ಪಟಾಕಿ ಕಿಡಿ ತಾಕಿ 200ಕ್ಕೂ ಅಧಿಕ ಮಂದಿಗೆ ಗಾಯ

Raghu_23_Cracker_Injury_@_Minto_Hospital (2)
Published on

ಬೆಂಗಳೂರು: ಪರಿಸರಸ್ನೇಹಿ ಪಟಾಕಿ ಬಳಕೆ ಹಾಗೂ ಪಟಾಕಿ ಸಿಡಿಸುವಾಗ ಕೈಗೊಳ್ಳಬೇಕಾದ ಎಚ್ಚರಿಕೆ ಕ್ರಮಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಿದ್ದರ ಹೊರತಾಗಿಯೂ, ನಗರದಲ್ಲಿ ಪಟಾಕಿ ಅವಘಡಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಈ ಬಾರಿ ದೀಪಾವಳಿ ಹಬ್ಬದ ಸಂದರ್ಭದಲ್ಲಿನ ಪಟಾಕಿ ಅವಘಡದಿಂದ 200ಕ್ಕೂ ಅಧಿಕ ಮಂದಿ ಕಣ್ಣಿಗೆ ಗಾಯವಾಗಿದೆ. ಹಲವರು ಉಸಿರಾಟದ ತೊಂದರೆ ಹಾಗೂ ಅಲರ್ಜಿಯಂತಹ ಸಮಸ್ಯೆಗಳಿಗೆ ಒಳಗಾಗಿದ್ದಾರೆ.

ಪ್ರತಿ ವರ್ಷದಂತೆ ಈ ಬಾರಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಹಸಿರು ಪಟಾಕಿಗಳ ಬಳಕೆಗೆ ಮಾತ್ರವೇ ಅವಕಾಶ ನೀಡಿ ಸುತ್ತೋಲೆ ಹೊರಡಿಸಿತ್ತು. ಆದಾಗಿಯೂ ಈ ವರ್ಷ ಪಟಾಕಿ ಸಿಡಿತದ ಪ್ರಮಾಣದೊಂದಿಗೆ ಮಾಲಿನ್ಯವೂ ಅಧಿಕವಾಗಿದ್ದು, ಅವಘಡಗಳು ಹೆಚ್ಚು ಸಂಭವಿಸಿವೆ.

ಈ ಬಾರಿ ಮಿಂಟೋ ಆಸ್ಪತ್ರೆಯಲ್ಲಿ 44, ನಾರಾಯಣ ನೇತ್ರಾಲಯದಲ್ಲಿ 93, ನೇತ್ರಧಾಮದಲ್ಲಿ 18, ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ 13, ಶೇಖರ್ ಕಣ್ಣಿನ ಆಸ್ಪತ್ರೆ 13, ಅಗರ್ವಾಲ್ ಆಸ್ಪತ್ರೆಯಲ್ಲಿ 6 ಮಂದಿ ಸೇರಿ ನಗರದ ವಿವಿಧ ಕಣ್ಣಿನ ಆಸ್ಪತ್ರೆಗಳಿಂದ 200ಕ್ಕೂ ಅಧಿಕ ಪಟಾಕಿ ಅವಘಡದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆದುಕೊಂಡಿದ್ದಾರೆ. ಕಳೆದ ವರ್ಷ 180 ಪ್ರಕರಣಗಳು ವರದಿಯಾಗಿತ್ತು. ಮಿಂಟೋ ಆಸ್ಪತ್ರೆಯ 44 ಮಂದಿಯಲ್ಲಿ 35 ಹೊರ ರೋಗಿಗಳಾಗಿ, 9 ಮಂದಿ ಒಳರೋಗಿಗಳಾಗಿ ಚಿಕಿತ್ಸೆ ಪಡೆದಿದ್ದು, ವಿಕ್ಟೋರಿಯಾ ಆವರಣದಲ್ಲಿ ಸುಟ್ಟಗಾಯಗಳ ವಿಭಾಗದಲ್ಲಿ ಐವರು ಚಿಕಿತ್ಸೆ ಪಡೆದುಕೊಂಡಿದ್ದಾರೆ. ನಾರಾಯಣ ನೇತ್ರಾಲಯದಲ್ಲಿ ಚಿಕಿತ್ಸೆ ಪಡೆದ 93 ಮಂದಿಯಲ್ಲಿ 86 ಮಂದಿ ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದಿದ್ದು, 7 ಮಂದಿಗೆ ಶಸಚಿಕಿತ್ಸೆಯ ಅಗತ್ಯವಿದೆ. ಇವರಲ್ಲಿ ಕಾರ್ನಿಯಲ್ ಸವೆತ, ಕಾರ್ನಿಯಲ್ ಛಿದ್ರ, ಎಪಿತೀಲಿಯಲ್ ದೋಷ, ಲೆನ್ಸ್ ಸ್ಥಳಾಂತರದಂತಹ ಚಿಕಿತ್ಸೆಯ ಅಗತ್ಯವಿದೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ಮಕ್ಕಳೇ ಅಧಿಕ

ಪಟಾಕಿ ಸಿಡಿತದಿಂದ ಗಾಯಗೊಂಡವರಲ್ಲಿ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಲಕ್ಷ್ಮೀ ಪಟಾಕಿ, ಬಿಜಲಿ ಪಟಾಕಿ, ಹೂಕುಂಡ ಸಿಡಿತ ಪ್ರಕರಣಗಳೇ ಹೆಚ್ಚು ವರದಿಯಾಗಿದೆ. ಇದಲ್ಲದೆ, ಪಟಾಕಿ ಸಿಡಿತದ ಗಾಯದಿಂದ ಚಿಕಿತ್ಸೆ ಪಡೆದವರಲ್ಲಿ ಅರ್ಧದಷ್ಟು ಮಂದಿ ಪಟಾಕಿ ಸಿಡಿತ ವೀಕ್ಷಿಸುತ್ತಿದ್ದವರು, ಪಾದಚಾರಿಗಳು, ವಾಹನ ಸವಾರರಾಗಿದ್ದಾರೆ. ಇವರು ತಮ್ಮದಲ್ಲದ ತಪ್ಪಿಗೆ ತೊಂದರೆಗೆ ಒಳಗಾಗಿದ್ದಾರೆ.

ಉಸಿರಾಟದ ತೊಂದರೆ

ಪಟಾಕಿ ಸಿಡಿತದಿಂದ ಕಿಡಿ ತಾಗಿ ಗಾಯಮಾಡಿಕೊಂಡವರು ಒಂದೆಡೆಯಾದರೆ, ಪಟಾಕಿ ಸಿಡಿತದಿಂದ ಹೊರಹೊಮ್ಮುವ ರಾಸಾಯನಿಕ ಹೊಗೆಯಿಂದಾಗಿ ಅಲರ್ಜಿ, ಅಸ್ತಮಾ, ಉಸಿರಾಟದ ತೊಂದರೆಯಿಂದ ಬಳಲಿದವರು ಲೆಕ್ಕವಿಲ್ಲ. ಈ ರೀತಿಯ ತೊಂದರೆಗಳಿಂದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದವರೂ ಹಲವರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net