

ತುಮಕೂರು: ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸುತ್ತಿರುವ ಪಟ್ಟಿ ಬೆಳೆಯುತ್ತಲೇ ಇದ್ದು, ಈ ಪಟ್ಟಿಗೆ ಸಂಸದ ಜಿ.ಎಸ್.ಬಸವರಾಜು ಕೂಡ ಸೇರ್ಪಡೆಯಾಗಿದ್ದಾರೆ. ನಗರದಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ನನಗೆ ಈಗ 84 ವರ್ಷ ವಯಸ್ಸಾಗಿದ್ದು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸ್ಫರ್ಧಿಸುವುದಿಲ್ಲ, ಪಕ್ಷದಿಂದಲೂ ಟಿಕೆಟ್ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಆದರೆ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಚುನಾವಣೆ ಪ್ರಚಾರಗಳಲ್ಲಿ ಹೇಳುವಂತೆ ತುಮಕೂರಿಗೆ ಮತ್ತೆ ಬಂದು ಸ್ಫರ್ಧಿಸಿದರೆ ಮಾತ್ರ ನಾನು ಸುಮ್ಮನಿರುವುದಿಲ್ಲ ಕಣಕ್ಕಿಳಿಯುತ್ತೇನೆ, ಪಕ್ಷ ಟಿಕೆಟ್ ನೀಡದಿದ್ದರೂ ಪಕ್ಷೇತರನಾಗಿಯಾದರೂ ಸರಿ ಎಂದು ಸವಾಲೆಸೆದರು.ಇನ್ನೂ ಬಿ.ಎಸ್.ಯಡಿಯೂರಪ್ಪ ಅವರನ್ನು ಪಕ್ಷದಲ್ಲಿ ಮೂಲೆಗುಂಪು ಮಾಡಲಾಗಿದೆ ಎಂಬ ಆರೋಪ ನಿರಾಧಾರವಾಗಿದೆ, ನಾನೂ ಮಾಜಿ ಸಂಸದನಾಗಿ ಮನೆಯಲ್ಲಿದ್ದಾಗ ಯಾರು ಬಂದು ಮುತ್ತು ಕೊಡುತ್ತಿದ್ದರೇ? ಎಷ್ಟು ಗೌರವ ಕೊಡಬೇಕೊ ಅಷ್ಟು ಕೊಡುತ್ತಾರೆ ಎಂದರು.
ಬಿಎಸ್‌ವೈ ಇಲ್ಲದೆ ಚುನಾವಣೆ ಎದುರಿಸುವುದು ಬಿಜೆಪಿಗೆ ಕಷ್ಟ, ವಯಸ್ಸಿನ ಕಾರಣದಿಂದ ಚುನಾವಣಾ ರಾಜಕೀಯದಿಂದ ದೂರವಿರುವ ಮಾತನಾಡಿದ್ದಾರೆ ಅಷ್ಟೇ, ಬಿಎಸ್‌ವೈ, ಸಿದ್ಧರಾಮಯ್ಯ ಸೇರಿ ಹೊಸ ಪಕ್ಷ ಕಟ್ಟುತ್ತಾರೆ ಎಂಬುದು ಊಹಾಪೋಹವಷ್ಟೇ ಎಂದು ಅಭಿಪ್ರಾಯಪಟ್ಟರು.