

ಆನಂದ ಮತ್ತಿಗಟ್ಟಿ ಸವಣೂರ
ನಿರಂತರ ಮಳೆಯಿಂದ ಬೆಳೆ ಹಾನಿಯಾಗಿ ಅಪಾರ ನಷ್ಟ ಅನುಭವಿಸುತ್ತಿರುವ ರೈತ ಸಮುದಾಯ ಇದೀಗ ಜಾನುವಾರುಗಳಿಗೆ ತಗಲಿರುವ ಗಂಟುರೋಗದಿಂದ ಮತ್ತಷ್ಟು ಕಂಗಾಲಾಗಿದೆ. ತಾಲೂಕಿನಲ್ಲಿ 28ಕ್ಕೂ ಹೆಚ್ಚು ಎತ್ತುಗಳು ಈ ರೋಗಕ್ಕೆ ತುತ್ತಾಗಿ ಮೃತಟ್ಟಿವೆ.
ರೋಗ ಹತೋಟಿಗೆ ತರಲು ಸಾವಿರಾರು ರೂಪಾಯಿ ಖರ್ಚು ಮಾಡಿದರೂ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಎತ್ತುಗಳು ಪ್ರತಿನಿತ್ಯ ಸಾವನ್ನಪ್ಪುತ್ತಿವೆ. ತಾಲೂಕಿನ ನಾಯಿಕೆರೂರು ಗ್ರಾಮದಲ್ಲಿ ಕಳೆದ ಮೂರು ದಿನಗಳಲ್ಲಿ ಮೂರು ಎತ್ತುಗಳು ಮೃತಪಟ್ಟಿವೆ.
ಪ್ರಥಮ ಹಂತದಲ್ಲಿ ಕಡಕೋಳ ಗ್ರಾಮದಲ್ಲಿ ಕಂಡು ಬಂದಿದ್ದ ಈ ಗಂಟು ರೋಗ ಈಗ ತಾಲೂಕಿನ ಹತ್ತಾರು ಗ್ರಾಮಗಳಿಗೆ ವ್ಯಾಪ್ತಿಸಿದೆ. ತಾಲೂಕಿನ ನಾಯಿಕೆರೂರಿನಲ್ಲಿ ಸುಮಾರು 250 ಎತ್ತುಗಳಿವೆ. ಅದರಲ್ಲಿ 28 ಎತ್ತುಗಳು ತೀವ್ರ ಗಂಟು ಚರ್ಮರೋಗಕ್ಕೆ ತುತ್ತಾಗಿವೆ. ಗ್ರಾಮದ ನಿಂಗನಗೌಡ ಪಾಟೀಲ, ಅಶೋಕ ಶಿಶುವಿನಹಾಳ ಹಾಗೂ ಈಶ್ವರಪ್ಪ ಮಟ್ಟಿ ಅವರ 90 ಸಾವಿರ ರೂಪಾಯಿ ಮೌಲ್ಯದ ಎತ್ತುಗಳು ಮೃತಪಟ್ಟಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ.
ಸೋಮವಾರದವರೆಗಿನ ಮಾಹಿತಿ ಪ್ರಕಾರ ತಾಲೂಕಿನ 1043 ಜಾನುವಾರುಗಳಿಗೆ ಗಂಟುರೋಗ ತಗುಲಿದೆ. ಇದುವರೆಗೆ 28ಕ್ಕೂ ಹೆಚ್ಚು ಜಾನುವಾರುಗಳು ಮೃತಪಟ್ಟಿವೆ. 211 ಜಾನುವಾರುಗಳು ಚೇತರಿಸಿಕೊಳ್ಳುತ್ತಿವೆ. ಚಿಕಿತ್ಸೆ ಪಡೆಯುತ್ತಿರುವ 809 ಜಾನುವಾರುಗಳ ಸ್ಥಿತಿ ಚಿಂತಾಜನಕವಾಗಿದೆ.
ಜಾನುವಾರುಗಳಿಗೆ ತೀವ್ರವಾಗಿ ತಗಲುತ್ತಿರುವ ಗಂಟುರೋಗಕ್ಕೆ ನಿರ್ದಿಷ್ಟವಾಗಿ ಲಸಿಕೆ ಇಲ್ಲದಿರುವುದು ಪಶು ವೈದ್ಯಾಧಿಕಾರಿಗಳಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ಸರ್ಕಾರ ಈ ಕುರಿತು ಕೂಡಲೇ ಲಸಿಕೆ ಬಿಡುಗಡೆಗೊಳಿಸಿ ರೈತರ ಸಂಕಷ್ಟವನ್ನು ದೂರ ಮಾಡಬೇಕಿದೆ.
ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ. ರವೀಂದ್ರ ಹುಜರತ್ತಿ ನೇತೃತ್ವದಲ್ಲಿ ತಾಲೂಕಿನ 11,208 ಜಾನುವಾರುಗಳಿಗೆ (ಎತ್ತು ಹಾಗೂ ಆಕಳು) ಲಸಿಕೆ ಹಾಕಲಾಗಿದೆ.
ಸೊಳ್ಳೆ, ನೊಣದಿಂದ ಹರಡುವ ರೋಗ
ಸವಣೂರ ಪಟ್ಟಣ ಹಾಗೂ ಹತ್ತಿಮತ್ತೂರ ಹೋಬಳಿ ವ್ಯಾಪ್ತಿಯ ಕಡಕೋಳ, ನಾಯಿಕೆರೂರು, ಹೊನ್ನಿಕೊಪ್ಪ, ಮಂಟಗಣಿ, ಹಿರೇಮೂಗದೂರ, ಸಿದ್ದಾಪುರ, ಕಳಲಕೊಂಡ, ಹುರಳಿಕುಪ್ಪಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಈ ರೋಗದ ಪ್ರಮಾಣ ತೀವ್ರಗೊಂಡಿದೆ. ಗಂಟುರೋಗ ಒಂದು ವೈರಸ್ ಆಗಿದ್ದು, ರಕ್ತ ಹಿರುವ ಸೊಳ್ಳೆ ಮತ್ತು ನೊಣಗಳ ನೇರ ಸಂರ್ಪಕದಿಂದ ಜಾನುವಾರುಗಳಿಗೆ ಮಾರಣಾಂತಿಕ ಸಾಂಕ್ರಾಮಿಕ ರೋಗವಾಗಿ ಪರಿಣಮಿಸಿದೆ. ರೋಗ ಹೊಂದಿರುವ ಜಾನುವಾರುಗಳನ್ನು ಸಂರ್ಪಸುವ ಇತರೆ ಜಾನುವಾರುಗಳಿಗೂ ಈ ರೋಗ ತಗಲುತ್ತಿದೆ.