

ಬೇಲೂರು: ಪಟ್ಟಣ ಸಮೀಪದ ಯುನೈಟೆಡ್ ಅಕಾಡೆಮಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬೆಂಗಳೂರಿನ ಇಂಗ್ ಕ್ಯಾಂಪಸ್ ಹಾಗೂ ಯುನೈಟೆಡ್ ಅಕಾಡೆಮಿ ಶಾಲೆಯಿಂದ ಶನಿವಾರ ಶಾಲಾ ಆವರಣದಲ್ಲಿ ಆಯೋಜಿಸಿದ್ದ ಆಹಾರ ಮೇಳದಲ್ಲಿ ವಿದ್ಯಾರ್ಥಿಗಳು ತಯಾರಿಸಿದ್ದ ವಿವಿಧ ಬಗೆಯ ತಿಂಡಿ ತಿನಿಸುಗಳು, ಹಣ್ಣಿನಿಂದ ತಯಾರಿಸಿದ್ದ ಸಲಾಡ್‌ಗಳು, ಜ್ಯೂಸ್‌ಗಳು ನೋಡುಗರ ಬಾಯಲ್ಲಿ ನೀರೂರಿಸಿದವು.
ಶಿಕ್ಷಣ ಇಲಾಖೆಯ ಕ್ಷೇತ್ರ ಸಮನ್ವಯಾಧಿಕಾರಿ ಶಿವಮರಿಯಪ್ಪ ಆಹಾರ ಮೇಳ ಉದ್ಘಾಟಿಸಿ ಮಾತನಾಡಿ, ಮನುಷ್ಯನ ಜೀವನದ ಅನುಭವಗಳೇ ಶಿಕ್ಷಣ. ಇಲ್ಲಿ ನಿಮಗೆ ಸಿಗುವ ಅನುಭವಗಳೇ ಮುಂದಿನ ಜೀವನಕ್ಕೆ ಆದರ್ಶವಾಗಲಿದೆ ಎಂಬ ನಿಟ್ಟಿನಲ್ಲಿ ಆಯೋಜಿಸಿರುವ ಈ ಆಹಾರ ಮೇಳದಲ್ಲಿ ಮಕ್ಕಳು ಸ್ವತಃ ತಾವೇ ಆಹಾರ ಪದಾರ್ಥಗಳನ್ನು ತಯಾರಿಸಿ ಕೌಶಲ ಮೆರೆದಿದ್ದಾರೆ. ವ್ಯವಹಾರಿಕ ಜ್ಞಾನದ ಜತೆಗೆ ಆಹಾರದ ಬಗ್ಗೆ ತಿಳಿಸುವ ಮೂಲಕ ಈ ಮೇಳಕ್ಕೆ ಚೈತನ್ಯ ತುಂಬಿದ್ದಾರೆ. ಆಹಾರ ಪದಾರ್ಥ, ತಿಂಡಿ ತಿನಿಸುಗಳನ್ನು ವಿದ್ಯಾರ್ಥಿಗಳು ಮಾರಾಟ ಮಾಡುವ ಮೂಲಕ ಇದರಲ್ಲಿರುವ ಶ್ರಮ ಹಾಗೂ ಲಾಭ-ನಷ್ಟದ ಬಗ್ಗೆ ಅವರಲ್ಲಿ ಅರಿವು ಮೂಡಿಸಲು ಇಂತಹ ಮೇಳ ಉತ್ತಮವಾಗಿದ್ದು, ಮಕ್ಕಳ ಬೆಳವಣಿಗೆಗೆ ಪೂರಕವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಯುನೈಟೆಡ್ ಅಕಾಡೆಮಿ ಆಂಗ್ಲ ಮಾಧ್ಯಮ ಶಾಲೆ ಕಾರ್ಯದರ್ಶಿ ಎಂ.ಡಿ.ದಿನೇಶ್ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಗೂ ವಿದ್ಯಾಭ್ಯಾಸದ ಸಂದರ್ಭ ನಾನು ಏನು ಮಾಡುತ್ತಿದ್ದೆ ಎಂಬುದು ಆತ ಉನ್ನತ ಮಟ್ಟಕ್ಕೆ ಹೋದಾಗ ತಿಳಿಯುತ್ತದೆ. ಅಲ್ಲದೆ, ಪಾಲಕರಿಗೂ ಮಕ್ಕಳಲ್ಲಿರುವ ಜ್ಞಾನದ ಬಗ್ಗೆ ತಿಳಿಯುತ್ತದೆ ಎಂದರು.
ಇನ್ ಕ್ಯಾಂಪಸ್‌ನ ಸಿಇಒ ರಫಿಉಲ್ಲಾ, ನಿರ್ದೇಶಕಿ ಫಾತೀಮಾ, ಶಿಕ್ಷಣಾ ಇಲಾಖೆ ಇಸಿಒ ಶಿವಪ್ಪ, ಸಿಆರ್‌ಪಿ ವಿಜಯ, ಯುನೈಟೆಡ್ ಅಕಾಡೆಮಿ ಶಾಲೆ ಖಜಾಂಚಿ ಲೋಕೇಶ್, ಉಪಾಧ್ಯಕ್ಷ ಮಹೇಶ್, ಮುಖ್ಯಶಿಕ್ಷಕರಾದ ರಘುರಾಮ್, ದೀಪಾ, ಪತ್ರಕರ್ತ ಶ್ರೀನಿಧಿ ಮತ್ತಿತರರಿದ್ದರು.