

ಚಾಮರಾಜನಗರ : ಮಕ್ಕಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗೆ ಹೆಚ್ಚಿನ ಒತ್ತುಕೊಡಬೇಕು ಎಂದು ಎಪಿಎಂಸಿ ಅಧ್ಯಕ್ಷ ಹಾಗೂ ನಗರಸಭೆ ಸದಸ್ಯ ಮನೋಜ್ ಪಾಟೀಲ್ ಸಲಹೆ ನೀಡಿದರು.
ನಗರದ ಕರಿನಂಜನಪುರ ಬಡಾವಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಜಿಲ್ಲಾ ಬಾಲಭವನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸುರಕ್ಷಾ ಜನಸೇವಾ ಟ್ರಸ್ಟ್ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಮಕ್ಕಳ ಬೇಸಿಗೆ ಶಿಬಿರ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ನಮಗೆ ಬೇಸಿಗೆ ಅಂದರೆ ಗ್ರಾಮೀಣ ಕ್ರೀಡೆಗಳು ನೆನಪಾಗುತ್ತಿದ್ದವು. ಇವತ್ತಿನ ಬದಲಾದ ಶಿಕ್ಷಣ ವ್ಯವಸ್ಥೆಯಿಂದಾಗಿ ಪೋಷಕರು ಮಕ್ಕಳ ಪಠ್ಯೇತರ ಚಟುವಟಿಕೆಗೆ ಒತ್ತುಕೊಡುತ್ತಿಲ್ಲ. ಸರ್ಕಾರಿ ಶಾಲೆಯಲ್ಲಿ ಇಂತಹ ಬೇಸಿಗೆ ಶಿಬಿರವನ್ನು ಆಯೋಜನೆ ಮಾಡಿರುವುದು, ಮಕ್ಕಳಲ್ಲಿರುವ ಅಡಗಿರುವ ಪ್ರತಿಭೆ ಅನಾವರಣಕ್ಕೆ ಸಹಕಾರಿಯಾಗಿದೆ. ಮಕ್ಕಳಲ್ಲಿರುವ ಉತ್ಸಾಹ ಮತ್ತು ಚಟುವಟಿಕೆಯನ್ನು ನೋಡಿದರೆ ಬೇಸಿಗೆ ಶಿಬಿರ ಮಕ್ಕಳಿಗೆ ಎಷ್ಟೊಂದು ಪ್ರಯೋಜನಕಾರಿಯಾಗಿದೆ ಎಂಬುದನ್ನು ತೋರಿಸುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಗ್ರಾಮದ ಮುಖಂಡ ಚಂದ್ರಪ್ಪ ಮಾತನಾಡಿ ಇಂದಿನ ಮಕ್ಕಳು ಮೊಬೈಲ್ನಲ್ಲಿ ಹೆಚ್ಚಾಗಿ ಕಾಲಕಳೆಯುತ್ತಿದ್ದಾರೆ. ಮಕ್ಕಳು ಇಂತಹ ಬೇಸಿಗೆ ಶಿಬಿರದಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕು. ಸರ್ಕಾರಿ ಶಾಲೆಯಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿರುವುದು ಅತ್ಯಂತ ಶ್ಲಾಘನೀಯ ಕೆಲಸವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಎಸ್ಡಿಎಂಸಿ ಅಧ್ಯಕ್ಷ ನಂದೀಶ್ ಕುಮಾರ್, ಉಪಾಧ್ಯಕ್ಷೆ ಪಲ್ಲವಿ ಶ್ರೀನಿವಾಸ್, ಮುಖ್ಯಶಿಕ್ಷಕ ಶಿವರಾಜ್, ಶಿಶು ಅಭಿವೃದ್ಧಿ ಇಲಾಖೆಯ ನೇಹಾ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸಿದ್ದವೀರಪ್ಪ, ಮುಖಂಡರಾದ ಕುಮಾರಸ್ವಾಮಿ, ಛಲವಾದಿ ಮಹಾಸಭಾದ ನಾರಾಯಣಸ್ವಾಮಿ, ಗುರಮಲ್ಲಪ್ಪ, ವೀರಭದ್ರಪ್ಪ, ಶೋಭಾ, ಗುರುಸ್ವಾಮಿ, ಮಹೇಶ್, ಸುರಕ್ಷಾ ಜನಸೇವಾ ಟ್ರಸ್ಟ್ ಸಂಯೋಜಕಿ ನಾಗರತ್ನ, ಮಹದೇವಸ್ವಾಮಿ ಇತರರು ಭಾಗವಹಿಸಿದ್ದರು.