

ಕಲಬುರಗಿ: ಬಿಡುಗಡೆಯಾದ ದಿನದಿಂದಲೂ ಭಾರಿ ಸದ್ದು ಮಾಡುತ್ತ ಉತ್ತಮ ಪ್ರತಿಕ್ರಿಯೆ ಪಡೆದಿರುವ ದಿ ಕಾಶ್ಮೀರ್ ಫೈಲ್ಸ್ ಚಿತ್ರವನ್ನು ವಿವಿಧ ಕ್ಷೇತ್ರಗಳ ಗಣ್ಯರು ವೀಕ್ಷಿಸಿದ್ದಲ್ಲದೆ, ರಾಜ್ಯ ಸರ್ಕಾರ ಶಾಸಕರನೇಕರು ಕೂಡ ಇಂದು ಅದನ್ನು ನೋಡಲಿದ್ದಾರೆ. ಈ ಮಧ್ಯೆ 30ಕ್ಕೂ ಹೆಚ್ಚು ಮಠಾಧೀಶರು ಕೂಡ ದಿ ಕಾಶ್ಮೀರ್ ಫೈಲ್ಸ್ ಚಿತ್ರ ವೀಕ್ಷಿಸಲು ಮುಂದಾಗಿದ್ದಾರೆ.
ಕಲಬುರಗಿಯಲ್ಲಿ ಸೇಡಂ ಶಾಸಕ, ಬಿಜೆಪಿಯ ರಾಜಕುಮಾರ ಪಾಟೀಲ್ ಮಠಾಧೀಶರಿಗೆಂದೇ 'ದಿ ಕಾಶ್ಮೀರ ಫೈಲ್ಸ್' ಚಿತ್ರದ ಉಚಿತ ವೀಕ್ಷಣೆಗೆ ವ್ಯವಸ್ಥೆ ಮಾಡಿದ್ದಾರೆ. ಸುಮಾರು 30 ಮಠಾಧೀಶರು ಹಾಗೂ ಬಿಜೆಪಿ ಕಾರ್ಯಕರ್ತರು ಈ ಚಿತ್ರವನ್ನು ವೀಕ್ಷಿಸಲಿದ್ದಾರೆ.
ಕಲಬುರಗಿಯ ಮಿರಜ ಚಿತ್ರಮಂದಿರದ ಬಳಿ ವೀಕ್ಷಣೆಗೆಂದು ಆಂದೋಲಾ ಸಿದ್ದಲಿಂಗ ಸ್ವಾಮೀಜಿ ಈಗಾಗಲೇ ಆಗಮಿಸಿದ್ದು, ಪ್ರತಿಯೊಬ್ಬ ಹಿಂದು ಕೂಡ ಈ ಚಿತ್ರವನ್ನು ನೋಡಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ. ನರೇಂದ್ರ ಮೋದಿ ಅವರ ನೇತೃತ್ವದ ಆಡಳಿತ ಕೇಂದ್ರ ಸರ್ಕಾರದಲ್ಲಿ ಬರದೇ ಇದ್ದಿದ್ದರೆ ಈ ಸತ್ಯ ಘಟನೆ ಸಿನಿಮಾ ಆಗಿರುತ್ತಿರಲಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.