

ಬೆಂಗಳೂರು: ರಾಜ್ಯದಲ್ಲಿ ತಡೆಗಟ್ಟಬಹುದಾದ ತಾಯಂದಿರ ಮರಣ ಪ್ರಮಾಣವನ್ನು ಶೂನ್ಯಕ್ಕೆ ಇಳಿಸಲು ವಿಶೇಷ ಅಭಿಯಾನ ಹಮ್ಮಿಕೊಂಡಿರುವ ಆರೋಗ್ಯ ಇಲಾಖೆಯು, ಈ ಸಂಬಂಧ ತಾಯಿ ಮತ್ತು ಮಕ್ಕಳ ಆಸ್ಪತ್ರೆ (ಎಂಸಿಎಚ್) ಬಲವರ್ಧನೆ, ಉಪಕರಣಗಳ ಖರೀದಿ ಸೇರಿ ವಿವಿಧ ಕ್ರಮಗಳಿಗೆ 139 ಕೋಟಿ ರೂ. ಅನುದಾನ ಬಳಕೆಗೆ ಅನುಮೋದನೆ ದೊರೆತಿದೆ.
ರಾಜ್ಯದಲ್ಲಿ ಸಹಜ ಹೆರಿಗೆ, ನಿಯಮಿತ ತಪಾಸಣೆಯನ್ನು ಉತ್ತೇಜಿಸಲಾಗುತ್ತಿದ್ದು, ತಾಯಂದಿರ ಮರಣ ಪ್ರಮಾಣ ಇಳಿಮುಖ ಆಗಿದೆ. ಇಲಾಖೆಯ ವಿಶ್ಲೇಷಣೆ ಪ್ರಕಾರ 2024-25ನೇ ಸಾಲಿನಲ್ಲಿ ತಾಯಂದಿರ ಮರಣ ಪ್ರಮಾಣ ಶೇ. 57 ಇದೆ. 2024-25ನೇ ಸಾಲಿನಲ್ಲಿ ರಾಜ್ಯದಲ್ಲಿ 9.31 ಲಕ್ಷ ಹೆರಿಗೆಗಳಾಗಿದ್ದು, 530 ತಾಯಂದಿರ ಮರಣ ಪ್ರಕರಣ ವರದಿಯಾಗಿದೆ. ಈ ಸಾವಿನ ನಿಖರ ಕಾರಣ ತಿಳಿಯಲು ಸಾವಿನ ಲೆಕ್ಕಗಳ ವರದಿ (ಡೆತ್ ಆಡಿಟ್) ಸಿದ್ಧಪಡಿಸಲಾಗುತ್ತಿದೆ ಎಂದು ಇಲಾಖೆ ತಿಳಿಸಿದೆ.
ರಕ್ತಸ್ರಾವ, ಗರ್ಭಪಾತ, ಅಧಿಕ ರಕ್ತದೊತ್ತಡ ಸೇರಿ ವಿವಿಧ ಕಾರಣಗಳಿಂದ ತಾಯಂದಿರ ಮರಣ ವರದಿಯಾಗುತ್ತಿದ್ದು, ಶೇ. 70 ಪ್ರಕರಣಗಳಲ್ಲಿ ಮರಣವನ್ನು ತಡೆಯಬಹುದಾಗಿದೆ. ಪ್ರಸವಪೂರ್ವ ಮತ್ತು ಪ್ರಸವ ನಂತರದ ಆರೈಕೆಯ ಗುಣಮಟ್ಟ ಸುಧಾರಿಸಲು ಕ್ರಮವಹಿಸಲಾಗಿದೆ ಎಂದು ಹೇಳಿದೆ.
ಗರ್ಭಿಣಿಯರಲ್ಲಿ ಮತ್ತು ಪ್ರಸೂತಿ ವೇಳೆಯಲ್ಲಿನ ತೀವ್ರತರಹದ ರಕ್ತಸ್ರಾವ ತಡೆಗಟ್ಟಲು ಹಾಗೂ ಚಿಕಿತ್ಸೆ ನೀಡಲು ಅಗತ್ಯವಿರುವ ಉಪಕರಣಗಳ ಖರೀದಿ ಜತೆಗೆ, ಹಾಸಿಗೆಗಳ ಹೆಚ್ಚಳ, ಆಸ್ಪತ್ರೆಗಳ ಮೇಲ್ದರ್ಜೆ, ಮೇಲ್ವಿಚಾರಣೆ ಸೌಲಭ್ಯ, ವಿಶ್ರಾಂತಿ ಕೊಠಡಿ, ಸಹಾಯವಾಣಿ ಸೇರಿ ವಿವಿಧ ವ್ಯವಸ್ಥೆಗೆ ಅನುದಾನ ಹಂಚಿಕೆ ಮಾಡಲಾಗಿದೆ.