

ಬೆಂಗಳೂರು: ಕರಾವಳಿ, ಮಲೆನಾಡು ಸೇರಿ ರಾಜ್ಯದ ಹಲವೆಡೆ ಆ.14ರಿಂದ ಮುಂದಿನ 5 ದಿನ ಇನ್ನಷ್ಟು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.
24 ಗಂಟೆ ಅವಧಿಯಲ್ಲಿ ವಿಜಯಪುರದ ಸಿಂದಗಿ 60, ಯಾದಗಿರಿಯ ಗುರುಮಿಟ್ಕಲ್ 60, ಹುನ್ಸಗಿ 50, ಕಲಬುರಗಿಯ ಅ್ಜಲಪುರ 50, ಯಡ್ರಾಮಿ 40, ಉತ್ತರ ಕನ್ನಡದ ಮಂಕಿ 40 ಮತ್ತು ರಾಯಚೂರಿನ ಕುರ್ಡಿ 40 ಮಿಮೀ ಮಳೆ ಬಿದ್ದಿತ್ತು.
ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ಯಾದಗಿರಿ, ವಿಜಯಪುರದಲ್ಲಿ ಆ.14ರಿಂದ ಆ.18ರವರೆಗೆ ಭಾರಿ ಮಳೆ ಸುರಿಯುವ ಸಾಧ್ಯತೆ ಇರುವುದರಿಂದ ಯೆಲ್ಲೋ ಅಲರ್ಟ್ ನೀಡಲಾಗಿದೆ. ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ ಮತ್ತು ವಿಜಯನಗರದಲ್ಲಿ ಆ.15ರಿಂದ ಮುಂದಿನ 2 ದಿನ ಹಾಗೂ ತುಮಕೂರು, ಚಿಕ್ಕಬಳ್ಳಾಪುರ, ಕೋಲಾರದಲ್ಲಿ ಆ.14ರಂದು ಯೆಲ್ಲೋ ಅಲರ್ಟ್ ಕೊಡಲಾಗಿದೆ.
ಬೆಂಗಳೂರಿನಲ್ಲಿ ಮುಂದಿನ 5 ದಿನ ಮೋಡ ಕವಿದ ವಾತಾವರಣದೊಂದಿಗೆ ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ. ಗಂಟೆಗೆ 40 ಕಿ.ಮೀ.ವೇಗದಲ್ಲಿ ಬಿರುಗಾಳಿ ಬೀಸಲಿದ್ದು, ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 28 ಮತ್ತು 21 ಡಿ.ಸೆ. ಇರಲಿದೆ.