

ಸರಗೂರು: ಜನಿಸಿದ ಮಗುವಿಗೆ ತಾಯಿ ಹಾಲು ನೀಡಬೇಕು. ಅದು ಮಗುವಿಗೆ ಅಮೃತವಿದ್ದಂತೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ್ ತಿಳಿಸಿದರು.
ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಎಚ್.ಡಿ.ಕೋಟೆ ತಾಲೂಕು ಆರೋಗ್ಯಾಧಿಕಾರಿ ಕಚೇರಿಯ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ತಾಯಿ ಹಾಲು ಪೌಷ್ಟಿಕಾಂಶಯುಕ್ತವಾಗಿದ್ದು, ಮಗುವಿನ ಆರೋಗ್ಯ ಹಾಗೂ ಬೆಳವಣಿಗೆಗೆ ಪೂರಕವಾಗಿದೆ. ಹೀಗಾಗಿ ಮಗುವಿಗೆ 2 ವರ್ಷ ತುಂಬವ ತನಕ ಹಾಲುಣಿಸಬೇಕು ಎಂದರು.
ಎರಡು ವರ್ಷ ಸರಿಯಾಗಿ ಹಾಲುಣಿಸುವ ತಾಯಂದಿರಿಗೆ ಸ್ತನ ಕ್ಯಾನ್ಸರ್ ಹಾಗೂ ಗರ್ಭಕೋಶದ ಕ್ಯಾನ್ಸರ್ ಬರುವುದು ಅಪರೂಪ. ಸ್ತನ್ಯಪಾನ ಮಾಡಿಸುವ ತಾಯಿ-ಮಗುವಿನ ಬಾಂಧವ್ಯ ಸುಮಧುರವಾಗಿರುತ್ತದೆ. ಕುಟುಂಬದ ಆರ್ಥಿಕ ಹೊರೆಯನ್ನು ಕಡಿಮೆ ಮಾಡುತ್ತದೆ ಎಂದು ತಿಳಿಸಿದರು.
ಮಕ್ಕಳ ತಜ್ಞೆ ಡಾ. ಜಯಮಾಲಾ ಮಾತನಾಡಿ, ಮಗು ಜನಿಸಿದ ಅರ್ಧ ಗಂಟೆಯಿಂದ 1 ಗಂಟೆಯೊಳಗೆ ಮೊದಲ ಬಾರಿಗೆ ಹಾಲುಣಿಸಬೇಕು. ಮೊದಲ 3 ದಿನ ಬರುವ ಗೀಬಿನ ಹಾಲನ್ನು (ಕೊಲೊಸ್ಟ್ರೋಮ್) ಮಗುವಿಗೆ ನೀಡಲೇಬೇಕು. ಮೊದಲು ಬರುವ ಹಳದಿ ವರ್ಣದ ಗಟ್ಟಿಹಾಲು ಮಗುವಿಗೆ ಮೊದಲ ಲಸಿಕೆ ಇದ್ದಂತೆ. ಮುಂಬರುವ ದೀರ್ಘಕಾಲಿನ ಕಾಯಿಲೆಗಳನ್ನು ತಡೆಗಟ್ಟುತ್ತದೆ ಎಂದರು.
ತಾಯಿ ಹಾಲನ್ನು ಹೊರತುಪಡಿಸಿ ಹರಳೆಣ್ಣೆ, ಜೇನುತುಪ್ಪ, ಸಕ್ಕರೆ ನೀರು, ಹಸುವಿನ ಹಾಲು, ಪೌಡರ್ ಹಾಲನ್ನು ಕೊಡಬಾರದು ಎಂದು ತಿಳಿಸಿದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರಾಧಿಕಾ ಶ್ರೀನಾಥ್ ಮಾತನಾಡಿ, ಮಗುವಿನ ಬೆಳವಣಿಗೆಗೆ ಎಲ್ಲ ತಾಯಂದಿರು ಕಡ್ಡಾಯವಾಗಿ ಹಾಲನ್ನು ಉಣಿಸಬೇಕು ಎಂದು ತಿಳಿಸಿದರು.
ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ವೀರೇಶ್, ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಪಾರ್ಥ ಸಾರಥಿ ,ದಂತ ವೈದ್ಯೆ ಡಾ.ಪೂರ್ಣಿಮಾ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯ ಸಿಬ್ಬಂದಿ ರವಿರಾಜ್, ಶರಣಪ್ಪ, ರಮಣಿ, ಅರ್ಚನಾ, ಅಸೀಮಾ ಸುಲ್ತಾನ್, ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ ಜಗದೀಶ್, ಮಹದೇವ್, ಹರೀಶ್, ಬಸಮ್ಮ, ಶಾಂತಿ, ಭಾಗ್ಯಾ ಲಕ್ಷ್ಮೀ, ಮಾನಸ, ಮಂಜುಳಾ, ಶ್ವೇತಾ, ಸಹನಾ, ಆಶಾ ಕಾರ್ಯಕರ್ತೆಯರು ಹಾಗೂ ತಾಯಂದಿರು ಇದ್ದರು.