ಮಳೆಗಾಗಿ ಅತ್ತೆಮ್ಮನ ಅಂಗಳ ಪೂಜೆ

FotoJet (4)
Published on

ಕೆ.ಮುತ್ತುಗದಹಳ್ಳಿಯಲ್ಲಿ ಗ್ರಾಮಸ್ಥರಿಂದ ವಿಶಿಷ್ಟ ಆಚರಣೆ | ಸಮೃದ್ಧ ಬೆಳೆಗಾಗಿ ಪ್ರಾರ್ಥನೆ

ಶಿಡ್ಲಘಟ್ಟ : ನದಿ ನಾಲೆಯ ನೀರು ಕಾಣದ ತಾಲೂಕಿನ ಜನತೆ ಮಳೆಯನ್ನೇ ಆಶ್ರಯಿಸಿದ್ದಾರೆ. ಆದರೆ, ಈ ಬಾರಿ ಮಳೆ ಕೈಕೊಟ್ಟಾಗ ‘ವಾನರಾಯ’(ಮಳೆರಾಯ)ನನ್ನು ವಿವಿಧ ರೀತಿಯಲ್ಲಿ ಪೂಜಿಸಲುಸುವುದು ವಾಡಿಕೆ.
ಅಂತೆಯೇ, ತಾಲೂಕಿನ ಕೆ.ಮುತ್ತುಕದಹಳ್ಳಿಯಲ್ಲಿ ಗ್ರಾಮಸ್ಥರೆಲ್ಲ ಸೇರಿ ಮಳೆಗಾಗಿ ‘ಅತ್ತೆಮ್ಮನ ಅಂಗಳ ಪೂಜೆ’ಯನ್ನು ಮಂಗಳವಾರ ನೆರವೇರಿಸಿದರು.
‘ಮಳೆ ಬೆಳೆ ಉತ್ತಮವಾಗಿ ಬರಲಿ, ಜನ-ಜಾನುವಾರುಗಳಿಗೆ ಯಾವುದೇ ತೊಂದರೆ ಎದುರಾಗದಿರಲಿ’ ಎಂದು ಹಳ್ಳಿಗಳಲ್ಲಿ ಹಲವಾರು ಸಾಂಪ್ರದಾಯಿಕ ಪೂಜೆಗಳನ್ನು ಆಚರಿಸುವುದು ಸಾಮಾನ್ಯ. ಅಂತಹ ಹಲವು ಸಂಪ್ರದಾಯಗಳಲ್ಲಿ ‘ಅತ್ತೆಮ್ಮನ ಅಂಗಳ ಪೂಜೆ’ಯೂ ಒಂದು.
ಹದಿನೈದು ದಿನಕ್ಕೊಮ್ಮೆ ಮಳೆ ಹೆಸರು ಬದಲಾಗುತ್ತದೆ. ರೇವತಿಯಿಂದ ಪ್ರಾರಂಭವಾಗಿ ಜ್ಯೇಷ್ಠ ಮಳೆಗೆ ಕೊನೆಯಾಗುತ್ತದೆ. ಪಿತೃ ಪಕ್ಷದಲ್ಲಿ ಬರುವ ಮಳೆಯೇ ಹಸ್ತ ಮಳೆ. ಈ ಮಳೆ ಪ್ರಾರಂಭವಾದ ದಿನದಿಂದ ಕೊನೆಯಾಗುವ ವೇಳೆಗೆ ಯಾವುದಾದರೂ ಒಂದು ಶುಕ್ರವಾರ ಅಥವಾ ಮಂಗಳವಾರದಂದು ಅತ್ತೆಮ್ಮನ ಅಂಗಳ ಪೂಜೆ ಮಾಡುವುದು ವಾಡಿಕೆ.
ಕುಂಬಾರರ ಮನೆಯಿಂದ ಒಲೆ ಬೂದಿ ತಂದು ಊರು ಬಾಗಿಲ ಬಳಿ ಅತ್ತೆಮ್ಮನ ಚಿತ್ರ ಬಿಡಿಸಿ ಪೂಜೆ ಮಾಡಿ ಕುರಿ ಬಲಿ ನೀಡಿದ ನಂತರ ಕತ್ತರಿಸಿದ ಹಸಿರು ರಾಗಿ ಹುಲ್ಲು, ಅವರೆ ಸೊಪ್ಪು, ಜೋಳದ ರೆಕ್ಕೆಗಳನ್ನು ಕುರಿಯ ರಕ್ತದಲ್ಲಿ ಬೆರೆಸಿ ಆ ಹುಲ್ಲನ್ನು ಊರಿನ ಸುತ್ತಲೂ ಗಸ್ತು ಹಾಕಲಾಯಿತು. ಪೂಜೆ ನಂತರ ಬೂದಿಯನ್ನು ಗ್ರಾಮದ ಪ್ರತಿಯೊಬ್ಬರೂ ಕೊಂಡೊಯ್ದು ತಮ್ಮ ಜಮೀನುಗಳ ಬಳಿ ಅತ್ತೆಮ್ಮನ ಚಿತ್ರ ಬಿಡಿಸಿ ಬಂದರು. ಇದರಿಂದ ಮಳೆ ಚೆನ್ನಾಗಿ ಬಿದ್ದು ಸಮೃದ್ಧವಾದ ಬೆಳೆಯಾಗಿ, ಜನ, ಜಾನುವಾರಗಳು ರೋಗ ರುಜಿನಗಳಿಲ್ಲದಂತೆ ನಾಡು ಸುಭಿಕ್ಷವಾಗುತ್ತದೆ ಎನ್ನುವುದು ನಂಬಿಕೆ.
ಗ್ರಾಮಸ್ಥರಾದ ನಾರಾಯಣಪ್ಪ, ನಾಗರಾಜ್, ರಾಮ, ಅಶ್ವತ್ಥಪ್ಪ, ಕೇಶವ, ವೆಂಕಟೇಶಪ್ಪ, ಚನ್ನರಾಯಪ್ಪ, ನಾಗೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net