ಬನ್ನೇರುಘಟ್ಟ ಕಾಡಂಚಲ್ಲಿ 30ಕ್ಕೂ ಹೆಚ್ಚು ಕಾಡಾನೆಗಳು!; ಸುತ್ತಮುತ್ತಲ ನಿವಾಸಿಗರಲ್ಲಿ ಭಾರಿ ಆತಂಕ..

1127835
Published on

ಆನೇಕಲ್​: ಒಂಟಿ ಸಲಗ ಅಥವಾ ಬೆರಳೆಣಿಕೆಯ ಆನೆಗಳು ಕಾಣಿಸಿಕೊಳ್ಳುತ್ತಿದ್ದ ಆನೇಕಲ್​ ಸುತ್ತಮುತ್ತಲ ಪ್ರದೇಶದಲ್ಲಿ ಇದೇ ಮೊದಲ ಸಲ 30ಕ್ಕೂ ಹೆಚ್ಚು ಕಾಡಾನೆಗಳು ಒಟ್ಟಿಗೇ ಕಾಣಿಸಿಕೊಂಡಿದ್ದು, ಸ್ಥಳೀಯರಲ್ಲಿ ಆತಂಕ ಉಂಟುಮಾಡಿದೆ.

ಆನೇಕಲ್-ಕನಕಪುರ ರಸ್ತೆಯ ತಟ್ಟೆಕೆರೆ ಬಳಿ ಆನೆಗಳ ದೊಡ್ಡ ಹಿಂಡು ರಸ್ತೆ ದಾಟಿರುವ ವಿಡಿಯೋ ದಾರಿಹೋಕರ ಮೊಬೈಲ್​ಫೋನ್​ನಲ್ಲಿ ಸೆರೆಯಾಗಿದ್ದು, ಬಿರುಸಾಗಿ ಕಾಡಾನೆಗಳು ಸಾಗುತ್ತಿರುವ ದೃಶ್ಯ ನಿಜಕ್ಕೂ ಮೈನವಿರೇಳಿಸುವಂತಿದೆ. ಹೀಗೆ ಕಾಡಾನೆಗಳು ಸಾಗುತ್ತಿರುವಾಗ ವಾಹನ ನಿಲ್ಲಿಸಿಕೊಂಡು ವಿಡಿಯೋ ಮಾಡಿಕೊಂಡಿರುವ ಸವಾರರು ಅದನ್ನು ಸ್ನೇಹಿತರೊಂದಿಗೆ ಹಂಚಿಕೊಂಡಿದ್ದಾರೆ.

ಸಾಮಾನ್ಯವಾಗಿ ಈ ಪ್ರದೇಶದಲ್ಲಿ ಆಗಾಗ ಒಂಟಿ ಸಲಗ ಅಥವಾ ಬೆರಳೆಣಿಕೆಯ ಆನೆಗಳು ಕಾಣಿಸಿಕೊಳ್ಳುತ್ತಿದ್ದವು. ಆದರೆ ಇದೇ ಮೊದಲ ಸಲ ಎಂಬಂತೆ ಒಟ್ಟಿಗೆ 30 ಕಾಡಾನೆಗಳು ಹಿಂಡಿನಲ್ಲಿ ಕಾಣಿಸಿಕೊಂಡಿವೆ. ಇದರಲ್ಲಿ ಐದಕ್ಕೂ ಹೆಚ್ಚು ಮರಿಯಾನೆಗಳಿವೆ.

ಆನೆಗಳು ರಾಗಿಹಳ್ಳಿ ಸುತ್ತಮುತ್ತ ಈಗಾಗಲೇ ಬೆಳೆಗಳನ್ನು ಹಾಳುಮಾಡಿವೆ. ಈಗ ಈ ಹಿಂಡು ಮತ್ತಷ್ಟು ಬೆಳೆ ಹಾಳು ಮಾಡಲಿವೆಯೇನೋ ಎಂಬ ಆತಂಕದಲ್ಲಿದ್ದಾರೆ ರೈತರು. ತಮಿಳುನಾಡು ಭಾಗದಿಂದ ಆನೇಕಲ್ ವ್ಯಾಪ್ತಿಯ ಬನ್ನೇರುಘಟ್ಟಕ್ಕೆ ಬಂದಿರುವ ಕಾಡಾನೆಗಳು ಇವಾಗಿರಬಹುದು ಎಂದು ಅಂದಾಜಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net