

ಶಿರಸಿ: ಕರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಪಾನ್ ಮಸಾಲಾ ಕಂಪನಿಗಳಿಂದ ಅಡಕೆಗೆ ಬೇಡಿಕೆ ತಗ್ಗಿದೆ. ಜತೆಗೆ, ಸಗಟು ವ್ಯಾಪಾರಕ್ಕೆ ಕರೊನಾ ನಿಯಮಾವಳಿ ತೊಡಕಾಗಿದ್ದು, ಬೆಳೆಗಾರರು ದರ ಹಾಗೂ ಭವಿಷ್ಯದ ಮಾರುಕಟ್ಟೆಯ ಬಗ್ಗೆ ಚಿಂತಿತರಾಗಿದ್ದಾರೆ.
ವರ್ಷವಿಡೀ ಮಾರುಕಟ್ಟೆಯಲ್ಲಿ ಅಡಕೆ ವಹಿವಾಟು ನಡೆಯುತ್ತಿದ್ದರೂ ಮಾರ್ಚ್ನಿಂದ ಮೇ ತಿಂಗಳವರೆಗೆ ಮಾರುಕಟ್ಟೆಗೆ ಅತಿಹೆಚ್ಚು ಉತ್ಪನ್ನ ಬರುತ್ತದೆ. ಮಳೆಗಾಲದ ಸಿದ್ಧತೆ, ತೋಟದ ಅಭಿವೃದ್ಧಿ, ಸಾಲ ಭರಣ ಮೊದಲಾದ ಕಾರಣಗಳಿಂದಾಗಿ ರೈತರು, ಸಿದ್ಧಪಡಿಸಿಟ್ಟುಕೊಂಡಿರುವ ಕೆಂಪಡಕೆ ಹಾಗೂ ಚಾಲಿಯನ್ನು ಮಾರಾಟಕ್ಕೆ ತರುತ್ತಾರೆ. ಈ ಬಾರಿ ಕ್ವಿಂಟಾಲ್ ಒಂದಕ್ಕೆ 35ರಿಂದ 40 ಸಾವಿರ ರೂಪಾಯಿಯಲ್ಲಿ ಸ್ಥಿರವಾಗಿದ್ದ ಅಡಕೆ ದರವನ್ನು ಕಂಡು ಬೆಳೆಗಾರರು ಸಂತಸದಲ್ಲಿರುವಾಗಲೇ ಕರೊನಾ ಲಾಕ್ಡೌನ್ ರೈತರ ಖುಷಿಯನ್ನು ಕಸಿದುಕೊಂಡಿದೆ.
ಬೇಡಿಕೆಯೇ ಇಲ್ಲ: ಅಡಕೆಯ ಬೃಹತ್ ಮಾರುಕಟ್ಟೆಯಾಗಿದ್ದ ಉತ್ತರ ಭಾರತದ ರಾಜ್ಯಗಳಲ್ಲಿ ಕೋವಿಡ್ ನಿಮಿತ್ತ ಲಾಕ್ಡೌನ್ ಘೊಷಣೆ ಮಾಡಲಾಗಿದೆ. ಜತೆಗೆ, ರಾಜ್ಯದಲ್ಲಿಯೂ ಕರೊನಾ ಲಾಕ್ಡೌನ್ ಜಾರಿಯಾಗಿದೆ. ಬಹುತೇಕ ಪಾನ್ ಮಸಾಲಾ ಕಂಪನಿಗಳು ಮಹಾರಾಷ್ಟ್ರ, ಗುಜರಾತ್ ಸೇರಿದಂತೆ ಉತ್ತರ ಭಾರತದಲ್ಲಿದ್ದು, ಅವು ಅಡಕೆ ಖರೀದಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿವೆ. ಇದು ಅಡಕೆ ಮಾರುಕಟ್ಟೆ ಮೇಲೆ ವ್ಯತಿರಿಕ್ತ ಪರಿಣಾಮಕ್ಕೆ ಕಾರಣವಾಗಿದೆ. ಶಿರಸಿ, ಶಿವಮೊಗ್ಗ ಸೇರಿದಂತೆ ಅಡಕೆ ಬೆಳೆಯುವ ಮಲೆನಾಡ ಜಿಲ್ಲೆಗಳಿಂದ ನಿತ್ಯ 500ರಿಂದ 600 ಕ್ವಿಂಟಾಲ್ಗೂ ಹೆಚ್ಚು ಅಡಕೆ ಪಾನ್ ಮಸಾಲಾ ಕಂಪನಿಗಳಿಗೆ ಪೂರೈಕೆಯಾಗುತ್ತಿತ್ತು. ಆದರೆ, ಈಗ ಬೇಡಿಕೆಯೇ ಇಲ್ಲದಂತಾಗಿದೆ. ಸಹಕಾರಿ ಸಂಸ್ಥೆಗಳ ಜತೆ ವ್ಯಾಪಾರಿಗಳು ಖರೀದಿ ಮಾಡಿದ ಅಡಕೆ ದಾಸ್ತಾನಿಡಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಮಾರುಕಟ್ಟೆಯ ಈ ಬೆಳವಣಿಗೆ ಅಡಕೆ ದರಕ್ಕೆ ಮಾರಕವಾಗಿ ಪರಿಣಮಿಸಿದೆ ಎಂಬುದು ಮಾರುಕಟ್ಟೆ ತಜ್ಞರ ಅಭಿಪ್ರಾಯವಾಗಿದೆ.
