

ಬೆಳಗಾವಿ: ಬ್ಯಾಂಕ್ನಿಂದ ಕೋಟಿಗಟ್ಟಲೆ ನಗದು, ಕೆ.ಜಿ.ಗಟ್ಟಲೆ ಚಿನ್ನ ಕದ್ದೊಯ್ದಿದ್ದ ಮೂವರನ್ನು ಘಟನೆ ನಡೆದ ಒಂದೇ ವಾರದೊಳಗೆ ಪೊಲೀಸರು ಪತ್ತೆ ಮಾಡಿ ಬಂಧಿಸಿದ್ದಾರೆ. ಈ ಮೂಲಕ ಬ್ಯಾಂಕ್ ದರೋಡೆ ಪ್ರಕರಣವನ್ನು ಭೇದಿಸಿದಂತಾಗಿದೆ.
ಸವದತ್ತಿ ತಾಲೂಕಿನ ಮುರಗೋಡ ಡಿಸಿಸಿ ಬ್ಯಾಂಕ್ ಕಳ್ಳತನ ಪ್ರಕರಣವನ್ನು ಭೇದಿಸಿರುವ ಜಿಲ್ಲಾ ಪೊಲೀಸರು ಒಂದೇ ವಾರದಲ್ಲಿ ಮೂವರನ್ನು ಬಂಧಿಸಿ, 4.20 ಕೋಟಿ ರೂ. ನಗದು, 3 ಕೆಜಿ ಬಂಗಾರ ಆಭರಣಗಳನ್ನು ಜಪ್ತಿ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ರಾಮದುರ್ಗ ತಾಲೂಕಿನ ತೋರನಗಟ್ಟಿ ಗ್ರಾಮದ ಹಾಗೂ ಮುರಗೋಡ ಡಿಸಿಸಿ ಬ್ಯಾಂಕ್ ಕ್ಲರ್ಕ್ ಬಸವರಾಜ ಹುಣಶಿಕಟ್ಟಿ (30), ಯರಗಟ್ಟಿ ಗ್ರಾಮದ ಸಂತೋಷ ಕಾಳಪ್ಪ ಕಂಬಾರ (31), ಸವದತ್ತಿ ತಾಲೂಕಿನ ಜೀವಾಪುರ ಗ್ರಾಮದ ಗಿರೀಶ ಲಕ್ಷ್ಮಣ ಬೆಳವಲ (26) ಬಂಧಿತರು.
ಮುರಗೋಡ ಡಿಸಿಸಿ ಬ್ಯಾಂಕ್ ಸ್ಟ್ರಾಂಗ್ ರೂಂ, ಲಾಕರ್ಗಳಿಗೆ ನಕಲಿ ಕೀಗಳನ್ನು ಬಳಸಿ 4,37,59,000 ರೂ. ನಗದು ಮತ್ತು 3 ಕೆ.ಜಿ. ತೂಕದ ಚಿನ್ನಾಭರಣ (1,63,72,220 ರೂ. ಮೌಲ್ಯ) ಕಳವಾಗಿದೆ ಎಂದು ಎಂದು ಡಿಸಿಸಿ ಬ್ಯಾಂಕ್ ಮ್ಯಾನೇಜರ್ ಪ್ರಮೋದ ಯಲಿಗಾರ ಮಾ.6ರಂದು ಮುರಗೋಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಎಸ್ಪಿ ಲಕ್ಷ್ಮಣ ನಿಂಬರಗಿ ಮಾ.6ರಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹಾನಿಂಗ ನಂದಗಾಂವಿ, ಡಿಎಸ್ಪಿ ರಾಮನಗೌಡ ಹಟ್ಟಿ ನೇತೃತ್ವದಲ್ಲಿ ತಂಡ ರಚಿಸಿ ತನಿಖೆಗೆ ಆದೇಶಿಸಿದ್ದರು. ಪ್ರಕರಣದ ಬೆನ್ನುಬಿದ್ದ ತನಿಖಾ ತಂಡ ಆರಂಭದಲ್ಲಿ ಎಲ್ಲ ಬ್ಯಾಂಕ್ ಸಿಬ್ಬಂದಿಯನ್ನು ತನಿಖೆಗೆ ಒಳಪಡಿಸಿ ಮಾಹಿತಿ ಪಡೆದುಕೊಂಡಿತ್ತು.
ಈ ಸಂದರ್ಭದಲ್ಲಿ ಅನುಮಾನಾಸ್ಪದ ರೀತಿಯಲ್ಲಿದ್ದ ಬ್ಯಾಂಕ್ ಕ್ಲರ್ಕ್ ಬಸವರಾಜ ಹುಣಶಿಕಟ್ಟಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಮೂವರು ಸೇರಿಕೊಂಡು ಕಳ್ಳತನ ಮಾಡಿರುವ ವಿಷಯ ಬೆಳಕಿಗೆ ಬಂದಿದೆ. ಅಲ್ಲದೆ, ಕಳ್ಳತನ ಮಾಡಿರುವ ನಗದು, ಬಂಗಾರದ ಆಭರಣಗಳನ್ನು ಜಮೀನಿನಲ್ಲಿ ಮುಚ್ಚಿ ಹಾಕಿದ್ದರು. ಇದೀಗ ಕದ್ದ ಮಾಲನ್ನು ವಶಕ್ಕೆ ಪಡೆದು ಬ್ಯಾಂಕ್ಗೆ ಒಪ್ಪಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಐಷಾರಾಮಿ ಜೀವನಕ್ಕಾಗಿ ಕಳ್ಳತನ: ಐಷಾರಾಮಿ ಜೀವನ ನಡೆಸುವ ಉದ್ದೇಶಕ್ಕಾಗಿ ಡಿಸಿಸಿ ಬ್ಯಾಂಕ್ ಕ್ಲರ್ಕ್ ಬಸವರಾಜ ಹುಣಶಿಕಟ್ಟಿ, ಸಂತೋಷ ಕಾಳಪ್ಪ ಕಂಬಾರ, ಗಿರೀಶ ಲಕ್ಷ್ಮಣ ಬೆಳವಲ ಈ ಮೂವರು ಸೇರಿಕೊಂಡು ಸವದತ್ತಿ ತಾಲೂಕಿನ ಮುರಗೋಡ ಡಿಸಿಸಿ ಬ್ಯಾಂಕ್ ಕಳ್ಳತನಕ್ಕೆ ನಾಲ್ಕೈದು ತಿಂಗಳುಗಳಿಂದ ಯೋಜನೆ ಹಾಕಿಕೊಂಡಿದ್ದರು. ಅದರಂತೆ ನಕಲಿ ಕೀಗಳನ್ನು ಬಳಸಿ ಕಳ್ಳತನ ಮಾಡಿದ್ದಾರೆ. ಪ್ರಕರಣದ ತನಿಖೆ ಮುಂದುವರಿಸಲಾಗಿದ್ದು, ಇನ್ನೂ ಯಾರ್ಯಾರು ಇದರ ಹಿಂದೆ ಇದ್ದಾರೆ ಎಂಬ ಕುರಿತು ಮಾಹಿತಿ ಸಂಗ್ರಹಿಸಿಕೊಳ್ಳಲಾಗುತ್ತಿದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.