ಸೆ.4ರಂದು ಸುಳ್ಯದಲ್ಲಿ ಮೊಸರು ಕುಡಿಕೆ ಉತ್ಸವ : ಸಮಿತಿ ಅಧ್ಯಕ್ಷ ಎ.ವಿ.ತೀರ್ಥರಾಮ ಮಾಹಿತಿ

Published on

ಸುಳ್ಯ: ವಿಶ್ವ ಹಿಂದು ಪರಿಷದ್ ಮತ್ತು ಸುಳ್ಯ ಮೊಸರು ಕುಡಿಕೆ ಉತ್ಸವ ಸಮಿತಿ ವತಿಯಿಂದ ವಿಶ್ವ ಹಿಂದು ಪರಿಷದ್‌ನ ಸ್ಥಾಪನಾ ದಿನಾಚರಣೆ ಅಂಗವಾಗಿ 11ನೇ ವರ್ಷದ ಸುಳ್ಯ ಮೊಸರು ಕುಡಿಕೆ ಉತ್ಸವ ಮತ್ತು ಶೋಭಾ ಯಾತ್ರೆ ಸೆ.4ರಂದು ಸುಳ್ಯದಲ್ಲಿ ನಡೆಯಲಿದೆ ಎಂದು ಸುಳ್ಯ ಮೊಸರು ಕುಡಿಕೆ ಉತ್ಸವ ಸಮಿತಿ ಅಧ್ಯಕ್ಷ ಎ.ವಿ.ತೀರ್ಥರಾಮ ತಿಳಿಸಿದರು.

ಸುಳ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸುಳ್ಯದಲ್ಲಿ 17 ಕಡೆಗಳಲ್ಲಿ ಸಾಹಸಮಯ ಅಟ್ಟಿ ಮಡಿಕೆ ಒಡೆಯುವ ಉತ್ಸವ ನಡೆಯಲಿದೆ. ಸಂಜೆ 6ಕ್ಕೆ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾಜಿ ಸಂಸದ ಹಾಗೂ ಖ್ಯಾತ ಅಂಕಣಕಾರ ಪ್ರತಾಪ ಸಿಂಹ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಮೊಸರು ಕುಡಿಕೆ ಉತ್ಸವ ಸಮಿತಿ ಅಧ್ಯಕ್ಷ ಎ.ವಿ.ತೀರ್ಥರಾಮ ಅಧ್ಯಕ್ಷತೆ ವಹಿಸಲಿದ್ದಾರೆ. ವಿಶ್ವ ಹಿಂದು ಪರಿಷದ್ ಸುಳ್ಯ ಪ್ರಖಂಡದ ನಿಕಟ ಪೂರ್ವ ಅಧ್ಯಕ್ಷ ಗಣಪತಿ ಮಜಿಗುಂಡಿ ಸಭಾ ಕಾರ್ಯಕ್ರಮ ಉದ್ಘಾಟಿಸುವರು.

ಶೋಭಾಯಾತ್ರೆ ಚೆನ್ನಕೇಶವ ದೇವಸ್ಥಾನದಿಂದ ಆರಂಭಗೊಂಡು, ಬಳಿಕ ಚೆನ್ನಕೇಶವ ದೇವಸ್ಥಾನದ ಮೈದಾನದ ಬಳಿ ವಿಶೇಷ ಆಕರ್ಷಣೆ ಅಟ್ಟಿ ಮಡಿಕೆ ಒಡೆಯುವ ಮೂಲಕ ಸಮಾಪನಗೊಳ್ಳಲಿದೆ. ಮೊಸರು ಕುಡಿಕೆ ಸ್ಪರ್ಧೆ ತಂಡದಲ್ಲಿ 15ಜನರಿಗೆ ಮಾತ್ರ ಅವಕಾಶವಿದ್ದು, ಶೋಭಾಯಾತ್ರೆ ಮಧ್ಯದಲ್ಲಿ ಸದಸ್ಯರ ಬದಲಾವಣೆಗೆ ಅವಕಾಶವಿರುವುದಿಲ್ಲ. ಸ್ಪರ್ಧೆಯಲ್ಲಿ ಹಿಂದು ಯುವಕರಿಗೆ ಮಾತ್ರ ಭಾಗವಹಿಸಲು ಅವಕಾಶ ಇದೆ.

ವಿಶ್ವ ಹಿಂದು ಪರಿಷದ್ ಸುಳ್ಯ ಪ್ರಖಂಡ ಅಧ್ಯಕ್ಷ ಸೋಮಶೇಖರ ಪೈಕ, ಮೊಸರು ಕುಡಿಕೆ ಉತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಯಾದವ್, ಉಪಾಧ್ಯಕ್ಷರಾದ ರವಿಚಂದ್ರ ಕೊಡಿಯಾಲಬೈಲು, ದೇವಿಪ್ರಸಾದ್ ಅತ್ಯಾಡಿ, ಕೋಶಾಧಿಕಾರಿ ನವೀನ್ ಎಲಿಮಲೆ, ಬಜರಂಗದಳ ತಾಲೂಕು ಸಂಯೋಜಕ ಹರಿಪ್ರಸಾದ್ ಎಲಿಮಲೆ, ನಗರ ಸಂಯೋಜಕ ವರ್ಷಿತ್ ಚೊಕ್ಕಾಡಿ ಪದಾಧಿಕಾರಿಗಳಾದ ಮಂಜುನಾಥ್ ಕಾಟೂರು, ರೂಪೇಶ್ ಪೂಜಾರಿಮನೆ, ಸನತ್ ಚೊಕ್ಕಾಡಿ ಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net