

ಬೆಂಗಳೂರು: ಮೇಕೆದಾಟು ಪಾದಯಾತ್ರೆ ಪೊಲೀಸರಿಗೂ ಕರೊನಾ ಸೋಂಕನ್ನು ದಾಟಿಸಿದೆ. ಪರಿಣಾಮವಾಗಿ ವಿವಿಧ ಜಿಲ್ಲೆಗಳ ಪೊಲೀಸರಲ್ಲಿ ಹಲವರಲ್ಲಿ ಸೋಂಕು ದೃಢಪಟ್ಟಿದ್ದು, ಇಲಾಖೆಗೂ ತಲೆನೋವಾಗಿ ಪರಿಣಮಿಸಿದೆ.
ಹೌದು.. ಮೇಕೆದಾಟು ಪಾದಯಾತ್ರೆಯ ಬಂದೋಬಸ್ತ್ಗೆ ತೆರಳಿದ್ದ ನೂರಕ್ಕೂ ಅಧಿಕ ಪೊಲೀಸರು ಕರೊನಾ ಸೋಂಕಿಗೆ ಒಳಗಾಗಿದ್ದಾರೆ. ಅದರಲ್ಲೂ ಪಾದಯಾತ್ರೆಯ ಭದ್ರತೆಗೆ ಎಂದು ತೆರಳಿದ್ದ ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಯ 50ಕ್ಕೂ ಅಧಿಕ ಪೊಲೀಸರಿಗೆ ಸೋಂಕು ತಗುಲಿದೆ. ಮತ್ತೊಂದೆಡೆ ಕೋಲಾರದಿಂದ ತೆರಳಿದ್ದ 60ಕ್ಕೂ ಅಧಿಕ ಪೊಲೀಸರಿಗೂ ಕೋವಿಡ್ ಸೋಂಕು ಅಂಟಿದೆ.
ಇನ್ನೊಂದೆಡೆ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ನ 13ಕ್ಕೂ ಅಧಿಕ ಜನಪ್ರತಿನಿಧಿಗಳು ಕೂಡ ಸೋಂಕಿಗೆ ಒಳಗಾಗಿದ್ದಾರೆ. ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಮಲ್ಲಿಕಾರ್ಜುನ ಖರ್ಗೆ, ಸಿ.ಎಂ. ಇಬ್ರಾಹಿಂ, ಮಾಜಿ ಸಚಿವ ಎಚ್.ಎಂ. ರೇವಣ್ಣ, ಶಾಸಕ ಶಿವಶಂಕರ ರೆಡ್ಡಿ ಸೇರಿ ಹಲವಾರು ಜನಪ್ರತಿನಿಧಿಗಳು ಕೂಡ ಸೋಂಕಿಗೆ ಒಳಗಾಗಿದ್ದಾರೆ.
ಕರೊನಾ ವ್ಯಾಪಿಸುತ್ತಿರುವ ಈ ಸಂದರ್ಭದಲ್ಲಿ ಪಾದಯಾತ್ರೆ ಬೇಡ ಎಂದು ಸರ್ಕಾರ ವಿನಂತಿಸಿಕೊಂಡಿದ್ದರೂ ಅದನ್ನು ಮೀರಿ ಪಾದಯಾತ್ರೆ ಕೈಗೊಂಡಿದ್ದ ಕಾಂಗ್ರೆಸ್ ಈಗ ಈ ಮೂಲಕ ಕರೊನಾತಂಕಕ್ಕೆ ಕಾರಣವಾಗಿದೆ. ಪಾದಯಾತ್ರೆಯಲ್ಲಿ ನೂರಾರು ಪೊಲೀಸರಲ್ಲದೆ ಲಕ್ಷಾಂತರ ಕಾರ್ಯಕರ್ತರು ಕೂಡ ಭಾಗವಹಿಸಿದ್ದರು.
ಹೀಗಾಗಿ ಅದರಲ್ಲಿ ಭಾಗವಹಿಸಿದ್ದ ಮತ್ತಷ್ಟು ಮಂದಿಯಲ್ಲಿ ಸೋಂಕು ಕಾಣಿಸಿಕೊಳ್ಳುವ ಸಾಧ್ಯತೆ ಇದ್ದು, ಪಾದಯಾತ್ರೆ ಕಾರಣದಿಂದಾಗಿಯೇ ಇನ್ನಷ್ಟು ಪ್ರಕರಣಗಳು ಹೆಚ್ಚಾಗುವ ಲಕ್ಷಣಗಳಿವೆ. ಮಾತ್ರವಲ್ಲ ಕರೊನಾ ಸಂಕಷ್ಟದ ಪರಿಸ್ಥಿತಿ ಬಿಗಡಾಯಿಸಿದರೂ ಅಚ್ಚರಿ ಇಲ್ಲ ಎಂಬ ಆತಂಕವೂ ಕಾಡಲಾರಂಭಿಸಿದೆ.