

ಹಾಸನ: ಹೊಯ್ಸಳ ಸ್ಪೋರ್ಟ್ಸ್ ಅಕಾಡೆಮಿ, ಲಿಯೋ ಕ್ಲಬ್ ಹಾಗೂ ಲಯನ್ಸ್ ಕ್ಲಬ್ ಹಾಸನಾಂಬ ಸಹ ಪ್ರಾಯೋಜಕತ್ವದಲ್ಲಿ ಗಣೇಶೋತ್ಸವ ಅಂಗವಾಗಿ ನಗರದ ಸಂಗಮೇಶ್ವರ ಬಡಾವಣೆ, ಜವೇನಹಳ್ಳಿ ಕೆರೆ ಬಳಿ ಇತ್ತೀಚೆಗೆ ಹಮ್ಮಿಕೊಂಡಿದ್ದ 6 ಕಿ.ಮೀ ಮ್ಯಾರಥಾನ್ ಓಟದಲ್ಲಿ ನೂರಾರು ಓಟಗಾರರು ಭಾಗವಹಿಸುವ ಮೂಲಕ ಸ್ಪರ್ಧೆಯನ್ನು ಯಶಸ್ವಿಗೊಳಿಸಿದರು.
ಸುಮಾರು 150 ಕ್ಕೂ ಹೆಚ್ಚು ಕ್ರೀಡಾಪಟುಗಳು ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದು, ಪುರುಷರು, ಮಹಿಳೆಯರು ಹಾಗೂ ಮಕ್ಕಳು ಉತ್ಸಾಹಭರಿತವಾಗಿ ಓಟದಲ್ಲಿ ಪಾಲ್ಗೊಂಡರು. ಸ್ಪರ್ಧೆ ಮೂರು ವಿಭಾಗಗಳಲ್ಲಿ ನಡೆಯಿತು. 16 ವರ್ಷದೊಳಗಿನ, ಓಪನ್, 40 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಸ್ಪರ್ಧೆ ನಡೆಯಿತು.
ಮೊದಲ ಸ್ಥಾನ ಗಳಿಸಿದವರಿಗೆ ಟ್ರೋಫಿ ಹಾಗೂ ನಗದು ಬಹುಮಾನವನ್ನು ಡಿವೈಎಸ್ಪಿ ಮುರಳೀಧರ್ ಹಾಗೂ ಲಯನ್ಸ್ ಕ್ಲಬ್ ಹಾಸನಾಂಬ ಅಧ್ಯಕ್ಷ ಮೋಹನ್ ವಿತರಿಸಿದರು.
ಅಕಾಡೆಮಿಯ ವೇಣುಗೋಪಾಲ್ ಮಾತನಾಡಿ, ಗಣೇಶ ಪ್ರತಿಷ್ಠಾಪನೆ ಅಂಗವಾಗಿ ಸೆ.9ರವರೆಗೆ ವಿವಿಧ ಕ್ರೀಡಾ ಚಟುವಟಿಕೆ ಹಮ್ಮಿಕೊಳ್ಳಲಾಗಿದೆ. ಮ್ಯಾರಥಾನ್ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಮುಂದಿನ ದಿನಗಳಲ್ಲಿ ಚೆಸ್ ಮತ್ತು ಬ್ಯಾಡ್ಮಿಂಟನ್ ಕ್ರೀಡೆಗಳನ್ನು ಆಯೋಜಿಸಲಾಗುವುದು. ಕ್ರೀಡಾ ಮನೋಭಾವ ಬೆಳೆಸಲು ಹಾಗೂ ಯುವಕರಲ್ಲಿ ಸ್ಫೂರ್ತಿ ಮೂಡಿಸಲು ಈ ಕಾರ್ಯಕ್ರಮಗಳು ನೆರವಾಗುತ್ತವೆ ಎಂದು ಹೇಳಿದರು.