

ಬೆಂಗಳೂರು: ವಿವಾಹಿತೆಯೊಬ್ಬಳ ಅಕ್ರಮ ಸಂಬಂಧಕ್ಕೆ ಪುತ್ರನೇ ಬಲಿಯಾಗಿದ್ದು, ಕೊಲೆಗೈದ ಪ್ರಿಯಕರ ಹಾಗೂ ಅದಕ್ಕೆ ಕುಮ್ಮಕ್ಕು ನೀಡಿದ್ದ ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಹಲಸೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.
ಹಲಸೂರಿನ ಮರ್ಫಿ ಟೌನ್ ನಿವಾಸಿ 17 ವರ್ಷದ ಬಾಲಕ ಕೊಲೆಗೀಡಾದವ. ಕೊಲೆ ಆರೋಪದ ಹಿನ್ನೆಲೆಯಲ್ಲಿ ಆತನ 35 ವರ್ಷದ ಮಹಿಳೆ ಮತ್ತು ಆಕೆಯ ಪ್ರಿಯಕರ ಶಕ್ತಿವೇಲ್ನನ್ನು ಪೊಲೀಸರು ಬಂಧಿಸಿದ್ದಾರೆ. ನಂದುವಿನ ಹೊಟ್ಟೆ-ಎದೆಗೆ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ.
ಆರೋಪಿಯಾಗಿರುವ ತಾಯಿ, ಮನೆಗೆಲಸದಾಕೆ ಆಗಿದ್ದು ಆರು ವರ್ಷಗಳ ಹಿಂದೆ ಪತಿಯಿಂದ ದೂರವಾಗಿದ್ದಳು. ಬಳಿಕ ಫೇಸ್ಬುಕ್ನಲ್ಲಿ ಪರಿಚಯವಾಗಿದ್ದ ಆಟೋ ಚಾಲಕ ಶಕ್ತಿವೇಲು ಎಂಬಾತನೊಂದಿಗೆ ಕ್ರಮೇಣ ಅಕ್ರಮ ಸಂಬಂಧ ಹೊಂದಿದ್ದಳು.
ನಿನ್ನೆ ತಾಯಿ, ಮಗ ಹಾಗೂ ಶಕ್ತಿವೇಲ್ ಮನೆಯಲ್ಲಿ ಜೊತೆಯಲ್ಲೇ ಇದ್ದಾಗ, ಮಗ ತಾಯಿ ಅಕ್ರಮ ಸಂಬಂಧದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ. ಈ ಸಂದರ್ಭದಲ್ಲಿ ಪಾನಮತ್ತನಾಗಿದ್ದ ಶಕ್ತಿವೇಲು ಬಾಲಕನ್ನು ಇರಿದು ಕೊಲೆ ಮಾಡಿದ್ದಾನೆ. ಅದಕ್ಕೆ ತಾಯಿಯೂ ಕುಮ್ಮಕ್ಕು ನೀಡಿದ್ದಳು. ಈ ವಿಷಯ ತಿಳಿದ ಆಕೆಯ ಪರಿತ್ಯಕ್ತ ಪತಿ ಪೊಲೀಸರಿಗೆ ನೀಡಿದ್ದ ದೂರಿನ ಮೇರೆಗೆ ಇಬ್ಬರನ್ನೂ ಹಲಸೂರು ಪೊಲೀಸರು ಬಂಧಿಸಿದ್ದಾರೆ.