ಹೆತ್ತ ಮಗುವನ್ನೇ ಮಾರಿದ ತಾಯಿ

infant
Published on

ರಾಮನಗರ

ಸಾಲ ತೀರಿಸಲು ಹೆತ್ತ ತಾಯಿಯೇ ಮಗುವನ್ನು ಮಾರಾಟ ಮಾಡಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಮಗು ಮಾರಿದ ಪತ್ನಿ ವಿರುದ್ಧ ಪತಿ ರಾಮನಗರ ಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ರಾಮನಗರದ ಯಾರಬ್ ನಗರದ ವಾಸಿ ಸದ್ದಾಂ ಪಾಷಾ ಹಾಗೂ ನಸ್ರೀನ್ ದಂಪತಿಗೆ ಅವಳಿ ಮಕ್ಕಳು ಸೇರಿ ಒಟ್ಟು 5 ಮಕ್ಕಳಿವೆ. 30 ದಿನಗಳ ಹಿಂದೆಯಷ್ಟೇ ದಂಪತಿಗೆ ಗಂಡು ಮಗು ಜನಿಸಿತ್ತು. ಈ ದಂಪತಿ ಯಾರಬ್ ನಗರದಲ್ಲಿ ಫಿಲೇಚೇರ್‌ನಲ್ಲಿ ಕೆಲಸ ಮಾಡುತ್ತಿದ್ದಾರೆೆ.

ಸದ್ದಾಂ ಪಾಷಾ ಸಾಕಷ್ಟು ಸಾಲ ಮಾಡಿಕೊಂಡಿದ್ದ. ಸಾಲ ತೀರಿಸಲು ಕೊನೆಯ ಮಗುವನ್ನು ಮಾರಾಟ ಮಾಡುವಂತೆ ನಸ್ರೀನ್, ಸದ್ದಾಂಗೆ ಪೀಡಿಸುತ್ತಿದ್ದಳು. ಆದರೆ, ಸದ್ದಾಂ ಪತ್ನಿಯ ಮಾತನ್ನು ತಿರಸ್ಕರಿಸಿದ್ದ ಎನ್ನಲಾಗಿದೆ.

ಡಿ.5ರಂದು ಪತಿ ಕೆಲಸಕ್ಕೆ ಹೋಗಿದ್ದಾಗ ನಸ್ರೀನ್, ಸ್ಥಳೀಯರಾದ ಅಸ್ಲಾಂ ಹಾಗೂ ಫಾಹಿಮಾ ಅವರ ಸಹಾಯದೊಂದಿಗೆ ಬೆಂಗಳೂರಿನ ತರನಂ ಸುಲ್ತಾನ ಎಂಬುವವರಿಗೆ ಗಂಡು ಮಗುವನ್ನು ಮಾರಾಟ ಮಾಡಿದ್ದಾಳೆ ಎನ್ನಲಾಗಿದೆ.

ದಂಪತಿ ನಡುವೆ ಗಲಾಟೆ

ಪತಿ ಸದ್ದಾಂ ಪಾಷಾ ಕೆಲಸ ಮುಗಿಸಿ ಮನೆಗೆ ಬಂದಾಗ ಮಗು ಎಲ್ಲಿ ಎಂದು ವಿಚಾರಿದ್ದಾನೆ. ಈ ವೇಳೆ ನಸ್ರೀನ್ ಮಗುವಿಗೆ ಹುಷಾರಿಲ್ಲ, ಸಂಬಂಧಿಕರು ಕರೆದುಕೊಂಡು ಹೋಗಿದ್ದು, ಬೆಳಗ್ಗೆ ವಾಪಸ್ ಬಿಡುತ್ತಾರೆ ಎಂದು ಸಮಜಾಯಿಷಿ ನೀಡಿದ್ದಾಳೆ. ಮರು ದಿನವೂ ದಂಪತಿ ನಡುವೆ ಮಗುವಿನ ವಿಚಾರಕ್ಕೆ ಗಲಾಟೆ ನಡೆದು ಸದ್ದಾಂ ತಲೆಗೆ ಪೆಟ್ಟು ಬಿದ್ದಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಡಿ.7ರಂದು ರಾಮನಗರ ಪುರ ಠಾಣೆಯಲ್ಲಿ ಪತ್ನಿ ನಸ್ರೀನ್ ವಿರುದ್ಧ ದೂರು ದಾಖಲಿಸಿದ್ದಾನೆ. ತನಿಖೆಯಲ್ಲಿ 1.5 ಲಕ್ಷಕ್ಕೆ ಮಗುವನ್ನು ಮಾರಾಟಮಾಡಿರುವುದು ದೃಢವಾಗಿದ್ದು, ಪ್ರಕರಣ ಸಂಬಂಧ ಐವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ, ಮಗುವನ್ನು ರಕ್ಷಣೆ ಮಾಡಲಾಗಿದೆ.

ರಾಮನಗರದ ಯಾರಬ್ ನಗರದ ಸದ್ದಾಂ ಪಾಷ ಹಾಗೂ ನಸ್ರೀನ್ ದಂಪತಿ ಮಗುವನ್ನು ರಕ್ಷಿಸಲಾಗಿದೆ. ಮಗು ಆರೋಗ್ಯದಿಂದ ಇದ್ದು, ಪಾಲನೆ ಮಾಡಲಾಗುತ್ತಿದೆ. ರಂಜಿತಾಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ,ರಾಮನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net