

ಹಾನಗಲ್ಲ: ಕಂಚಿನೆಗಳೂರಿನಿಂದ ಕಾಡಶೆಟ್ಟಿಹಳ್ಳಿಗೆ ಬೈಕ್ನಲ್ಲಿ ಬರುತ್ತಿದ್ದ ತಾಯಿ-ಮಗ ಮಂಗಳವಾರ ರಾತ್ರಿ ಧರ್ಮಾ ಕಾಲುವೆಗೆ ವಾಹನದೊಂದಿಗೆ ಬಿದ್ದಿದ್ದು, ಬುಧವಾರ ಬೆಳಗ್ಗೆ ಅಗ್ನಿಶಾಮಕ ದಳದ ಸಿಬ್ಬಂದಿ ಇಬ್ಬರ ಶವಗಳನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಕಂಚಿನೆಗಳೂರು-ಕಾಡಶೆಟ್ಟಿಹಳ್ಳಿ ಮಧ್ಯದಲ್ಲಿರುವ ಧರ್ವ ಕಾಲುವೆಯ ಸಮೀಪದ ತಿರುವಿನಲ್ಲಿ ಮಂಗಳವಾರ ರಾತ್ರಿ ಬೈಕ್ನಲ್ಲಿದ್ದ ಬರುತ್ತಿದ್ದ ಬಸವರಾಜ ಕುಂದೂರ (24) ಹಾಗೂ ಚನ್ನವ್ವ ಪಂಚಾಕ್ಷರಿ ಕುಂದೂರ (42) ಕಾಲುವೆಯಲ್ಲಿ ಬಿದ್ದು ನೀರಿನಲ್ಲಿ ಮುಳುಗಿದ್ದರು. ಸುಮಾರು 8 ಅಡಿಗಳಷ್ಟಿದ್ದ ನೀರಿನಲ್ಲಿ ಅಗ್ನಿಶಾಮಕ ಸಿಬ್ಬಂದಿ ರಾತ್ರಿಯಿಡಿ ಶೋಧ ಕಾರ್ಯ ನಡೆಸಿದ್ದರೂ ಶವ ದೊರೆತಿರಲಿಲ್ಲ. ಬುಧವಾರ ಬೆಳಗ್ಗೆ ತಾಯಿ-ಮಗನ ಶವ ಪತ್ತೆಯಾಗಿದ್ದು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ರಸ್ತೆ ತಿರುವಿನಲ್ಲಿ ಬೈಕ್ ನಿಯಂತ್ರಿಸಲಾಗದೇ ರಸ್ತೆ ಪಕ್ಕದ ಧರ್ವ ಕಾಲುವೆಗೆ ವಾಹನ ಸಮೇತ ಬಿದ್ದಿದ್ದಾರೆ. ವಾಹನವನ್ನು ವೇಗವಾಗಿ ಚಲಾಯಿಸಿದ್ದರಿಂದ ತಿರುವಿನಲ್ಲಿ ಬೈಕ್ ನಿಯಂತ್ರಣಗೊಳ್ಳಲಿಲ್ಲ ಎನ್ನಲಾಗಿದ್ದು, ತಾಯಿ-ಮಗ ದುರಂತ ಸಾವಿಗೀಡಾಗಿದ್ದಾರೆ.
ಶ್ರೀನಿವಾಸ ಮಾನೆ ಭೇಟಿ: ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ ಧರ್ವ ಕಾಲುವೆ ಸ್ಥಳಕ್ಕೆ ಬುಧವಾರ ಭೇಟಿ ನೀಡಿ, ಘಟನೆಯ ವಿವರ ಪಡೆದರು. ಮೃತರ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ತಾಲೂಕು ತಹಸೀಲ್ದಾರ್ ಪಿ.ಎಸ್.ಎರ್ರಿಸ್ವಾಮಿ, ಸಿಪಿಐ ಶಿವಶಂಕರ ಗಣಾಚಾರಿ, ಆಡೂರ ಪಿಎಸ್ಐ ಆಂಜನೇಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ಆಡೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಸ್ತೆ ತಿರುವಿನಲ್ಲಿರುವ ರೈತನೋರ್ವನ ಹೊಲದ ಜಾಗದ ಸಮಸ್ಯೆಯಿಂದಾಗಿ ತಿರುವನ್ನು ನೇರಗೊಳಿಸಲಾಗಿರಲಿಲ್ಲ. ತಿರುವಿನಲ್ಲಿರುವ ಹೊಲದ ದಾಖಲೆಗಳನ್ನು ಪರಿಶೀಲಿಸಿ ನಂತರ ರಸ್ತೆ ನೇರಗೊಳಿಸಲು ಅಥವಾ ತಿರುವಿನಲ್ಲಿ ರಸ್ತೆ ಅಗಲೀಕರಣಗೊಳಿಸಲಾಗುವುದು. ರಸ್ತೆಯ ಎರಡೂ ಬದಿಗೆ ಗ್ರಿಲ್ ಅಳವಡಿಸುವ ಕುರಿತು ಕ್ರಮ ಕೈಗೊಳ್ಳಲಾಗುವುದು.| ಪಿ.ಎಸ್.ಎರ್ರಿಸ್ವಾಮಿ, ತಹಸೀಲ್ದಾರ್ ಹಾನಗಲ್ಲ.