ಮದರ್ ಥೆರೇಸಾರ ಸಾಮಾಜಿಕ ಕಳಕಳಿ ಮಾದರಿ

ಮದರ್ ಥೆರೇಸಾರ ಸಾಮಾಜಿಕ ಕಳಕಳಿ ಮಾದರಿ
Published on

ವಿರಾಜಪೇಟೆ: ಸಮಾಜ ಸೇವೆಯನ್ನೇ ಧ್ಯೇಯವಾಗಿಟ್ಟುಕೊಂಡಿದ್ದ ಮದರ್ ಥೆರೇಸಾ ಅವರ ಸಾಮಾಜಿಕ ಕಳಕಳಿಯ ಕೆಲಸಗಳು ಶ್ಲಾಘನೀಯವಾಗಿದೆ ಎಂದು ವಿರಾಜಪೇಟೆಯ ಸಂತ ಅನ್ನಮ್ಮ ದೇವಾಲಯದ ಪ್ರಧಾನ ಗುರು ಜೇಮ್ಸ್ ಡೊಮಿನಿಕ್ ಅಭಿಪ್ರಾಯಪಟ್ಟರು.

ವಿರಾಜಪೇಟೆಯ ಮದರ್ ಥೆರೇಸಾ ಸೇವಾ ಕೇಂದ್ರದ ವತಿಯಿಂದ ಸಂತ ಅನ್ನಮ್ಮ ದ್ವಿಶತಮಾನೋತ್ಸವ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮದರ್ ಥೆರೇಸಾ ಅವರ ಜನ್ಮ ದಿನಾಚರಣೆ ಹಾಗೂ ಹಿರಿಯ ನಾಗರಿಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಿರಿಯರನ್ನು ಗೌರವಿಸುವುದು ಎಲ್ಲರ ಕರ್ತವ್ಯವಾಗಿದೆ. ಹಿರಿಯರು ಮಕ್ಕಳಲ್ಲಿ ವಿಶ್ವಾಸವನ್ನು ತುಂಬಬೇಕು. ಪ್ರೀತಿಯನ್ನು ಪರಸ್ಪರ ಹಂಚಬೇಕು. ಆ ನಿಟ್ಟಿನಲ್ಲಿ ಮದರ್ ಥೆರೇಸಾ ಸೇವಾ ಕೇಂದ್ರ ಕಾರ್ಯನಿರ್ವಹಿಸುತ್ತಿದೆ ಎಂದರು.

ಸಂತ ಅನ್ನಮ್ಮ ಪಿಯು ಕಾಲೇಜಿನ ಪ್ರಾಂಶುಪಾಲ ಮದಲೈ ಮುತ್ತು ಮಾತನಾಡಿ, ಸೇವೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಆತ್ಮ ತೃಪ್ತಿ ದೊರಕುತ್ತದೆ. ಅಲ್ಲದೆ ಭಗವಂತನ ಅನುಗ್ರಹವೂ ದೊರಕುತ್ತದೆ ಎಂದು ಹೇಳಿದರು.

ಮದರ್ ಥೆರೇಸಾ ಸೇವಾ ಕೇಂದ್ರದ ಅಧ್ಯಕ್ಷ ಪೆರಿಗ್ರಿನ್ ಮಚ್ಚಾಡೋ ಮಾತನಾಡಿ, ಎರಡು ವರ್ಷಗಳಿಂದ ಯಶಸ್ವಿಯಾಗಿ ಸೇವಾಕೇಂದ್ರ ನಡೆಸಲಾಗುತ್ತಿದೆ. ಉತ್ತಮ ವ್ಯಕ್ತಿತ್ವದಿಂದ ಮುನ್ನಡೆದರೆ ಯಶಸ್ವಿಯಾಗಬಹುದು ಎಂದರು.

ಕಾರ್ಯಕ್ರಮದಲ್ಲಿ 75 ವರ್ಷ ಮೇಲ್ಪಟ್ಟ 50ಕ್ಕೂ ಹೆಚ್ಚಿನ ಹಿರಿಯ ನಾಗರಿಕರನ್ನು ಗೌರವಿಸಲಾಯಿತು. ಧರ್ಮಗುರು ಫಾ.ಜೇಮ್ಸ್ ಡೊಮಿನಿಕ್, ಮದಲೈ ಮುತ್ತು, ಬಿ.ಎನ್. ಶಾಂತಿಭೂಷಣ್ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭ ಆರು ಜನರಿಗೆ ಆರೋಗ್ಯ ವೆಚ್ಚ ಹಾಗೂ ವಿದ್ಯಾರ್ಥಿನಿ ವಿನಿಷಾ ಡಿಸೋಜಾ ಅವರಿಗೆ ನೆರವು ನೀಡಲಾಯಿತು. ಹಿರಿಯ ನಾಗರಿಕರಿಗೆ ಮನರಂಜನಾ ಕ್ರೀಡೆಗಳನ್ನು ನಡೆಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಲವೀನಾ, ಚೋಪಿ ಜೋಸೆಫ್, ಜೋಕಿಮ್ ರಾಡ್ರಿಗೀಸ್, ಮಾರ್ಟೀನ್ ಬರ್ನಾಡ್, ಮರ್ವಿನ್ ಲೋಬೋ, ಜಾನಿ ಮೆನೇಜೆಸ್, ಹಾಗೂ ಜೇಮ್ಸ್ ಮೆನೇಜೆಸ್, ಫ್ಲೋರ ಡಿಸೋಜಾ, ಪ್ರೆಸಿಲ್ಲಾ, ಚಾರ್ಲ್ಸ್ ಡಿಸೋಜಾ, ಪಾಯಿಲೇಟ್ ಡಿಸೋಜ, ಬೆನೆಡಿಕ್ಟ್ ಸಾಲ್ಡಾನ್ಹಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net