ದರ ಇಳಿಕೆ: ಲಾಕ್ಡೌನ್ ಘೊಷಣೆ ಪೂರ್ವ ಒಂದು ತಿಂಗಳಿನಿಂದ ಅಡಕೆಗೆ ಬೇಡಿಕೆ ತಗ್ಗಿತ್ತು. ಲಾಕ್ಡೌನ್ ಜಾರಿಯಾದ ಮೇಲೆ ಹೊರ ರಾಜ್ಯಗಳಿಗೆ ಅಡಕೆ ವಹಿವಾಟು ಆಗುತ್ತಿಲ್ಲ. ಹೊರ ರಾಜ್ಯಗಳಿಗೆ ಹೋಗುತ್ತಿದ್ದ ಅಡಕೆ ಸಾಗಾಟ ವಾಹನಗಳು ಶೆಡ್ನಲ್ಲಿ ನಿಂತಿವೆ. ಇದೇ ವೇಳೆಗೆ, ಪಾನ್ ಮಸಾಲಾ ಕಂಪನಿಗಳು ಕೆಲಸಗಾರರ ಕೊರತೆ, ಸ್ಥಗಿತಗೊಂಡ ಮಾರುಕಟ್ಟೆ, ಬಂದ್ ಆದ ಅಂಗಡಿಗಳ ಕಾರಣ ನೀಡಿ ಖರೀದಿಯನ್ನೇ ಮಾಡುತ್ತಿಲ್ಲ. ವಹಿವಾಟು ನಡೆಯದ ಕಾರಣ ಸ್ಥಳೀಯ ವ್ಯಾಪಾರಸ್ಥರು ಕಡಿಮೆ ದರಕ್ಕೆ ಅಡಕೆ ಖರೀದಿಸುತ್ತಾರೆ. ಏ. 23ರ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ರಾಶಿ ಅಡಕೆ ಕನಿಷ್ಠ 38608 ಗರಿಷ್ಠ 41108 ಇದ್ದುದು, ಏ.26ರಂದು ಕನಿಷ್ಠ 38518- ಗರಿಷ್ಠ 40399 ಕುಸಿತವಾಗಿದೆ. ಚಾಲಿ ಅಡಕೆ ಕೂಡ ಕ್ವಿಂಟಾಲ್ ಒಂದಕ್ಕೆ 36099 ಇದ್ದುದು ಕುಸಿತ ಕಂಡಿದೆ. ಇದು ಅಡಕೆ ಬೆಳೆಗಾರರನ್ನು ಇನ್ನಷ್ಟು ಚಿಂತೆಗೀಡುಮಾಡಿದೆ.
ಲಾಕ್ಡೌನ್ನ ಪರಿಣಾಮ ಅಡಕೆ ಬೆಳೆಗಾರರ ಮೇಲಾಗುವುದು ನಿಶ್ಚಿತ. ಪ್ರಸ್ತುತ ಚಾಲಿ ಹಾಗೂ ಕೆಂಪಡಕೆ ಬೇಡಿಕೆ ಬಹಳಷ್ಟು ತಗ್ಗಿದೆ. ಜತೆಗೆ, ಬೇಡಿಕೆ ಇರುವೆಡೆ ಅಡಕೆ ಸಾಗಾಟ ಕೂಡ ಸಾಧ್ಯವಾಗುತ್ತಿಲ್ಲ. ಕಳೆದ ವರ್ಷ ಏಪ್ರಿಲ್ ತಿಂಗಳ ಈ ವೇಳೆಗೆ ಸಂಸ್ಥೆಯಲ್ಲಿ 5 ಸಾವಿರ ಕ್ವಿಂಟಾಲ್ ಸಂಗ್ರಹವಿತ್ತು. ಆದರೆ ಈ ಬಾರಿ 15 ಸಾವಿರ ಕ್ವಿಂಟಾಲ್ ದಾಸ್ತಾನಿದೆ. ಆದರೂ ಬೆಳೆಗಾರರಿಂದ ಮಾಲು ಖರೀದಿಸಿ ಸಂಗ್ರಹಿಸಿಡಲಾಗುತ್ತಿದೆ. ಸಧ್ಯದ ಮಾರುಕಟ್ಟೆ ವಿಶ್ಲೇಷಿಸಿದರೆ ಚಾಲಿ ಹಾಗೂ ಕೆಂಪಡೆಕೆಗೆ ಕ್ವಿಂಟಾಲ್ ಒಂದಕ್ಕೆ 2ರಿಂದ 3 ಸಾವಿರ ರೂಪಾಯಿ ಇಳಿಯುವ ಸಾಧ್ಯತೆಯಿದೆ. ಲಾಕ್ಡೌನ್ ಸಡಿಲದ ನಂತರ ದರ ಹೆಚ್ಚಬಹುದು ಎಂಬ ವಿಶ್ವಾಸವಿದೆ.| ರವೀಶ ಹೆಗಡೆ ಶಿರಸಿ ಟಿಎಸ್ಎಸ್ ಪ್ರಧಾನ ವ್ಯವಸ್ಥಾಪಕ