ತಾಯಿ, ಶಿಶು ಮರಣ ತಪ್ಪಿಸುವುದು ಅಗತ್ಯ

19 SARAG 1
Published on

ಸರಗೂರು: ಪೋಷಕಾಂಶ ಕೊರತೆಯಿಂದ ಗರ್ಭಿಣಿಯರು, ಮಕ್ಕಳು ರಕ್ತಹೀನತೆಯಿಂದ ಬಳಲುವ ಸಂಭವವಿದ್ದು, ತಾಯಿ ಮತ್ತು ಶಿಶು ಮರಣವನ್ನು ತಪ್ಪಿಸುವುದು ಮುಖ್ಯವಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ್ ತಿಳಿಸಿದರು.


ತಾಲೂಕಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ತಾಲೂಕು ಕಚೇರಿ, ಸಮುದಾಯ ಆರೋಗ್ಯ ಕೇಂದ್ರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಬುಧವಾರ ಆಯೋಜಿಸಿದ್ದ ಪೋಷಣ್ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪೋಷಣ್ ಅಭಿಯಾನದ ಉದ್ದೇಶ, ಗರ್ಭಿಣಿಯರು, ಬಾಣಂತಿಯರು, ಮಕ್ಕಳಿಗೆ ಪೋಷಕಾಂಶಯುಕ್ತ ಆಹಾರ ಸೇವನೆ ಬಗ್ಗೆ ಅರಿವು ಮೂಡಿಸುವುದಾಗಿದೆ. ಹೆಚ್ಚು ತರಕಾರಿ, ಸೊಪ್ಪು, ಮೊಳಕೆ ಕಾಳುಗಳನ್ನು ಸೇವಿಸುವುದರಿಂದ ಅಮಿನಿಯಾದಿಂದ ದೂರವಿರಬಹದು ಎಂದ ಹೇಳಿದರು.


ಅಂಗನವಾಡಿಯಲ್ಲಿ ಕೊಡುವ ಆಹಾರ ಪದಾರ್ಥವನ್ನು ಸೇವಿಸಬೇಕು. ಆಶಾ, ಅಂಗನವಾಡಿ ಕಾರ್ಯಕರ್ತೆಯರು ಜನರಿಗೆ ಪೌಷ್ಟಿಕ ಆಹಾರದ ಬಗ್ಗೆ ಅರಿವು ಮೂಡಿಸಬೇಕು. ತಾಯಿ, ಶಿಶು ಮರಣ ತಡೆಗೆ ಕೈಜೋಡಿಸಬೇಕು. ಜನರಿಗೆ ಸರ್ಕಾರದಿಂದ ಸಿಗುವ ಯೋಜನೆಗಳ ಬಗ್ಗೆ ತಿಳಿಸಬೇಕು ಎಂದರು.


ಪ್ರಸೂತಿ ತಜ್ಞೆ ಭಾಗ್ಯಲಕ್ಷ್ಮೀ ಮಾತನಾಡಿ, ಗರ್ಭಿಣಿಯರು ಸಮತೋಲನ ಆಹಾರ ಸೇವಿಸಬೇಕು. ಮಗು ಹುಟ್ಟಿದ ತಕ್ಷಣ ತಾಯಿ ಸ್ತನ್ಯಪಾನ ಮಾಡಿಸುವುದನ್ನು ಮರೆಯಬಾರದು. ಆರು ತಿಂಗಳ ನಂತರ ಸ್ತನ್ಯಪಾನದ ಜತೆಗೆ ಪೂರಕ ಆಹಾರ ನೀಡಬೇಕು. ಕಾಲ ಕಾಲಕ್ಕೆ ರಕ್ಷಣಾ ಚುಚ್ಚುಮದ್ದಗಳನ್ನು ಮಗುವಿಗೆ ಕೊಡಿಸಬೇಕು ಎಂದು ಸಲಹೆ ನೀಡಿದರು.


ಸಮುದಾಯ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಪಾರ್ಥಸಾರಥಿ, ಸಿಬ್ಬಂದಿ ಹರೀಶ್, ರವಿರಾಜ್, ಶಾಂತಿ, ಪುಷ್ಪಾ, ಜಗದೀಶ್, ಹರೀಶ್, ಮಹೇಶ್, ಮಹದೇವ, ಮಾನಸಾ, ಶ್ವೇತಾ, ಸಹನಾ, ಮಂಜುಳಾ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net