

ಕಾರವಾರ: ಜಿಲ್ಲೆಯ ಯುವ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿ, ನಾಗರೀಕ ಸೇವೆಗಳಿಗೆ ಆಯ್ಕೆಯಾಗಿ, ರಾಜ್ಯ, ದೇಶಗಳ ಅಭಿವೃದ್ಧಿಗೆ ತಮ್ಮ ಸೇವೆ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಯುವಜನ ಮತ್ತು ಕ್ರೀಡಾ ಇಲಾಖೆಯಿಂದ ಜಿಲ್ಲಾ ರಂಗಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ, ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಸತತ ಪ್ರಯತ್ನ, ಕಠಿಣ ಪರಿಶ್ರಮದಿಂದ ಮಾತ್ರ ಉನ್ನತ ಸಾಧನೆಗಳನ್ನು ಮಾಡಲು ಸಾಧ್ಯ. ಜಿಲ್ಲೆಯ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದ ಪುಸ್ತಕಗಳನ್ನು ಹಾಗೂ ವಿವಿಧ ಸೌಲಭ್ಯಗಳನ್ನು ಕಲ್ಪಿಸಲಾಗಿದ್ದು ಅವುಗಳ ಸದುಪಯೋಗ ಪಡೆದುಕೊಂಡು ತಮಗೆ ಸಿಕ್ಕ ಸಮಯವನ್ನು ಬಳಸಿಕೊಂಡು, ಯಶಸ್ವಿಯಾಗಬೇಕು ಎಂದರು.
ಇದನ್ನೂ ಓದಿ:ಕೆಲಸಕ್ಕೆ ತೆರಳಿದ್ದವನಿಗೆ ರೈಲು ಬಡಿದು ಸಾವು
ಕಾರವಾರ ಎಸಿ ಜಯಲಕ್ಷ್ಮಿ ರಾಯ್ಕೊಡ ಮಾತನಾಡಿ , ಬಡತನ, ಕೀಳರಿಮೆ ಅನುಮಾನ, ಅವಮಾನಗಳನ್ನು ಮೆಟ್ಟನಿಲ್ಲುವ ಮೂಲಕ ಶ್ರದ್ಧೆ ಮತ್ತು ಸತತ ಪರಿಶ್ರಮ, ಏಕಾಗ್ರತೆಯಿಂದ ಸಾಗಿದರೆ ಯಶಸ್ಸು ನಿಮ್ಮದಾಗಲಿದೆ ಎಂದರು. ಸಮಾಜ ಮುಖಿ ಕಾರ್ಯದಲ್ಲಿ ತೊಡಗಬೇಕೆಂದರೆ ಹಾಗೂ ಸಮಾಜ ಬದಲಾವಣೆ ಮಾಡಲು ಉನ್ನತ ಸ್ಥಾನದಲ್ಲಿ ಇದ್ದಾಗ ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಮೊಬೈಲ್ ಬಳಕೆ ಮಾಡುವುದನ್ನು ಕಡಿಮೆ ಮಾಡಿ ಓದಿನ ಕಡೆ ಹೆಚ್ಚಿನ ಗಮನಹರಿಸಬೇಕು ಎಂದರು.
ಶಿರಸಿ ಎಸಿ ದೇವರಾಜ ಆರ್, ಕೆಎಎಸ್, ಐಎಎಸ್,ಯುಪಿಎಸ್‌ಸಿ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆ ಬಗ್ಗೆ ಹಾಗೂ ಕಮಾಂಡರ್ ರಾಹುಲ್ ಕುಮಾರ ಪವಾರ, ಮತ್ತು ಲೆಫ್ಟಿನೆಂಟ್ ಕರ್ನಲ್ ದಯಾನಂದ ಮೆಸ್ತಾ ಅವರು ಭಾರತೀಯ ನೌಕಪಡೆಯಲ್ಲಿನ ಉದ್ಯೋಗವಕಾಶಗಳ ಬಗ್ಗೆ ಮಾಹಿತಿ ನೀಡಿದರು.