

ರಾಯಚೂರು: ಶಿಕ್ಷಕರು ವಿದ್ಯಾರ್ಥಿಗಳನ್ನು ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸುವಂತೆ ಪ್ರೇರೇಪಿಸುವ ಮೂಲಕ ಕ್ರಿಯಾಶೀಲತೆ ಬೆಳೆಸಬೇಕು ಎಂದು ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಎನ್.ಎಚ್. ಬಾಷಾ ಹೇಳಿದರು.
ಸ್ಥಳೀಯ ಹಾಷ್ಮೀಯಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ಭಾರತ ಸೇವಾದಳದ ತಾಲೂಕು ಮಟ್ಟದ ಪುನಶ್ಚೇತನ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಶಿಕ್ಷಕರು ಭಾರತ ಸೇವಾದಳದ ಮೂಲಕ ವಿದ್ಯಾರ್ಥಿಗಳಲ್ಲಿ ಶಿಸ್ತು, ಭಾವೈಕ್ಯತೆ, ನಾಯಕತ್ವ ಗುಣ, ನೈತಿಕತೆ ಬೆಳೆಸುವ ಕಾರ್ಯ ಮಾಡಬೇಕು ಎಂದರು.ಭಾರತ ಸೇವಾದಳದ ಜಿಲ್ಲಾ ಉಪಾಧ್ಯಕ್ಷ ಜಿ.ಎಸ್. ಹಿರೇಮಠ ಮಾತನಾಡಿ, ಪ್ರತಿಯೊಬ್ಬರು ದೇಶದ ಬಗ್ಗೆ ಅಭಿಮಾನ, ಪ್ರೇಮ ಬೆಳೆಸಿಕೊಳ್ಳುವ ಮೂಲಕ ಭಾರತದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕೆಂದು ಹೇಳಿದರು.
ಇದನ್ನೂ ಓದಿ: ಪಠ್ಯೇತರ ಚಟುವಟಿಕೆಗೆ ಒತ್ತುಕೊಡಿ
ವಿಭಾಗೀಯ ಸಂಘಟಕ ವಿದ್ಯಾಸಾಗರ ಚಿನಮಗೇರಿ ಮಾತನಾಡಿ, ಸೇವಾದಳದಿಂದ ನಿರಂತರವಾಗಿ ಜಿಲ್ಲೆಯಲ್ಲಿ ಮಕ್ಕಳ ಶಿಬಿರ, ಸಸಿ ನೆಡುವ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು, ರಾಷ್ಟ್ರೀಯ ಹಬ್ಬಗಳಲ್ಲಿ ಮಕ್ಕಳಿಗೆ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರಲಾಗುತ್ತಿದೆ ಎಂದು ತಿಳಿಸಿದರು.ಸೇವಾದಳದ ತಾಲೂಕು ಅಧ್ಯಕ್ಷ ವಿರೂಪಾಕ್ಷಪ್ಪ ಕ್ಯಾದಿಗ್ಗೇರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ಶಿಕ್ಷಕ ಸಿದ್ದಣ್ಣ ನೆಲೋಗಿ, ಸೇವಾದಳದ ಮಹಿಳಾ ಪ್ರತಿನಿಧಿ ದಾನಮ್ಮ, ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಯಂಕಪ್ಪ ಪಿರಂಗಿ, ಮುಖ್ಯಗುರು ಶಂಕರ, ಶಿಕ್ಷಕರಾದ ಶಿವಕುಮಾರ ಬಳಿಗಾರ, ನರಹರಿ ದೇವರು ಉಪಸ್ಥಿತರಿದ್ದರು.