗೂ ಮುಂದೆ ಅಭಿವೃದ್ಧಿ ಕಾರ್ಯ ಮಾಡುವಾಗ ವೈಜ್ಞಾನಿಕ ವರದಿಯನ್ನು ಆಧರಿಸಿ ಕೈಗೊಳ್ಳಬೇಕು ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸಂಸತ್‌ನಲ್ಲಿ ಒತ್ತಾಯ ಮಾಡಿದ್ದಾರೆ.
ಲೋಕಸಭೆಯಲ್ಲಿ ನಿಯಮ 197 ಅಡಿ ಬುಧವಾರ ಮಾತನಾಡಿದ ಅವರು, ಕೇರಳ ವೈನಾಡ್‌ನಲ್ಲಿ ನಡೆದಂತೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಶಿರೂರಿನಲ್ಲೂ ಗುಡ್ಡ ಕುಸಿತವಾಗಿತ್ತು. 11 ಜನ ನಾಪತ್ತೆಯಾಗಿದ್ದರು. 8 ಮೃತದೇಹಗಳನ್ನು ಪತ್ತೆ ಹಚ್ಚಲಾಗಿದೆ. ಎನ್‌ಡಿಆರ್‌ಎಫ್, ಭಾರತೀಯ ನೌಕಾಸೇನೆ, ಭಾರತೀಯ ಸೇನೆಯ ತಂಡಗಳು ಆಗಮಿಸಿ ರಕ್ಷಣಾ ಕಾರ್ಯಗಳನ್ನು ನಡೆಸಿವೆ.
ಆದರೆ, ಪಶ್ಚಿಮ ಘಟ್ಟದಂತ ಸೂಕ್ಷ್ಮ ಪ್ರದೇಶದಲ್ಲಿ ಮುಂದೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವಾಗ ವೈಜ್ಞಾನಿಕ ಅಧ್ಯಯನ ವರದಿ ಪಡೆಯಬೇಕು. ಪಶ್ಚಿಮ ಘಟ್ಟದ ಧಾರಣಾ ಸಾಮರ್ಥ್ಯದ ಅಧ್ಯಯನ ನಡೆಸಬೇಕು ಎಂದು ಒತ್ತಾಯಿಸಿದರು. ಮಾತ್ರವಲ್ಲ ದುರಂತದಲ್ಲಿ ಮೃತಪಟ್ಟವರಿಗೆ ಪ್ರಧಾನ ಮಂತ್ರಿ ಪರಿಹಾರ ನಿಧಿಯಿಂದ ಪರಿಹಾರ ಒಸಗಿಸಬೇಕು. ಉತ್ತರ ಕನ್ನಡ ಜಿಲ್ಲೆಗೆ ಹೆಚ್ಚುವರಿಯಾಗಿ ಒಂದು ಎನ್‌ಡಿಆರ್‌ಎಫ್ ತಂಡವನ್ನು ನಿಯೋಜಿಸಬೇಕು ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net