ಗಂಡನ ಮನೆಯವ್ರು ವಾಪಸ್ ಕರೆದೊಯ್ಯಲು ಬಂದಿದ್ದಕ್ಕೆ 1 ವರ್ಷದ ಮಗು ಸಮೇತ ಬಾವಿಗೆ ಹಾರಿದ್ಲು; ತಾಯಿ-ಮಗು ಇಬ್ಬರೂ ಇನ್ನಿಲ್ಲ..

Mother
ಬಾವಿಯಿಂದ ತಾಯಿ-ಮಗು ಶವ ಹೊರ ತೆಗೆಯುತ್ತಿರುವ ಅಗ್ನಿಶಾಮಕ ಸಿಬ್ಬಂದಿ
Published on

ಬಾಗಲಕೋಟೆ: ಮದುವೆಯಾಗಿ ಹೋದ ಹೆಣ್ಣು ತವರಿಗೆ ಬಂದಾಗ ಗಂಡನ ಕಡೆಯವರು ಮತ್ತೆ ವಾಪಸ್​ ಕರೆದುಕೊಂಡು ಹೋಗಲು ಬರದಿದ್ದರೆ ಬೇಸರ ಮಾಡಿಕೊಳ್ಳುವುದು ಸಹಜ. ಆದರೆ ಇಲ್ಲೊಬ್ಬಳು ಮಹಿಳೆ ಗಂಡನ ಕಡೆಯವರು ವಾಪಸ್ ಕರೆದುಕೊಂಡು ಹೋಗಲು ಬಂದಿದ್ದಾರೆ ಎಂಬ ಕಾರಣಕ್ಕೆ ಒಂದು ವರ್ಷದ ಮಗುವಿನ ಸಹಿತ ಬಾವಿಗೆ ಹಾರಿದ್ದಾಳೆ.

ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ತಾಲೂಕಿನ ರಾಘಾಪುರ ಎಂಬಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ಗುಳೇದಗುಡ್ಡ ತಾಲೂಕಿನ ಹಂಸನೂರ ಗ್ರಾಮದ ಫಕೀರವ್ವ (26) ಹಾಗೂ ಆಕೆಯ ಒಂದು ವರ್ಷದ ಮಗಳು ಶಿವಾನಿ ಮೃತಪಟ್ಟವರು. ಮಂಜುನಾಥ ಎಂಬಾತನ ಜೊತೆ ಮದುವೆಯಾಗಿದ್ದ ಫಕೀರವ್ವ ಒಂದು ವರ್ಷದ ಹಿಂದೆ ಹೆರಿಗೆಗೆಂದು ತವರಿಗೆ ಮರಳಿದ್ದಳು.

ಹೀಗೆ ಬಂದವಳು ತನ್ನ ಅಜ್ಜಿ ಮನೆಯಾದ ಗುಳೇದಗುಡ್ಡ ರಾಘಾಪುರದ ಹಂಸನೂರಿನಲ್ಲಿ ನೆಲೆಸಿದ್ದಳು. ಇಂದು ಪತಿಯ ಕಡೆಯವರು ವಾಪಸ್ ಕರೆದೊಯ್ಯಲು ಬಂದಿದ್ದಾಗ ಈಕೆ ದನ ಮೇಯಿಸಲು ಹೋಗಿದ್ದಳು. ಗಂಡನ ಕಡೆಯವರು ಕರೆದೊಯ್ಯಲು ಬಂದ ವಿಷಯ ತಿಳಿದಾಕ್ಷಣ ಮಗುವಿನೊಂದಿಗೆ ಅಜ್ಜಿಯ ಜಮೀನಿನಲ್ಲಿ ಇರುವ ಬಾವಿಗೆ ಹಾರಿದ್ದಾಳೆ.

ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ತಾಯಿ-ಮಗು ಇಬ್ಬರ ಶವವನ್ನೂ ಬಾವಿಯಿಂದ ತೆಗೆದಿದ್ದು, ಮರಣೋತ್ತರ ಪರೀಕ್ಷೆಗಾಗಿ ಪಾರ್ಥಿವ ಶರೀರಗಳನ್ನು ಗುಳೇದಗುಡ್ಡ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಗಂಡನ ಮನೆಗೆ ಹೋಗಲು ಇಚ್ಛೆ ಇಲ್ಲದೆ ಫಕೀರವ್ವ ಹೀಗೆ ಮಾಡಿಕೊಂಡಿದ್ದಾಳೆ ಎನ್ನಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net